
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್
ವೆನೆಜುವೆಲಾದಲ್ಲಿ ನಾಯಕತ್ವ ಗೊಂದಲ: ಮಡುರೊ ಸೆರೆಯಾದ ಬೆನ್ನಲ್ಲೇ ಅಧಿಕಾರಕ್ಕಾಗಿ ಪೈಪೋಟಿ
ವೆನೆಜುವೆಲಾದ ಸುಪ್ರೀಂ ಕೋರ್ಟ್, ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ 'ಮಧ್ಯಂತರ ಅಧ್ಯಕ್ಷೆ'ಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಶನಿವಾರ ಆದೇಶಿಸಿತ್ತು.
ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನಕ್ಕೊಳಗಾದ ನಂತರ, 2.9 ಕೋಟಿ ಜನಸಂಖ್ಯೆಯ ವೆನೆಜುವೆಲಾ ದೇಶದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಇಡೀ ವಿಶ್ವವನ್ನು ಕಾಡುತ್ತಿದೆ. ಒಂದು ಕಡೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರವಾಗಿದೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಮಡುರೊ ಅವರ ಆಪ್ತರು ಅಧಿಕಾರ ಬಿಟ್ಟುಕೊಡಲು ನಿರಾಕರಿಸುತ್ತಿದ್ದಾರೆ. ಈ ಗೊಂದಲದ ನಡುವೆ ರಾಜಧಾನಿ ಕರಾಕಸ್‌ನ ಜನತೆ ಭೀತಿಯಿಂದ ಮನೆಯೊಳಗೆ ಉಳಿದಿದ್ದು, ದಿನಬಳಕೆಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ.
ವೆನೆಜುವೆಲಾದ ಸುಪ್ರೀಂ ಕೋರ್ಟ್, ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ 'ಮಧ್ಯಂತರ ಅಧ್ಯಕ್ಷೆ'ಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಶನಿವಾರ ಆದೇಶಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡಿ, "ಡೆಲ್ಸಿ ರೊಡ್ರಿಗಸ್ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ವೆನೆಜುವೆಲಾವನ್ನು ಮತ್ತೆ ಶಕ್ತಿಯುತ ರಾಷ್ಟ್ರವನ್ನಾಗಿ ಮಾಡಲು ಅವರು ಅಮೆರಿಕದ ಜೊತೆ ಸಹಕರಿಸುವ ಭರವಸೆ ನೀಡಿದ್ದಾರೆ" ಎಂದು ಘೋಷಿಸಿದ್ದಾರೆ. ಈ ಹೇಳಿಕೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ, ಏಕೆಂದರೆ ಈ ಹಿಂದೆ ಇದೇ ಡೆಲ್ಸಿ ರೊಡ್ರಿಗಸ್ ಮೇಲೆ ಟ್ರಂಪ್ ಸರ್ಕಾರ ನಿರ್ಬಂಧಗಳನ್ನು ಹೇರಿತ್ತು.
ಅಧಿಕಾರ ಸ್ವೀಕಾರ ನಿರಾಕರಿಸಿದ ಡೆಲ್ಸಿ ರೊಡ್ರಿಗಸ್
ಟ್ರಂಪ್ ಅವರ ಹೇಳಿಕೆಗಳನ್ನು ನೇರವಾಗಿ ತಳ್ಳಿಹಾಕಿರುವ ಡೆಲ್ಸಿ ರೊಡ್ರಿಗಸ್, ಸರ್ಕಾರಿ ದೂರದರ್ಶನದಲ್ಲಿ ಕಾಣಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ. "ನಮ್ಮ ದೇಶಕ್ಕೆ ಮಡುರೊ ಅವರೇ ಏಕೈಕ ಅಧ್ಯಕ್ಷ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಅವರು ಗುಡುಗಿದ್ದಾರೆ. ಟ್ರಂಪ್ ಅವರು ಡೆಲ್ಸಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಹೇಳುತ್ತಿದ್ದರೂ, ವೆನೆಜುವೆಲಾದ ಯಾವುದೇ ವಾಹಿನಿಗಳಲ್ಲಿ ಅಂತಹ ಸಮಾರಂಭದ ನೇರಪ್ರಸಾರವಾಗಿಲ್ಲ. ಬದಲಾಗಿ, ಡೆಲ್ಸಿ ಇನ್ನೂ ತಮ್ಮನ್ನು ಉಪಾಧ್ಯಕ್ಷೆ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.
ವಿರೋಧ ಪಕ್ಷದ ನಾಯಕಿ ಮರಿಯಾ ಮಚಾಡೊಗೆ ಟ್ರಂಪ್ ತಣ್ಣೀರು
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮತ್ತು ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮರಿಯಾ ಕೊರಿನಾ ಮಚಾಡೊ ಅವರು ಪ್ರಜಾಪ್ರಭುತ್ವದ ಮರುಸ್ಥಾಪನೆಯ ನಿರೀಕ್ಷೆಯಲ್ಲಿದ್ದರು. ಎಡ್ಮಂಡೋ ಗೊನ್ಜಾಲೆಜ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದರು. ಆದರೆ, ಟ್ರಂಪ್ ಅವರು ಮಚಾಡೊ ಕುರಿತು ಅತ್ಯಂತ ಕಠಿಣವಾಗಿ ಮಾತನಾಡಿದ್ದು, "ಮಚಾಡೊಗೆ ದೇಶದಲ್ಲಿ ಜನಬೆಂಬಲ ಅಥವಾ ಗೌರವ ಇಲ್ಲ, ಅವರು ದೇಶ ಮುನ್ನಡೆಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದ್ದಾರೆ.
ಸಜ್ಜಾದ ಸೇನೆ ಮತ್ತು ಜನಸಾಮಾನ್ಯರ ಆತಂಕ
ಮಡುರೊ ಅವರ ಆಪ್ತ ವಲಯದಲ್ಲಿರುವ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೋ ಲೋಪೆಜ್ ಮತ್ತು ಆಂತರಿಕ ಸಚಿವ ಡಿಯೋಸ್ಡಾಡೊ ಕ್ಯಾಬೆಲ್ಲೊ ಅವರು ಅಮೆರಿಕದ ವಿರುದ್ಧ ಯುದ್ಧ ಸಾರುವ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ ಮಾಡಿದ ಇಲಿಗಳು ಪಶ್ಚಾತ್ತಾಪ ಪಡಲಿವೆ" ಎಂದು ಕ್ಯಾಬೆಲ್ಲೊ ಗುಡುಗಿದ್ದು, ಜನರು ಬೀದಿಗಿಳಿದು ಪ್ರತಿಭಟಿಸುವಂತೆ ಕರೆ ನೀಡಿದ್ದಾರೆ. ಇತ್ತ ರಾಜಧಾನಿಯಲ್ಲಿ ಅನೇಕ ಸ್ಫೋಟಗಳು ಕೇಳಿಬರುತ್ತಿದ್ದು, ಜನರು ಪೆಟ್ರೋಲ್ ಬಂಕ್ ಮತ್ತು ಸೂಪರ್ ಮಾರ್ಕೆಟ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಮುಂದಿನ ದಾರಿ ಅಸ್ಪಷ್ಟ
ವೆನೆಜುವೆಲಾದ ಸಂವಿಧಾನದ ಪ್ರಕಾರ, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಒಂದು ತಿಂಗಳೊಳಗೆ ಹೊಸ ಚುನಾವಣೆಗಳನ್ನು ನಡೆಸಬೇಕು. ಆದರೆ, ಅಮೆರಿಕದ ನೇರ ಹಸ್ತಕ್ಷೇಪ ಮತ್ತು ಅಲ್ಲಿನ ಸೇನೆಯು ಮಡುರೊ ಅವರ ಆಪ್ತರ ನಿಯಂತ್ರಣದಲ್ಲಿರುವುದರಿಂದ ರಾಜಕೀಯ ಸ್ಥಿತ್ಯಂತರ ಸುಲಭವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡೆಲ್ಸಿ ರೊಡ್ರಿಗಸ್ ಅವರಿಗೆ ವಾಲ್ ಸ್ಟ್ರೀಟ್ ಮತ್ತು ಅಮೆರಿಕದ ತೈಲ ಉದ್ಯಮದ ಜೊತೆ ಉತ್ತಮ ಸಂಬಂಧವಿರುವುದು ಟ್ರಂಪ್ ಅವರ ಈ ಅನಿರೀಕ್ಷಿತ ಬೆಂಬಲಕ್ಕೆ ಕಾರಣ ಎನ್ನಲಾಗುತ್ತಿದೆ.

