
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಭಾರತ ಮೌನ, ಪ್ರಜೆಗಳಿಗೆ ಎಚ್ಚರಿಕೆ
ಅಮೆರಿಕದ ಈ ದಿಢೀರ್ ಸೇನಾ ಕ್ರಮದ ಬಗ್ಗೆ ಭಾರತವು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಜಾಗತಿಕ ಮಟ್ಟದಲ್ಲಿ ಇದು ಅಪಾಯಕಾರಿ ಮುನ್ಸೂಚನೆ ಎಂದು ಆಯಕಟ್ಟಿನ ತಜ್ಞರು ಎಚ್ಚರಿಸಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆಯು ಕಾರ್ಯಾಚರಣೆಯ ಮೂಲಕ ಬಂಧಿಸಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಪ್ರಯಾಣ ಸಲಹೆ ನೀಡಿದೆ. ವೆನೆಜುವೆಲಾದಲ್ಲಿರುವ ಭಾರತೀಯರು ಅತ್ಯಂತ ಜಾಗರೂಕತೆಯಿಂದ ಇರಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಮೆರಿಕದ ಈ ದಿಢೀರ್ ಸೇನಾ ಕ್ರಮದ ಬಗ್ಗೆ ಭಾರತವು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಜಾಗತಿಕ ಮಟ್ಟದಲ್ಲಿ ಇದು ಅಪಾಯಕಾರಿ ಮುನ್ಸೂಚನೆ ಎಂದು ಆಯಕಟ್ಟಿನ ತಜ್ಞರು ಎಚ್ಚರಿಸಿದ್ದಾರೆ.
ಭಾರತೀಯರಿಗೆ ಕಟ್ಟುನಿಟ್ಟಿನ ಸೂಚನೆ
ವೆನೆಜುವೆಲಾದಲ್ಲಿ ಪ್ರಸ್ತುತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ, ಅಲ್ಲಿರುವ ಸುಮಾರು 50 ಅನಿವಾಸಿ ಭಾರತೀಯರು ಮತ್ತು 30 ಭಾರತೀಯ ಮೂಲದ ವ್ಯಕ್ತಿಗಳು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಭಾರತ ಹೇಳಿದೆ. ವೆನೆಜುವೆಲಾಗೆ ಕೈಗೊಳ್ಳುವ ಎಲ್ಲಾ ಅನಗತ್ಯ ಪ್ರಯಾಣಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಹಾಗೂ ಈಗಾಗಲೇ ಅಲ್ಲಿರುವವರು ತಮ್ಮ ಪ್ರಯಾಣವನ್ನು ಸೀಮಿತಗೊಳಿಸಿ, ಕಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ಸೂಚನೆ ನೀಡಿದೆ. ತುರ್ತು ಸಂದರ್ಭಗಳಿಗಾಗಿ ರಾಯಭಾರ ಕಚೇರಿಯ ವಾಟ್ಸಾಪ್ ಸಂಖ್ಯೆ (+58-412-9584288) ಅಥವಾ ಇಮೇಲ್ (cons.caracas@mea.gov.in) ಮೂಲಕ ಸಂಪರ್ಕಿಸಲು ಸೂಚಿಸಲಾಗಿದೆ.
ಅಮೆರಿಕದ ಈ ನಡೆಯ ಹಿಂದಿನ ಕಾರಣವೇನು?
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ನಿಕೋಲಸ್ ಮಡುರೊ ಮೇಲೆ ಮಾದಕ ವಸ್ತುಗಳ ಕಳ್ಳಸಾಗಾಟ ಗಂಭೀರ ಆರೋಪ ಹೊರಿಸಿದೆ. ಕಾರಕಾಸ್ ಮೇಲೆ ದಾಳಿ ನಡೆಸಿ ಮಡುರೊ ದಂಪತಿಯನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿದೆ. "ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಮೆರಿಕವೇ ವೆನೆಜುವೆಲಾವನ್ನು ಮುನ್ನಡೆಸಲಿದೆ" ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಕ್ರಮವು ಅಮೆರಿಕದ ಸಾರ್ವಭೌಮತ್ವಕ್ಕೆ ಧಕ್ಕೆ ತರುವವರಿಗೆ ಒಂದು ಎಚ್ಚರಿಕೆ ಎಂದು ಅವರು ಹೇಳಿದ್ದಾರೆ. .
ತಜ್ಞರ ಆತಂಕ: 'ಇದು ಕೆಟ್ಟ ಸಂಪ್ರದಾಯ'
ಅಮೆರಿಕದ ಈ ನಡವಳಿಕೆಯನ್ನು ರಷ್ಯಾ ಮತ್ತು ಚೀನಾ ತೀವ್ರವಾಗಿ ಖಂಡಿಸಿವೆ. ಭಾರತೀಯ ರಾಜತಾಂತ್ರಿಕ ತಜ್ಞರು ಸಹ ಇದೊಂದು "ಅಪಾಯಕಾರಿ ಬೆಳವಣಿಗೆ" ಎಂದು ಕರೆದಿದ್ದಾರೆ. "ಇದು ನಂಬಲಾಗದ ಘಟನೆ. ಇತ್ತೀಚಿನ ಇತಿಹಾಸದಲ್ಲಿ ಇಂತಹ ಉದಾಹರಣೆಗಳಿಲ್ಲ. ಅಂತರಾಷ್ಟ್ರೀಯ ಕಾನೂನು ಅಥವಾ ಸಾರ್ವಭೌಮತ್ವಕ್ಕೆ ಬೆಲೆ ನೀಡದೆ ಮತ್ತೊಂದು ದೇಶದ ಅಧ್ಯಕ್ಷರನ್ನು ಎತ್ತಿಕೊಂಡು ಹೋಗುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ನಾಳೆ ಬೇರೆ ದೇಶಗಳೂ ಇದನ್ನೇ ಪಾಲಿಸಬಹುದು, ರಾಜೀವ್ ಡೋಗ್ರಾ (ಮಾಜಿ ರಾಜತಾಂತ್ರಿಕರು) ಆತಂಕ ವ್ಯಕ್ತಪಡಿಸಿದ್ದಾರೆ.
ಮಡುರೊ ಸರ್ವಾಧಿಕಾರಿಯಾಗಿದ್ದಿರಬಹುದು ಅಥವಾ ಅವರ ಮೇಲೆ ಗಂಭೀರ ಆರೋಪಗಳಿರಬಹುದು. ಆದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕ ಅನುಸರಿಸಿದ ಈ ಹಾದಿ ಜಾಗತಿಕ ಅಸ್ಥಿರತೆಗೆ ಕಾರಣವಾಗಬಹುದು ವೆನೆಜುವೆಲಾದ ಮಾಜಿ ಭಾರತೀಯ ರಾಯಭಾರಿ ದೀಪಕ್ ಭೋಜ್ವಾನಿ ಎಂದು ಹೇಳಿದ್ದಾರೆ.
"ಟ್ರಂಪ್ ಆಡಳಿತವು ಅತ್ಯಂತ ಆಕ್ರಮಣಕಾರಿ ಹೆಜ್ಜೆ ಇಟ್ಟಿದೆ. ವೆನೆಜುವೆಲಾ ಅಮೆರಿಕಕ್ಕೆ ಸರಿಸಮಾನವಾದ ಮಿಲಿಟರಿ ಶಕ್ತಿಯನ್ನೇನೂ ಹೊಂದಿಲ್ಲ. ಆದರೂ ಇಂತಹ ಬಲಪ್ರಯೋಗ ಮಾಡುವುದು ಅಪಾಯಕಾರಿ," ಬ್ರಿಗೇಡಿಯರ್ ರಾಹುಲ್ ಕೆ ಬೋನ್ಸ್ಲೆ (ನಿವೃತ್ತ) ಎಂದು ಹೇಳಿದ್ದಾರೆ.
ರಷ್ಯಾ, ಇರಾನ್ ಈ ದಾಳಿಯನ್ನು ಖಂಡಿಸಿದ್ದರೆ, ಯುರೋಪಿಯನ್ ಯೂನಿಯನ್ ಮತ್ತು ಉಕ್ರೇನ್ ಅಮೆರಿಕದ ಕ್ರಮಕ್ಕೆ ಬೆಂಬಲ ಸೂಚಿಸಿವೆ. ಒಟ್ಟಾರೆಯಾಗಿ, ಟ್ರಂಪ್ ಅವರ ಎರಡನೇ ಅವಧಿಯ ಆರಂಭದಲ್ಲೇ ಜಾಗತಿಕ ರಾಜಕೀಯ ವ್ಯವಸ್ಥೆಯು ತಲ್ಲಣಗೊಂಡಿದೆ.

