ಸಾರ್ವಜನಿಕವಾಗಿ ಕ್ಷಮೆಯಾಚಿಸಿ: ರಾಮ್‌ದೇವ್ ಗೆ ಸುಪ್ರೀಂ ತಾಕೀತು
ಒಂದು ವಾರ ಕಾಲಾವಕಾಶ ನೀಡಿದ ನ್ಯಾಯಾಲಯ;
ಏಪ್ರಿಲ್ 16- ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ರಾಮ್‌ದೇವ್, ಬಾಲಕೃಷ್ಣಆಚಾರ್ಯ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂ ಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಅವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದೆ.
ಮಂಗಳವಾರ ನಡೆದ ವಿಚಾರಣೆ ವೇಳೆ ಹಾಜರಿದ್ದ ರಾಮ್‌ದೇವ್ ಮತ್ತು ಬಾಲಕೃಷ್ಣ, ವೈಯಕ್ತಿಕವಾಗಿ ಕ್ಷಮೆಯಾಚಿಸಿದರು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಕ್ಷಮೆಯಾಚನೆಯನ್ನುಪರಿಗಣಿಸಿತು. ಆದರೆ, ಈ ಹಂತದಲ್ಲಿ ʻತಪ್ಪಿಸಿಕೊಳ್ಳಲು ಬಿಡುವುದಿಲ್ಲʼ ಎಂದು ಸ್ಪಷ್ಟಪಡಿಸಿತು.
ʻಅಲೋಪಥಿಯನ್ನು ಹೀಗಳೆಯಬಾರದು: ʻನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಆದರೆ, ಅಲೋಪಥಿಯನ್ನು ಹೀಗಳೆಯಬಾರದುʼ ಎಂದು ಪೀಠ ಬಾಲಕೃಷ್ಣ ಅವರಿಗೆ ಹೇಳಿತು. ʻನ್ಯಾಯಾಲಯಕ್ಕೆ ಯಾವುದೇ ಅಗೌರವ ತೋರುವ ಉದ್ದೇಶವಿಲ್ಲʼ ಎಂದು ರಾಮ್ ದೇವ್ ಹೇಳಿದರು.
ಆದರೆ, ಪತಂಜಲಿ ಸಂಸ್ಥೆಯು ಸುಪ್ರೀಂಕೋರ್ಟ್ ತನ್ನ ಹಿಂದಿನ ಆದೇಶಗಳಲ್ಲಿ ಏನು ಹೇಳಿದೆ ಎಂದು ತಿಳಿಯದಷ್ಟು ಮುಗ್ಧರಲ್ಲ ಎಂದು ಪೀಠವು ಬಾಲಕೃಷ್ಣ ಅವರಿಗೆ ಹೇಳಿತು. ʻಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸಿದ್ಧರಿದ್ದೇವೆʼ ಎಂದು ರಾಮ್‌ದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಪೀಠಕ್ಕೆ ತಿಳಿಸಿದರು.
ನ್ಯಾಯಾಲಯದ ಸಂವಹನ: ಸುಪ್ರೀಂ ಕೋರ್ಟ್ ಹಾಜರಿದ್ದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಪೀಠದೊಂದಿಗೆ ಸಂವಾದಕ್ಕೆ ಮುಂದಾಗುವಂತೆ ಹೇಳಿತು. ʻನ್ಯಾಯಾಲಯದೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂಬ ಭಾವನೆ ಅವರಿಗೆ ಬರಬೇಕುʼ ಎಂದು ಹೇಳಿತು.
ಕಂಪನಿ ಇತರ ಔಷಧಗಳ ಮಾನ ಕಳೆದಿದೆ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧ ನೀಡಲಾಗುತ್ತದೆ ಎಂದು ಪ್ರಚಾರ ಮಾಡಿದೆ ಎಂದು ನ್ಯಾಯಾಲಯ ಹೇಳಿದಾಗ, ರಾಮ್‌ದೇವ್, ʻನಾವು ಇದನ್ನು ಹೇಳಬಾರದಿತ್ತು. ಭವಿಷ್ಯದಲ್ಲಿ ಜಾಗರೂಕರಾಗಿರುತ್ತವೆʼ ಎಂದು ಪ್ರತಿಕ್ರಿಯಿಸಿದರು. ಇಬ್ಬರೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.