
ಭಾರತ-ಪಾಕ್ ಯುದ್ಧ ನಿಲ್ಲಿಸಿದರೆ ರಿಕಿ ಗಿಲ್? ಟ್ರಂಪ್ ಸರ್ಕಾರದಿಂದ ಅತ್ಯುನ್ನತ ಪ್ರಶಸ್ತಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಮಾತುಕತೆಯಲ್ಲಿ ಪಾತ್ರ ವಹಿಸಿದ ಆರೋಪದ ಮೇಲೆ ಭಾರತೀಯ ಮೂಲದ ರಿಕಿ ಗಿಲ್‌ಗೆ ಅಮೆರಿಕದ NSC ಪ್ರಶಸ್ತಿ ನೀಡಲಾಗಿದೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ವಾತಾವರಣವನ್ನು ಶಮನಗೊಳಿಸಿ ಕದನ ವಿರಾಮ ಘೋಷಿಸುವಲ್ಲಿ ತಾವು ಮಹತ್ವದ ಪಾತ್ರ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಲೇ ಬಂದಿದ್ದಾರೆ. ಟ್ರಂಪ್ ವಾದವನ್ನು ಭಾರತ ನಿರಾಕರಿಸುತ್ತಾ ಬಂದಿದ್ದರೂ ಟ್ರಂಪ್ ಮಾತ್ರ ತಮ್ಮನ್ನು ಶಾಂತಿದೂತ ಎಂಬುದನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ವಾದಕ್ಕೆ ಪುಷ್ಟಿ ನೀಡುವಂತೆ, ಅಮೆರಿಕ ಸರ್ಕಾರ ಭಾರತೀಯ ಮೂಲದ ಸಲಹೆಗಾರ ರಿಕಿ ಗಿಲ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಭದ್ರತಾ ಮಂಡಳಿಯ (NSC) ದಕ್ಷಿಣ ಮತ್ತು ಮಧ್ಯ ಏಷ್ಯಾದ ಹಿರಿಯ ನಿರ್ದೇಶಕ ರಂಜಿತ್ ‘ರಿಕಿ’ ಸಿಂಗ್ ಗಿಲ್ ಅವರಿಗೆ ಇತ್ತೀಚೆಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು 'NSC ಡಿಸ್ಟಿಂಗ್ವಿಶ್ಡ್ ಆಕ್ಷನ್ ಅವಾರ್ಡ್' ನೀಡಿ ಗೌರವಿಸಿದರು. ಆದರೆ, ಕದನ ವಿರಾಮ ಮಾತುಕತೆಯಲ್ಲಿ ಗಿಲ್ ಅವರ ನಿಖರ ಪಾತ್ರದ ಬಗ್ಗೆ ಟ್ರಂಪ್ ಆಡಳಿತವು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಯಾರು ಈ ರಿಕಿ ಗಿಲ್?
37 ವರ್ಷದ ರಿಕಿ ಗಿಲ್ ಮೂಲತಃ ಪಂಜಾಬಿ ಸಿಖ್ ಕುಟುಂಬದವರಾಗಿದ್ದು, ನ್ಯೂಜೆರ್ಸಿಯ ಲೋಡಿಯಲ್ಲಿ ಜನಿಸಿದರು. ಇವರ ಪೋಷಕರು ವೈದ್ಯರು. ಇವರು ಟ್ರಂಪ್ ಅವರ ಎರಡನೇ ಅವಧಿಯ ಪ್ರಮುಖ ಸಲಹಾ ಮಂಡಳಿಯಲ್ಲಿರುವ ಕೇವಲ ಮೂವರು ಭಾರತೀಯ ಮೂಲದ ಅಮೆರಿಕನ್ನರಲ್ಲಿ ಒಬ್ಬರು. ಈ ಹಿಂದೆ ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಷ್ಯಾ ಮತ್ತು ಯುರೋಪಿಯನ್ ಇಂಧನ ಭದ್ರತೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 17ನೇ ವಯಸ್ಸಿನಲ್ಲೇ ಕ್ಯಾಲಿಫೋರ್ನಿಯಾ ರಾಜ್ಯ ಶಿಕ್ಷಣ ಮಂಡಳಿಯ ಸದಸ್ಯರಾಗಿ ನೇಮಕಗೊಳ್ಳುವ ಮೂಲಕ ಇವರು ಸುದ್ದಿಯಾಗಿದ್ದರು.
ಭಾರತದಿಂದ ತೀವ್ರ ವಿರೋಧ
ಅಮೆರಿಕದ ಈ ನಡೆಯು ಭಾರತದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಮೊದಲಿನಿಂದಲೂ ನಿರಾಕರಿಸುತ್ತಾ ಬಂದಿದೆ. ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಲ್ ಸಿಬಲ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, "ಭಾರತವು ಅಮೆರಿಕದ ಪಾತ್ರವನ್ನು ನಿರಾಕರಿಸುತ್ತಿರುವಾಗ, ಇಂತಹ ಕಾಲ್ಪನಿಕ ಹಕ್ಕುಗಳನ್ನು ಪ್ರಚಾರ ಮಾಡುವುದು ಕೇವಲ ಭಾರತವನ್ನು ಕೆರಳಿಸುವ ಉದ್ದೇಶವನ್ನು ಹೊಂದಿದೆ" ಎಂದು ಟೀಕಿಸಿದ್ದಾರೆ.
ಮತ್ತೆ ಹಳೆ ರಾಗ ಹಾಡಿದ ಟ್ರಂಪ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಟ್ರಂಪ್, ತಾವು ವಿಶ್ವದ ಎಂಟು ಯುದ್ಧಗಳನ್ನು ನಿಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ವ್ಯಾಪಾರ ಮತ್ತು ಸುಂಕದ ಬೆದರಿಕೆ ಹಾಕುವ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟವನ್ನು ಅಂತ್ಯಗೊಳಿಸಿದೆ. ಆದರೆ ನನಗೆ ಅದಕ್ಕೆ ಸಲ್ಲಬೇಕಾದ ಮನ್ನಣೆ ಸಿಗುತ್ತಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮೇ 7 ರಂದು ಪಾಕಿಸ್ತಾನದ ವಿರುದ್ಧ 'ಆಪರೇಷನ್ ಸಿಂದೂರ್' ನಡೆಸಿತ್ತು. ತೀವ್ರ ದಾಳಿಗಳ ನಂತರ ಮೇ 10 ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಈ ಶಾಂತಿ ಸ್ಥಾಪನೆಯಲ್ಲಿ ತಮ್ಮ ಪಾತ್ರವಿದೆ ಎಂದು ಟ್ರಂಪ್ 70ಕ್ಕೂ ಹೆಚ್ಚು ಬಾರಿ ಪ್ರತಿಪಾದಿಸಿದ್ದಾರೆ.

