
"ಭಾರತ-ಪಾಕ್ ಶಾಂತಿ ಸಂಧಾನ ಮಾಡಿದವರು ನಾವು"- ಟ್ರಂಪ್ ಬೆನ್ನಲ್ಲೇ ವಾದಕ್ಕಿಳಿದ ಚೀನಾ
ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷದಲ್ಲಿ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೊಂಡಿದ್ದಾರೆ. ಆದರೆ ಭಾರತ, ಚೀನಾದ ಈ ಹೇಳಿಕೆಯನ್ನು ತಿರಸ್ಕರಿಸಿದೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವನ್ನು ಶಾಂತಗೊಳಿಸುವಲ್ಲಿ ತಾವು ಪ್ರಮುಖ ಪಾತ್ರ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ಹೇಳುತ್ತಲೇ ಬರುತ್ತಿದ್ದಾರೆ. ಅವರ ಈ ಹೇಳಿಕೆಯನ್ನು ಭಾರತ ನಿರಾಕರಿಸುತ್ತಾ ಬಂದರೂ ಟ್ರಂಪ್ ಮಾತ್ರ ತಮ್ಮ ಮೊಂಡುವಾದವನ್ನು ಬಿಟ್ಟಿಲ್ಲ. ಇದೀಗ ಟ್ರಂಪ್ ಬೆನ್ನಲ್ಲೇ ಚೀನಾ ಕೂಡ ಇದೇ ರೀತಿಯ ಹೇಳಿಕೆಯೊಂದನ್ನು ನೀಡಿದೆ. ಪಾಕ್-ಭಾರತ ನಡುವಿನ ಶಾಂತಿ ಸಂಧಾನದಲ್ಲಿ ತನ್ನ ಪಾತ್ರವಿದೆ ಎಂದು ಚೀನಾ ಈಗ ಪ್ರತಿಪಾದಿಸಿದೆ. ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಮೊದಲಿನಿಂದಲೂ ತಿರಸ್ಕರಿಸುತ್ತಿದ್ದರೂ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬೀಜಿಂಗ್ ಅನ್ನು ವಿಶ್ವದ ಶಾಂತಿ ಸಂಧಾನಕಾರ ಎಂದು ಬಿಂಬಿಸಿಕೊಂಡಿದ್ದಾರೆ.
ವಾಂಗ್ ಯಿ ಹೇಳಿದ್ದೇನು?
ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಾಂಗ್ ಯಿ, "ಈ ವರ್ಷ ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಅಸ್ಥಿರತೆ ಹೆಚ್ಚಾಗಿದೆ. ನಾವು ಮ್ಯಾನ್ಮಾರ್, ಕಾಂಬೋಡಿಯಾ-ಥೈಲ್ಯಾಂಡ್ ಮತ್ತು ಇರಾನ್ ಪರಮಾಣು ವಿಷಯಗಳ ಜೊತೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮಧ್ಯಸ್ಥಿಕೆ ವಹಿಸಿದ್ದೇವೆ," ಎಂದು ಹೇಳಿಕೊಂಡಿದ್ದಾರೆ.
ಕದನ ವಿರಾಮದ ಬಗ್ಗೆ ಭಾರತದ ಸ್ಪಷ್ಟ ನಿಲುವು
ಮೇ 7 ರಂದು ಆರಂಭವಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವು ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ನಡುವಿನ ನೇರ ಮಾತುಕತೆಯಿಂದ ಬಗೆಹರಿದಿದೆ ಎಂದು ನವದೆಹಲಿ ಸ್ಪಷ್ಟಪಡಿಸಿದೆ.
ಮೇ 13 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು, "ಮೇ 10, 2025 ರಂದು ಮಧ್ಯಾಹ್ನ 15:35 ಗಂಟೆಗೆ ಉಭಯ ದೇಶಗಳ ಡಿಜಿಎಂಒಗಳ ನಡುವೆ ನಡೆದ ಫೋನ್ ಕರೆಯ ಮೂಲಕ ಕದನ ವಿರಾಮದ ಒಪ್ಪಂದವಾಗಿದೆ. ಇದರಲ್ಲಿ ಯಾವುದೇ ಮೂರನೇ ದೇಶದ ಪಾತ್ರವಿಲ್ಲ," ಎಂದು ತಿಳಿಸಿತ್ತು.
ಚೀನಾದ ಇಬ್ಬಂದಿ ನೀತಿ ಮತ್ತು 'ಆಪರೇಷನ್ ಸಿಂದೂರ್'
'ಆಪರೇಷನ್ ಸಿಂದೂರ್' ಅವಧಿಯಲ್ಲಿ ಚೀನಾದ ಪಾತ್ರವು ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ಕಡೆ ಶಾಂತಿಯ ಮಾತನಾಡಿದ್ದ ಚೀನಾ, ಮತ್ತೊಂದೆಡೆ ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ನೆರವು ನೀಡಿತ್ತು.
ಪಾಕಿಸ್ತಾನದ ಶೇ. 81 ರಷ್ಟು ಶಸ್ತ್ರಾಸ್ತ್ರಗಳು ಚೀನಾದಿಂದಲೇ ರಫ್ತಾಗುತ್ತವೆ. ಭಾರತದ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಅವರು, "ಚೀನಾ ತನ್ನ ಪ್ರಾಚೀನ ಮಿಲಿಟರಿ ತಂತ್ರವಾದ 'ಬೇರೆಯವರ ಕತ್ತಿಯನ್ನು ಬಳಸಿ ಶತ್ರುವನ್ನು ಕೊಲ್ಲುವುದು' ಎಂಬ ನೀತಿಯನ್ನು ಅನುಸರಿಸುತ್ತಿದೆ," ಎಂದು ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇತರೆ ಪ್ರಮುಖ ಅಂಶಗಳು
ಚೀನಾ ವಿದೇಶಾಂಗ ಸಚಿವರು ತಮ್ಮ ಭಾಷಣದಲ್ಲಿ ಇನ್ನು ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು ಮತ್ತು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯ ಹಾದಿಯಲ್ಲಿದೆ ಎಂದು ಅವರು ಹೇಳಿದರು.
20 ದೇಶಗಳ ಸದಸ್ಯತ್ವದೊಂದಿಗೆ ಬ್ರಿಕ್ಸ್ ಕುಟುಂಬವು ಈಗ ಮತ್ತಷ್ಟು ಬಲಗೊಂಡಿದೆ ಎಂದು ಅವರು ತಿಳಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲೆ ವಿಧಿಸುತ್ತಿರುವ ಏಕಪಕ್ಷೀಯ ಸುಂಕಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಾಂಗ್ ಯಿ, ಇದು ಜಾಗತಿಕ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದಿದ್ದಾರೆ.
ಭಾರತವು ಮೊದಲಿನಿಂದಲೂ ಅಮೆರಿಕ ಅಥವಾ ಚೀನಾ ಸೇರಿದಂತೆ ಯಾವುದೇ ದೇಶಕ್ಕೆ ಕಾಶ್ಮೀರ ಅಥವಾ ಪಾಕಿಸ್ತಾನದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ಖಡಕ್ ಆಗಿಯೇ ಹೇಳುತ್ತಲೇ ಬಂದಿದೆ.

