ಪ್ರಧಾನಿ ಭೇಟಿ ಸಮಯದಲ್ಲೇ ಆಲಿಗಢ ವಿಶ್ವವಿದ್ಯಾನಿಲಯಕ್ಕೆ ವಿಸಿ ನೇಮಕ
ರಾಜಕೀಯ ಉದ್ದೇಶದ ಆರೋಪ;
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಸಭೆಯಲ್ಲಿ ಮಾತನಾಡಲು ಅಲಿಗಢಕ್ಕೆ ಭೇಟಿ ನೀಡಿದ ದಿನವೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಹೊಸ ಉಪಕುಲಪತಿಯನ್ನು ನೇಮಕ ಮಾಡಲಾಗಿದೆ. ನೇಮಕಕ್ಕೆ ಸರ್ಕಾರ ಚುನಾವಣೆ ಆಯೋಗದಿಂದ ಅನುಮತಿ ಪಡೆದಿದೆ. ಆದರೆ, ನೇಮಕದ ಸಮಯ ಪ್ರಶ್ನಾರ್ಹವಾಗಿದ್ದು,ಚುನಾವಣೆಗೆ ಪೂರ್ವಭಾವಿಯಾಗಿ ಈ ವಿವಾದಾತ್ಮಕ ನೇಮಕ ನಡೆದಿದೆ ಎನ್ನುವುದು ಗಮನಾರ್ಹ.
ಪ್ರಧಾನಿ ಮಹಿಳಾ ಕಾರ್ಡ್: ಮೂರು ಹೆಸರುಗಳ ಪಟ್ಟಿಯಲ್ಲಿ ಸರ್ಕಾರ ಪ್ರೊ. ನಯಿಮಾ ಖಾತೂನ್ ಅವರ ಹೆಸರನ್ನು ಅಂತಿಮಗೊಳಿಸಿತು. ನೂರು ವರ್ಷಗಳಲ್ಲಿ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ವಿಸಿ ಅವರು. ಈ ಮೂಲಕ ಮೋದಿ ಅವರು ತಮ್ಮ ಚುನಾವಣೆ ಪ್ರಚಾರಗಳಲ್ಲಿ ಬಳಸುತ್ತಿರುವ ʻನಾರಿ ಶಕ್ತಿʼ ಕಾರ್ಡ್ ನ್ನು ಮುನ್ನೆಲೆಗೆ ತಂದರು. ವಿಸ್ಮಯಕಾರಿ ಅಂಶವೆಂದರೆ, ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಉಳಿದಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 29 ಕ್ಕೆ ನಿಗದಿಪಡಿಸಲಾಗಿದೆ. ಹೀಗಿದ್ದರೂ, ಕೇಂದ್ರ ಸರ್ಕಾರ ವಿಸಿಯನ್ನು ನೇಮಿಸಿದೆ.
ವಿವಾದಾತ್ಮಕ ನೇಮಕ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ(ಎಎಂಯು)ದ ಮಹಿಳಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಖಾತೂನ್ ಅವರು ಈಮೊದಲು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಂಗಾಮಿ ವಿಸಿ ಆಗಿದ್ದ ಪ್ರೊ.ಮೊಹಮ್ಮದ್ ಗುಲ್ರೆಜ್ ಅವರ ಪತ್ನಿ ಎಂಬುದು ಗಮನಿಸಬೇಕಾದ ಸಂಗತಿ. ಕಳೆದ ವರ್ಷ ಅವರ ಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿಯು ವಿಸಿ ಹುದ್ದೆಗೆ ಖಾತೂನ್ ಸೇರಿದಂತೆ ಮೂವರನ್ನು ಆಯ್ಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. 2023 ರಲ್ಲಿ ವಿವಿ ನ್ಯಾಯಾಲಯಕ್ಕೆ ಕಳುಹಿಸಿದ ಪಟ್ಟಿಯಲ್ಲಿ ಖಾತೂನ್ ಸೇರಿದಂತೆ ಮೂರು ಹೆಸರು ಮಾತ್ರ ಇತ್ತು. ಹಿತಾಸಕ್ತಿ ಸಂಘರ್ಷವನ್ನು ಖಂಡಿಸಿ, ವಿವಿ ಆಡಳಿತ ಮಂಡಳಿಯ ಎಂಟು ಸದಸ್ಯರು ತಮ್ಮ ಆಕ್ಷೇಪ ಸಲ್ಲಿಸಿದ್ದಾರೆ.
ಇಸಿ ಆಕ್ಷೇಪಣೆ ಇಲ್ಲ: ವಿಸಿ ನೇಮಕಕ್ಕೆ ತನ್ನ ಅಭ್ಯಂತರವಿಲ್ಲ ಎಂದು ಚುನಾವಣೆ ಆಯೋಗ ಏಪ್ರಿಲ್ 9 ರಂದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ತಿಳಿಸಿದೆ. ಆದರೆ, ಇಂಥ ನೇಮಕಗಳಿಂದ ಸರ್ಕಾರ ʻಪ್ರಚಾರʼ ಅಥವಾ ʻರಾಜಕೀಯ ಲಾಭʼ ಪಡೆಯುವ ಗುರಿ ಹೊಂದಿರಬಾರದು ಎಂದು ಹೇಳಿದೆ. ಮೋದಿ ಅಲಿಗಢಕ್ಕೆ ಭೇಟಿ ನೀಡಿದ ದಿನವೇ (ಏಪ್ರಿಲ್ 22ರಂದು) ನೇಮಕ ನಡೆದಿದೆ.
ಪ್ರೊ. ತಾರಿಕ್ ಮನ್ಸೂರ್ ಅವರು ಏಪ್ರಿಲ್ 23, 2023 ರಂದು ನಿರ್ಗಮಿಸಿದ ನಂತರ, ವಿಸಿ ಹುದ್ದೆ ಒಂದು ವರ್ಷದಿಂದ ಖಾಲಿ ಉಳಿದಿತ್ತು. ಪ್ರೊ. ಮನ್ಸೂರ್ ತಮ್ಮ ನಿವೃತ್ತಿಗೆ ಒಂದು ತಿಂಗಳ ಮೊದಲು ಗುಲ್ರೆಜ್ ಅವರನ್ನು ಪ್ರೊ ವೈಸ್ ಚಾನ್ಸೆಲರ್ (ಪಿವಿಸಿ) ಆಗಿ ನೇಮಿಸಿದ್ದರು. ಆನಂತರ ಮನ್ಸೂರ್ ಬಿಜೆಪಿ ಸೇರಿ, ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾದರು. ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ ಹೌದು.
ನ್ಯಾಯಾಲಯ ಜನವರಿ 9ರಂದು ವಿಚಾರಣೆ ವೇಳೆ,ʼಹಂಗಾಮಿ ಉಪಕುಲಪತಿ ಕಾರ್ಯಕಾರಿ ಮಂಡಳಿಯ ಅಧ್ಯಕ್ಷತೆ ವಹಿಸಿದ್ದು ಮಾತ್ರವಲ್ಲದೆ, ಸ್ವತಃ ಮತ ಚಲಾಯಿಸುವ ಮೂಲಕ ಆಯ್ಕೆ ಪಟ್ಟಿಯ ತಯಾರಿಕೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಭಾಗವಹಿಸಿದ್ದರು. ಅವರ ಪತ್ನಿ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರುʼ ಎಂದು ಗಮನಿಸಿತ್ತು. ʻಉಪಕುಲಪತಿ ಹುದ್ದೆಗೆ ಆಯ್ಕೆಯು ಈ ಅರ್ಜಿಯ ಫಲಿತಾಂಶಕ್ಕೆ ಬದ್ಧವಾಗಿರುತ್ತದೆʼ ಎಂದು ಆದೇಶ ನೀಡಿತ್ತು.