ಸೋನಂ ವಾಂಗ್ಚುಕ್ ಬಂಧನ ವ್ಯವಸ್ಥಿತ ಷಡ್ಯಂತ್ರ; ಮುಕ್ತ ಚರ್ಚೆಗೆ ಬನ್ನಿ: ಪತ್ನಿ ಗೀತಾಂಜಲಿ ಸವಾಲು

ಪಾಕಿಸ್ತಾನದೊಂದಿಗೆ ನಂಟಿನ ಆರೋಪಗಳನ್ನು ಗೀತಾಂಜಲಿ ತಳ್ಳಿಹಾಕಿದರು ಗೀತಾಂಜಲಿ ಅವರು. ಲಡಾಖ್‌ನಲ್ಲಿ ಪಾಕಿಸ್ತಾನಿ ಪತ್ತೆಯಾಗಿದ್ದರೆ, ಅದು ನಮ್ಮ ಭದ್ರತಾ ವೈಫಲ್ಯ. ಗೃಹ ಸಚಿವಾಲಯವೇ ಉತ್ತರಿಸಬೇಕು," ಎಂದು ಹೇಳಿದ್ದಾರೆ.

Update: 2025-09-30 14:40 GMT

ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಬಂಧನವು ಒಂದು ವ್ಯವಸ್ಥಿತ 'ಷಡ್ಯಂತ್ರ' ಎಂದು ಅವರ ಪತ್ನಿ ಗೀತಾಂಜಲಿ ಆಂಗ್ಮೋ ಮಂಗಳವಾರ ಆರೋಪಿಸಿದ್ದಾರೆ. ತಮ್ಮ ಪತಿಯನ್ನು 'ದೇಶದ್ರೋಹಿ' ಎಂದು ಬಿಂಬಿಸಲು ಆಧಾರರಹಿತ ಕಥೆಗಳನ್ನು ಸೃಷ್ಟಿಸಲಾಗುತ್ತಿದ್ದು, ವಾಂಗ್ಚಕ್ ಮೇಲಿನ ಆರೋಪಗಳ ಕುರಿತು ಮುಕ್ತ ಚರ್ಚೆಗೆ ಬರುವಂತೆ ಅವರು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧನಕ್ಕೊಳಗಾಗಿರುವ ವಾಂಗ್ಚುಕ್ ಪರವಾಗಿ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸೋನಂ ಮೇಲೆ ಎನ್‌ಎಸ್‌ಎ ಹೇರುವ ಯಾವುದೇ ಅಗತ್ಯವಿರಲಿಲ್ಲ. ಆಡಳಿತವು ಏಕಪಕ್ಷೀಯ ಕಥೆಗಳನ್ನು ಹೇಳುತ್ತಿದೆ. ತಮ್ಮನ್ನು ಗೃಹಬಂಧನದಲ್ಲಿ ಇರಿಸಿದಂತಹ ಅನುಭವವಾದ ಕಾರಣ, ಸತ್ಯವನ್ನು ಹೇಳಲು ದೆಹಲಿಗೆ ಬಂದಿದ್ದೇನೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ದುರ್ಬಲಗೊಳಿಸುವ ಯತ್ನ

"ಲಡಾಖ್‌ಗೆ ಆರನೇ ಶೆಡ್ಯೂಲ್ ರಕ್ಷಣೆ ಕೋರಿ ನಡೆಯುತ್ತಿರುವ ಹೋರಾಟವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಈ ಷಡ್ಯಂತ್ರ ನಡೆಯುತ್ತಿದೆ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನಾವು ಒದಗಿಸಿದ್ದೇವೆ. ಆದರೂ, ಸೋನಂ ಅವರ ತೇಜೋವಧೆ ಮಾಡಲು ಹೊಗೆಯನ್ನು ಸೃಷ್ಟಿಸಲಾಗುತ್ತಿದೆ," ಎಂದು ಗೀತಾಂಜಲಿ ಆರೋಪಿಸಿದರು.

ಆರೋಪಗಳಿಗೆ ನೇರ ಉತ್ತರ

ಪಾಕಿಸ್ತಾನದೊಂದಿಗೆ ನಂಟು, ಎಫ್​​ಸಿಆರ್​ಎ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳನ್ನು ಗೀತಾಂಜಲಿ ತಳ್ಳಿಹಾಕಿದರು. "ಲಡಾಖ್‌ನಲ್ಲಿ ಪಾಕಿಸ್ತಾನಿ ಪತ್ತೆಯಾಗಿದ್ದರೆ, ಅದು ನಮ್ಮ ಭದ್ರತಾ ವೈಫಲ್ಯ. ಅದಕ್ಕೆ ವಾಂಗ್ಚುಕ್ ಅವರಲ್ಲ, ಗೃಹ ಸಚಿವಾಲಯವೇ ಉತ್ತರಿಸಬೇಕು," ಎಂದು ಒತ್ತಾಯಿಸಿದರು. ಅಲ್ಲದೆ, "ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಕೆ ಕೆಟ್ಟದಾಗಿ ನೋಡಲಾಗುತ್ತಿದೆ? ವಿನೋಬಾ ಭಾವೆ, ಸತ್ಯಜಿತ್ ರೇ ಅವರಂತಹ ಮಹನೀಯರು ಈ ಪ್ರಶಸ್ತಿ ಪಡೆದಿದ್ದಾರೆ. ಹಾಗಾದರೆ ಅವರೆಲ್ಲ ದೇಶದ್ರೋಹಿಗಳೇ?" ಎಂದು ಅವರು ಪ್ರಶ್ನಿಸಿದರು.

ಹಿಂಸಾಚಾರಕ್ಕೆ ಆಡಳಿತವೇ ಹೊಣೆ

ಸೆಪ್ಟೆಂಬರ್ 24 ರ ಹಿಂಸಾಚಾರದ ಕುರಿತು ಮಾತನಾಡಿದ ಅವರು, "ಹಿಂಸಾಚಾರ ನಡೆದಾಗ ಸೋನಂ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿದ್ದರು. ಅವರಿಗೆ ಏನಾಗುತ್ತಿದೆ ಎಂಬುದರ ಅರಿವೂ ಇರಲಿಲ್ಲ. ಸೋನಂ ಯಾವಾಗಲೂ ಗಾಂಧಿವಾದಿ ಹೋರಾಟವನ್ನೇ ಪ್ರತಿಪಾದಿಸಿದ್ದಾರೆ. ಈ ಹಿಂಸಾಚಾರ ಮತ್ತು ಭದ್ರತಾ ಲೋಪಕ್ಕೆ ಕೇಂದ್ರಾಡಳಿತ ಪ್ರದೇಶದ ಆಡಳಿತವೇ ಸಂಪೂರ್ಣ ಹೊಣೆ," ಎಂದು ಸ್ಪಷ್ಟಪಡಿಸಿದರು.

"ಒಳ್ಳೆಯ ಕೆಲಸ ಮಾಡುವವರನ್ನು ಹೀಗೆ ನಡೆಸಿಕೊಂಡರೆ ಭಾರತ 'ವಿಶ್ವಗುರು' ಆಗುವುದು ಹೇಗೆ? ಇಂದು ದೇಶದ್ರೋಹಿ ಎನ್ನುವ ಸರ್ಕಾರವೇ ಈ ಹಿಂದೆ ಅವರಿಗೆ ಹಲವು ಪ್ರಶಸ್ತಿಗಳನ್ನು ನೀಡಿತ್ತು," ಎಂದು ಹೇಳಿದ ಗೀತಾಂಜಲಿ, "ನಾವು ದೇಶದ ಕಾನೂನು ವ್ಯವಸ್ಥೆಯ ಮೂಲಕ ಹೋರಾಡುತ್ತೇವೆ ಮತ್ತು ಸತ್ಯ ಹೊರಬರುವವರೆಗೂ ವಿಶ್ರಮಿಸುವುದಿಲ್ಲ," ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

Tags:    

Similar News