
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಮಡುರೊ ದಂಪತಿಯನ್ನು ತಕ್ಷಣ ಬಿಡುಗಡೆ ಮಾಡಿ: ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಚೀನಾದ ವಿದೇಶಾಂಗ ಸಚಿವಾಲಯವು ಹೊರಡಿಸಿರುವ ಅಧಿಕೃತ ಹೇಳಿಕೆಯಲ್ಲಿ, ಅಮೆರಿಕದ ಈ ಕ್ರಮವು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಮೂಲ ತತ್ವಗಳ ನೇರ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕದ ಮಿಲಿಟರಿ ಪಡೆಗಳು ಬಲವಂತವಾಗಿ ಬಂಧಿಸಿರುವುದನ್ನು ಚೀನಾ ಪ್ರಾಬಲ್ಯದ ದಬ್ಬಾಳಿಕೆ ಎಂದು ಕರೆದಿದೆ. ಮಡುರೊ ದಂಪತಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಈ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಸರ್ಕಾರ ಭಾನುವಾರ (ಜ.4) ಅಮೆರಿಕಕ್ಕೆ ಆಗ್ರಹಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯವು ಹೊರಡಿಸಿರುವ ಅಧಿಕೃತ ಹೇಳಿಕೆಯಲ್ಲಿ, ಅಮೆರಿಕದ ಈ ಕ್ರಮವು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಮೂಲ ತತ್ವಗಳ ನೇರ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ. ಸಾರ್ವಭೌಮ ರಾಷ್ಟ್ರವೊಂದರ ಅಧ್ಯಕ್ಷರನ್ನು ಸೇನಾ ಬಲ ಬಳಸಿ ಅಪಹರಿಸಿರುವುದು ಅಂತರಾಷ್ಟ್ರೀಯ ಸಂಬಂಧಗಳ ಎಲ್ಲಾ ಮಿತಿಗಳನ್ನು ಮೀರಿದ ಕೃತ್ಯ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆಯು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರಾಂತ್ಯದ ಶಾಂತಿ ಮತ್ತು ಭದ್ರತೆಗೆ ದೊಡ್ಡ ಬೆದರಿಕೆಯೊಡ್ಡಿದೆ ಎಂದು ಬೀಜಿಂಗ್ ಎಚ್ಚರಿಸಿದೆ.
ಅಮೆರಿಕದ 'ಸೇನಾ ಹಪಹಪಿ'ಗೆ ಚೀನಾ ಆಘಾತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಮೇಲೆ ವೈಮಾನಿಕ ದಾಳಿ ನಡೆಸಿ ಮಡುರೊ ಅವರನ್ನು ಸೆರೆಹಿಡಿದಿರುವುದಾಗಿ ಘೋಷಿಸಿದ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ. "ಒಂದು ಸಾರ್ವಭೌಮ ರಾಷ್ಟ್ರದ ವಿರುದ್ಧ ಅಮೆರಿಕವು ದೌರ್ಜನ್ಯದ ಬಲಪ್ರಯೋಗ ಮಾಡಿರುವುದು ನಮಗೆ ತೀವ್ರ ಆಘಾತ ತಂದಿದೆ. ಇಂತಹ ದಬ್ಬಾಳಿಕೆಯ ನಡವಳಿಕೆಯನ್ನು ಚೀನಾ ಬಲವಾಗಿ ವಿರೋಧಿಸುತ್ತದೆ" ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಚೀನಾಕ್ಕೆ ಬಲವಾದ ಪೆಟ್ಟು
ಮಡುರೊ ಸರ್ಕಾರದ ಪತನ ಮತ್ತು ಅಮೆರಿಕದ ಹಸ್ತಕ್ಷೇಪವು ಚೀನಾಕ್ಕೆ ರಾಜತಾಂತ್ರಿಕ ಹಾಗೂ ಆರ್ಥಿಕವಾಗಿ ದೊಡ್ಡ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಶಕಗಳಿಂದ ಹ್ಯೂಗೋ ಚಾವೆಜ್ ಮತ್ತು ಮಡುರೊ ಅವರೊಂದಿಗೆ ಚೀನಾ ನಿಕಟ ವ್ಯೂಹಾತ್ಮಕ ಸಂಬಂಧವನ್ನು ಹೊಂದಿತ್ತು. ಲ್ಯಾಟಿನ್ ಅಮೆರಿಕದಲ್ಲಿ ಅಮೆರಿಕದ ಪ್ರಭಾವವನ್ನು ತಗ್ಗಿಸಲು ವೆನೆಜುವೆಲಾ ಚೀನಾಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿತ್ತು.
ವೆನೆಜುವೆಲಾದ ಮೇಲೆ ಅಮೆರಿಕದ ಕಠಿಣ ನಿರ್ಬಂಧಗಳಿದ್ದರೂ, ಚೀನಾ ಅಲ್ಲಿನ ತೈಲದ ಪ್ರಮುಖ ಖರೀದಿದಾರ ರಾಷ್ಟ್ರವಾಗಿತ್ತು. ಅಲ್ಲದೆ, ಚೀನಾವು ವೆನೆಜುವೆಲಾಕ್ಕೆ ಸಾವಿರಾರು ಕೋಟಿ ಡಾಲರ್ ಸಾಲವನ್ನು ನೀಡಿದ್ದು, ಅಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ಈಗ ಮಡುರೊ ಸರ್ಕಾರ ಪತನವಾಗಿ ಅಮೆರಿಕದ ಪರವಾದ ಆಡಳಿತ ಬಂದರೆ, ಚೀನಾದ ಈ ಬೃಹತ್ ಹೂಡಿಕೆಗಳು ಮತ್ತು ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಬೀಜಿಂಗ್‌ನ ಆತಂಕಕ್ಕೆ ಮುಖ್ಯ ಕಾರಣವಾಗಿದೆ.

