
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ
ಟ್ರಂಪ್ ಸರ್ಕಾರದ ವೆನೆಜುವೆಲಾ ನೀತಿಗೆ ಡೆಮೋಕ್ರಾಟ್ ನಾಯಕರ ತೀವ್ರ ವಿರೋಧ
ನ್ಯೂಯಾರ್ಕ್ ನಗರದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಟ್ರಂಪ್ ಅವರ ಈ ನಡೆಯನ್ನು "ಯುದ್ಧದ ಕೃತ್ಯ" ಎಂದು ಕರೆದಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಅಮೆರಿಕದ ಪಡೆಗಳು ಬಂಧಿಸಿರುವುದು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಅಮೆರಿಕದ ಒಳಗಡೆಯೇ ಇರುವ ಡೆಮೋಕ್ರಾಟ್ ಪಕ್ಷದ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಸಾರ್ವಭೌಮ ರಾಷ್ಟ್ರವೊಂದರ ಮೇಲೆ ನಡೆಸಲಾದ ಈ ದಾಳಿಯು ಕಾನೂನುಬಾಹಿರ ಮತ್ತು ಅಧಿಕಾರ ದುರುಪಯೋಗ ಎಂದು ಅವರು ಬಣ್ಣಿಸಿದ್ದಾರೆ.
ನ್ಯೂಯಾರ್ಕ್ ನಗರದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಟ್ರಂಪ್ ಅವರ ಈ ನಡೆಯನ್ನು "ಯುದ್ಧದ ಕೃತ್ಯ" ಎಂದು ಕರೆದಿದ್ದಾರೆ. ಮಡುರೊ ದಂಪತಿಯನ್ನು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕರೆತರಲಾಗಿದ್ದು, ಈ ಕುರಿತು ಮಮ್ದಾನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವೂ ಕೂಡ ಟ್ರಂಪ್ ಅವರೊಂದಿಗೆ ನೇರವಾಗಿ ಮಾತನಾಡಿ ತಮ್ಮ ವಿರೋಧವನ್ನು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಇಂತಹ ಏಕಪಕ್ಷೀಯ ಆಡಳಿತ ಬದಲಾವಣೆಯ ಪ್ರಯತ್ನಗಳು ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಸಾವಿರಾರು ವೆನೆಜುವೆಲಾ ನಾಗರಿಕರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಮಮ್ದಾನಿ ಎಚ್ಚರಿಸಿದ್ದಾರೆ.
ವಿಶ್ವದ ಪೋಲೀಸ್‌ನಿಂದ ವಿಶ್ವದ ಗುಂಡಾಗಿರಿಯತ್ತ ಅಮೆರಿಕ
ಅರಿಜೋನಾದ ಸೆನೆಟರ್ ರೂಬೆನ್ ಗಲ್ಲೆಗೊ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ವಿರುದ್ಧ ಕಿಡಿಕಾರಿದ್ದು, ಅಮೆರಿಕವು ಕೇವಲ ಒಂದು ವರ್ಷದ ಅವಧಿಯಲ್ಲಿ 'ವಿಶ್ವದ ಪೋಲೀಸ್' ಸ್ಥಾನದಿಂದ 'ವಿಶ್ವದ ಗೂಂಡಾ' ಅಥವಾ ದಬ್ಬಾಳಿಕೆಗಾರನ ಸ್ಥಾನಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಬರೆದಿದ್ದಾರೆ. ವೆನೆಜುವೆಲಾದೊಂದಿಗೆ ಯುದ್ಧ ಮಾಡುವ ಅನಿವಾರ್ಯತೆ ಅಮೆರಿಕಕ್ಕೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂಸತ್ತಿನ ಗುಪ್ತಚರ ಸಮಿತಿಯ ಹಿರಿಯ ಸದಸ್ಯ ರಾಜಾ ಕೃಷ್ಣಮೂರ್ತಿ ಅವರು ಮಾತನಾಡಿ, ಮಡುರೊ ಸರ್ವಾಧಿಕಾರಿಯಾಗಿದ್ದರೂ, ಕಾಂಗ್ರೆಸ್‌ನ ಅನುಮತಿ ಪಡೆಯದೆ ಮಿಲಿಟರಿ ಶಕ್ತಿಯನ್ನು ಬಳಸಿರುವುದು ಸಂವಿಧಾನ ವಿರೋಧಿ ಮತ್ತು ಅಧ್ಯಕ್ಷೀಯ ಅಧಿಕಾರದ ಅತಿರೇಕದ ದುರುಪಯೋಗ ಎಂದು ಟೀಕಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮತ್ತು ಖಂಡನೆ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಈ ಬೆಳವಣಿಗೆಯನ್ನು "ಅಪಾಯಕಾರಿ ಮುನ್ಸೂಚನೆ" ಎಂದು ಕರೆದಿದ್ದಾರೆ. ಅಂತರಾಷ್ಟ್ರೀಯ ಕಾನೂನುಗಳನ್ನು ಗೌರವಿಸದೆ ನಡೆಸಿರುವ ಈ ಕಾರ್ಯಾಚರಣೆಯು ಲ್ಯಾಟಿನ್ ಅಮೆರಿಕ ಪ್ರಾಂತ್ಯದಲ್ಲಿ ಅಸ್ಥಿರತೆಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾ ಮತ್ತು ರಷ್ಯಾ ದೇಶಗಳು ಈ ದಾಳಿಯನ್ನು "ಹೇಗೆಮೋನಿಕ್ ಆಕ್ಟ್ಸ್" ಅಥವಾ ಪ್ರಾಬಲ್ಯ ಸ್ಥಾಪನೆಯ ಹಪಾಹಪಿ ಎಂದು ಕರೆದು ಕಟುವಾಗಿ ಖಂಡಿಸಿವೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಅವರು ಮಾತನಾಡಿ, ಇದು ವೆನೆಜುವೆಲಾದ ಸಾರ್ವಭೌಮತ್ವಕ್ಕೆ ಎಸಗಿದ ಅಪಚಾರವಾಗಿದ್ದು, ವಿಶ್ವದಾದ್ಯಂತ ಹಿಂಸೆ ಮತ್ತು ಅಸ್ಥಿರತೆಗೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಅವರ 'ಪಶ್ಚಿಮ ಗೋಲಾರ್ಧ'ದ ಪಾರಮ್ಯ ನೀತಿ
ಡೊನಾಲ್ಡ್ ಟ್ರಂಪ್ ಅವರು ಕಳೆದ ಜೂನ್ ತಿಂಗಳಿನಲ್ಲಿ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದರು. ಈಗ ವೆನೆಜುವೆಲಾದಲ್ಲಿ ಮಡುರೊ ಅವರನ್ನು ಸೆರೆಹಿಡಿಯುವ ಮೂಲಕ ತಮ್ಮ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಘೋಷಿಸಿದ್ದ "ಪಶ್ಚಿಮ ಗೋಲಾರ್ಧದಲ್ಲಿ ಅಮೆರಿಕದ ಪಾರಮ್ಯ"ವನ್ನು ಸಾಬೀತುಪಡಿಸಲು ಹೊರಟಿದ್ದಾರೆ. ಆದರೆ, ಮಡುರೊ ಅವರ ನಿರ್ಗಮನದ ನಂತರ ವೆನೆಜುವೆಲಾದಲ್ಲಿ ಉಂಟಾಗುವ ರಾಜಕೀಯ ಶೂನ್ಯವನ್ನು ಯಾರು ತುಂಬುತ್ತಾರೆ ಮತ್ತು ಅಲ್ಲಿನ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕದ ನಿಯಂತ್ರಣ ಹೇಗಿರಲಿದೆ ಎಂಬ ಪ್ರಶ್ನೆಗಳು ಈಗ ಎದುರಾಗಿವೆ. ಅಲ್ಲದೆ, ಈ ನಡೆಯು ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳಿಗೆ ತಮ್ಮ ನೆರೆಹೊರೆಯಲ್ಲಿ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ನೀಡುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

