ಬಿಜು ಜನತಾ ದಳ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪಶ್ಚಿಮ ಒಡಿಶಾದ ಬೋಲಂಗಿರ್ ಜಿಲ್ಲೆಯ ಕಾಂತಾಬಾಂಜಿ ಹಾಗೂ ಗಂಜಾಮ್ ಜಿಲ್ಲೆಯ ಹಿಂಜಿಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ವಿಧಾನಸಭೆ ಚುನಾವಣೆಗೆ ಒಂಬತ್ತು ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬುಧವಾರ (ಏಪ್ರಿಲ್ 17) ಬಿಡುಗಡೆಗೊಳಿಸಿದರು. 2019 ರ ವಿಧಾನ ಸಭೆ ಚುನಾವಣೆಯಲ್ಲಿ ಹಿಂಜಿಲಿ ಮತ್ತು ಬಿಜೆಪುರ ಕ್ಷೇತ್ರದಿಂದ ಗೆದ್ದಿದ್ದ ಅವರು ಹಿಂಜಿಲಿ ಸ್ಥಾನವನ್ನು ಉಳಿಸಿಕೊಂಡಿದ್ದರು.
ಪಟ್ನಾಯಕ್ ಘೋಷಿಸಿದ ಒಂಬತ್ತು ಬಿಜೆಡಿ ಅಭ್ಯರ್ಥಿಗಳಲ್ಲಿ ಆರು ಮಹಿಳೆಯರು ಮತ್ತು ನಾಲ್ಕು ಪಕ್ಷಾಂತರಿಗಳು ಸೇರಿದ್ದಾರೆ. ಪಕ್ಷ ಹಾಲಿ ಶಾಸಕರಾದ ಪೂರ್ಣ ಚಂದ್ರ ಬಾಕಾ (ಚಿತ್ರಕೊಂಡ), ಕಿಶೋರ್ ಚಂದ್ರ ನಾಯಕ್ (ಕುಚಿಂದಾ), ರಜನಿಕಾಂತ್ ಸಿಂಗ್ (ಅಂಗುಲ್) ಮತ್ತು ಸಮೀರ್ ರಂಜನ್ ದಾಶ್ (ನಿಮಾಪರ) ಅವರನ್ನು ಕೈಬಿಟ್ಟಿದೆ.
ಪಟ್ನಾಯಕ್ ಅವರು ನಾಲ್ವರು ಪಕ್ಷಾಂತರಿಗಳಿಗೆ, ಅರುಂಧತಿ ದೇವಿ (ದಿಯೋಗರ್), ದಿಲೀಪ್ ಕುಮಾರ್ ನಾಯಕ್ (ನಿಮಾಪರ), ರಾಜೇಂದ್ರ ಕುಮಾರ್ ಛತ್ರಿಯಾ (ಕುಚಿಂದಾ) ಮತ್ತು ಲಕ್ಷ್ಮೀಪ್ರಿಯಾ ನಾಯಕ್ (ಚಿತ್ರಕೊಂಡ) ಟಿಕೆಟ್ ನೀಡಿದ್ದಾರೆ.ಟಿಕೆಟ್ ಪಡೆದುಕೊಂಡ ಆರು ಮಹಿಳಾ ಅಭ್ಯರ್ಥಿಗಳೆಂದರೆ, ಲಕ್ಷ್ಮಿಪ್ರಿಯಾ ನಾಯಕ್ (ಚಿತ್ರಕೊಂಡ), ಬರ್ಸಾ ಸಿಂಗ್ ಬರಿಹಾ (ಪದಂಪುರ), ಅರುಂಧತಿ ದೇವಿ (ದಿಯೋಗರ್), ಸಂಯುಕ್ತಾ ಸಿಂಗ್ (ಅಂಗುಲ್), ಸುಲ್ಖಾನ್ಸಾ ಗೀತಾಂಜಲಿ ದೇವಿ (ಸಮಖೆಮುಂಡಿ) ಮತ್ತು ಡಾ.ಇಂದಿರಾ ನಂದಾ (ಜೇಪೋರ್).
ಅಂಗುಲ್ ಶಾಸಕ ರಜನಿಕಾಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿ, ಅವರ ಪತ್ನಿ ಸಂಯುಕ್ತಾ ಸಿಂಗ್ ಅವರಿಗೆ ಅದೇ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಮಾಜಿ ಸಚಿವ- ಮಾಜಿ ಶಾಸಕ ರಬಿ ನಂದಾ ಅವರಿಗೆ ಟಿಕೆಟ್ ನಿರಾಕರಿಸಿ, ಅವರ ಪತ್ನಿ ಡಾ. ಇಂದಿರಾ ನಂದಾ ಅವರಿಗೆ ಜೇಪೋರ್ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಸನಖೆಮುಂಡಿ ವಿಧಾನಸಭೆ ಕ್ಷೇತ್ರದಿಂದ ಮಾಜಿ ಶಾಸಕಿ ನಂದಿನಿ ದೇವಿ ಅವರ ಪುತ್ರಿ ಎಸ್. ಗೀತಾಂಜಲಿ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ.
ಇಬ್ಬರ ಕ್ಷೇತ್ರಗಳನ್ನು ಪರಸ್ಪರ ಬದಲಿಸಲಾಗಿದೆ. ರಾಯರಖೋಲ್ ಶಾಸಕ ರೋಹಿತ್ ಪೂಜಾರಿ ಸಂಬಲ್‌ಪುರ ಕ್ಷೇತ್ರದಿಂದ ಮತ್ತು ಪ್ರಸನ್ನ ಆಚಾರ್ಯ ರಾಯರಖೋಲ್‌ನಿಂದ ಸ್ಪರ್ಧಿಸಲಿದ್ದಾರೆ.
147 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಡಿ ಈವರೆಗೆ 126 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.