
ವೆನೆಜುವೆಲಾ ಮೇಲೆ ಅಮೆರಿಕ ದಾಳಿ- ಸರಣಿ ಬಾಂಬ್ ಸ್ಫೋಟ- ಎಮರ್ಜೆನ್ಸಿ ಘೋಷಣೆ!
ವೆನೆಜುವೆಲಾ ರಾಜಧಾನಿ ಕರಾಕಸ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಅಮೆರಿಕದ ಮೇಲೆ ಮಿಲಿಟರಿ ಆಕ್ರಮಣದ ಆರೋಪ ಹೊರಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯ ಬೆನ್ನಲ್ಲೇ ಈ ದಾಳಿ ನಡೆದಿದೆ.
ವೆನೆಜುವೆಲಾದ ರಾಜಧಾನಿ ಕರಾಕಸ್‌ನಲ್ಲಿ ಶನಿವಾರ (ಜನವರಿ 3) ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಕನಿಷ್ಠ ಏಳು ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಯುದ್ಧ ವಿಮಾನಗಳು ಹಾರಾಡುತ್ತಿರುವುದು ಕಂಡುಬಂದಿದ್ದು, ಇಡೀ ನಗರದ ಜನರು ಆತಂಕಕ್ಕೀಡು ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಮೇಲೆ ಭೀಕರ ದಾಳಿ ನಡೆಸುವ ಸುಳಿವು ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
‘ಅಮೆರಿಕದ ಮಿಲಿಟರಿ ಆಕ್ರಮಣ’: ಮಡುರೋ ಆಕ್ರೋಶ
ಈ ಬೆಳವಣಿಗೆಯನ್ನು "ಅಮೆರಿಕದ ಮಿಲಿಟರಿ ಆಕ್ರಮಣ" ಎಂದು ಕರೆದಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ, ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. "ಅಮೆರಿಕವು ವೆನೆಜುವೆಲಾದ ತೈಲ ಸಂಪತ್ತು ಮತ್ತು ಖನಿಜಗಳನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಿದೆ. ಇದು ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ" ಎಂದು ವೆನೆಜುವೆಲಾ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದಾಳಿಯ ಭೀಕರ ದೃಶ್ಯ
ಟ್ರಂಪ್ ನೀಡಿದ ಸುಳಿವು ಏನು?
ಸೋಮವಾರವಷ್ಟೇ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾದಕವಸ್ತು ಸಾಗಣೆಗೆ ಬಳಸಲಾಗುತ್ತಿದ್ದ ವೆನೆಜುವೆಲಾದ ಕರಾವಳಿ ಡಾಕಿಂಗ್ ಕೇಂದ್ರವನ್ನು ಅಮೆರಿಕ ಧ್ವಂಸಗೊಳಿಸಿದೆ ಎಂದು ಹೇಳಿದ್ದರು. ಇದು ವೆನೆಜುವೆಲಾ ಭೂಪ್ರದೇಶದ ಮೇಲೆ ಅಮೆರಿಕ ನಡೆಸಿದ ಮೊದಲ ನೇರ ದಾಳಿ ಎಂದು ಹೇಳಲಾಗುತ್ತಿದೆ. ಈ ಕಾರ್ಯಾಚರಣೆಯನ್ನು ಅಮೆರಿಕ ಸೇನೆ ನಡೆಸಿದೆಯೇ ಅಥವಾ ಸಿಐಎ (CIA) ನಡೆಸಿದೆಯೇ ಎಂಬ ಬಗ್ಗೆ ಟ್ರಂಪ್ ವಿವರ ನೀಡಿಲ್ಲ.
ಸಂಘರ್ಷಕ್ಕೆ ಅಸಲಿ ಕಾರಣವೇನು?
ಮಾದಕವಸ್ತು ಸಾಗಣೆ ಆರೋಪ: ವೆನೆಜುವೆಲಾ ಸರ್ಕಾರವು ಡ್ರಗ್ ಕಾರ್ಟೆಲ್ ನಡೆಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಅಮೆರಿಕದ ನೌಕಾಪಡೆಗಳು ಸಮುದ್ರದಲ್ಲಿ 30ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದು, ಸುಮಾರು 107 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ತೈಲ ಸಂಪತ್ತಿನ ಮೇಲೆ ಕಣ್ಣು: ಅಮೆರಿಕವು ತನ್ನನ್ನು ಅಧಿಕಾರದಿಂದ ಕೆಳಗಿಳಿಸಿ, ವೆನೆಜುವೆಲಾದಲ್ಲಿರುವ ವಿಶ್ವದ ಬೃಹತ್ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳಲು ಈ ನಾಟಕವಾಡುತ್ತಿದೆ ಎಂಬುದು ಅಧ್ಯಕ್ಷ ಮಡುರೋ ಅವರ ಗಂಭೀರ ಆರೋಪವಾಗಿದೆ.
ಪ್ರಸ್ತುತ ಅಮೆರಿಕವು ವೆನೆಜುವೆಲಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಅದರ ವಾಯುಪ್ರದೇಶವನ್ನು ಅನಧಿಕೃತವಾಗಿ ಮುಚ್ಚಿದೆ. ಈ ಹಠಾತ್ ದಾಳಿಗಳಿಂದಾಗಿ ದಕ್ಷಿಣ ಅಮೆರಿಕಾದಲ್ಲಿ ಯುದ್ಧದ ಭೀತಿ ಎದುರಾಗಿದೆ.

