
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅಮೆರಿಕ ಸೇನೆಯ ವಶಕ್ಕೆ; ಟ್ರಂಪ್ ಘೋಷಣೆ!
ಅಧ್ಯಕ್ಷರ ಬಂಧನದ ಸುದ್ದಿಯ ಬೆನ್ನಲ್ಲೇ ವೆನೆಜುವೆಲಾ ರಕ್ಷಣಾ ಸಚಿವ ವ್ಲಾಡಿಮಿರ್ ಪಾಡ್ರಿನೋ ಲೋಪೆಜ್, ದೇಶಾದ್ಯಂತ ಸೈನ್ಯವನ್ನು ನಿಯೋಜಿಸಲು ಆದೇಶಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಸ್ಫೋಟಕ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ವೆನೆಜುವೆಲಾ ಮೇಲೆ ಬೃಹತ್ ವೈಮಾನಿಕ ದಾಳಿ ನಡೆಸಿದ ಅಮೆರಿಕದ ವಿಶೇಷ ಪಡೆಗಳು, ಆ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆತಂದಿವೆ ಎಂದು ಟ್ರಂಪ್ ಘೋಷಿಸಿದ್ದಾರೆ.
ತಮ್ಮ 'ಟ್ರುತ್ ಸೋಶಿಯಲ್' (Truth Social) ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, "ಅಮೆರಿಕದ ಪಡೆಗಳು ವೆನೆಜುವೆಲಾ ಮತ್ತು ಅದರ ನಾಯಕ ನಿಕೋಲಸ್ ಮಡುರೊ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿವೆ. ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿಯಲಾಗಿದ್ದು, ಅವರನ್ನು ವೆನೆಜುವೆಲಾದಿಂದ ಹೊರಕ್ಕೆ ಕರೆತರಲಾಗಿದೆ," ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಡೆಲ್ಟಾ ಫೋರ್ಸ್‌ನಿಂದ ಸಾಹಸಮಯ ಕಾರ್ಯಾಚರಣೆ
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಅಮೆರಿಕ ಸೇನೆಯ ಅತ್ಯಂತ ಶಕ್ತಿಶಾಲಿ ಮತ್ತು ವಿಶೇಷ ಪಡೆಯಾದ 'ಡೆಲ್ಟಾ ಫೋರ್ಸ್' ಈ ಕಾರ್ಯಾಚರಣೆಯನ್ನು ನಡೆಸಿದೆ. ವೆನೆಜುವೆಲಾ ರಾಜಧಾನಿ ಕರಾಕಸ್‌ನಲ್ಲಿ ಶನಿವಾರ ಬೆಳಿಗ್ಗೆ ದೊಡ್ಡ ಮಟ್ಟದ ಸ್ಫೋಟಗಳು ಕೇಳಿಬಂದಿದ್ದು, ತದನಂತರ ಈ ಹಠಾತ್ ಬೆಳವಣಿಗೆ ಸಂಭವಿಸಿದೆ. ಕರಾಕಸ್‌ನ ವಾಯುಪ್ರದೇಶದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.
ವೆನೆಜುವೆಲಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಅಧ್ಯಕ್ಷರ ಬಂಧನದ ಸುದ್ದಿಯ ಬೆನ್ನಲ್ಲೇ ವೆನೆಜುವೆಲಾ ರಕ್ಷಣಾ ಸಚಿವ ವ್ಲಾಡಿಮಿರ್ ಪಾಡ್ರಿನೋ ಲೋಪೆಜ್, ದೇಶಾದ್ಯಂತ ಸೈನ್ಯವನ್ನು ನಿಯೋಜಿಸಲು ಆದೇಶಿಸಿದ್ದಾರೆ. ಅಮೆರಿಕದ ಈ ನಡೆಯನ್ನು "ಇತಿಹಾಸದ ಅತ್ಯಂತ ಕೆಟ್ಟ ಆಕ್ರಮಣ" ಎಂದು ಕರೆದಿರುವ ಅವರು, ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಮಡುರೊ ಎಲ್ಲಿದ್ದಾರೆ ಎಂಬ ಬಗ್ಗೆ ಸಾಕ್ಷ್ಯ ನೀಡುವಂತೆ ವೆನೆಜುವೆಲಾ ಸರ್ಕಾರ ಅಮೆರಿಕವನ್ನು ಒತ್ತಾಯಿಸಿದೆ.
ಯಾಕಾಗಿ ಈ ದಾಳಿ?
ಅಮೆರಿಕವು ಬಹಳ ದಿನಗಳಿಂದ ನಿಕೋಲಸ್ ಮಡುರೊ ಮೇಲೆ ಮಾದಕವಸ್ತು ಆರೋಪ ಹೊರಿಸಿತ್ತು. ಅಮೆರಿಕವು ವೆನೆಜುವೆಲಾದ ಬೃಹತ್ ತೈಲ ನಿಕ್ಷೇಪಗಳನ್ನು ನಿಯಂತ್ರಿಸಲು ಮತ್ತು ಅಲ್ಲಿನ ಸರ್ಕಾರವನ್ನು ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಮಡುರೊ ಈ ಮೊದಲೇ ಆರೋಪಿಸಿದ್ದರು. ಕಳೆದ ಸೆಪ್ಟೆಂಬರ್‌ನಿಂದ ಅಮೆರಿಕವು ವೆನೆಜುವೆಲಾ ಕರಾವಳಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಬೋಟ್ ಸ್ಟ್ರೈಕ್‌ಗಳನ್ನು ನಡೆಸಿದ್ದು, 115ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ
ಈ ಘಟನೆಯ ನಂತರ ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕ ಮತ್ತು ವೆನೆಜುವೆಲಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಸ್ಪೇನ್ ತಿಳಿಸಿದೆ. ಜರ್ಮನಿ ಮತ್ತು ಬೆಲ್ಜಿಯಂ ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಮ್ಮ ನಾಗರಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಡೊನಾಲ್ಡ್ ಟ್ರಂಪ್ ಅವರು ಇಂದು ಬೆಳಿಗ್ಗೆ (ಅಮೆರಿಕ ಕಾಲಮಾನ 11 ಗಂಟೆಗೆ) ಫ್ಲೋರಿಡಾದ ಮಾರ್-ಎ-ಲಾಗೋದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಮಡುರೊ ಬಂಧನ ಮತ್ತು ಮುಂದಿನ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆಯಿದೆ. ಈ ಬೆಳವಣಿಗೆಯು ದಕ್ಷಿಣ ಅಮೆರಿಕದ ರಾಜಕೀಯ ಭೂಪಟವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

