ಮತದಾನದ ದತ್ತಾಂಶ: ನ್ಯಾಯಾಲಯದ ಕದ ತಟ್ಟಿದ ಎಡಿಆರ್
48 ಗಂಟೆಗಳೊಳಗೆ ದತ್ತಾಂಶ ಪ್ರಕಟಕ್ಕೆ ಆಗ್ರಹ: 17ರಂದು ಅರ್ಜಿ ಆಲಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್;
ಹೊಸದಿಲ್ಲಿ, ಮೇ 13- ಚುನಾವಣೆ ಆಯೋಗವು ಮತದಾನ ಮುಗಿದ 48 ಗಂಟೆಗಳ ಒಳಗೆ ಮತಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ತನ್ನ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವಂತೆ ನಿರ್ದೇಶನ ನೀಡಬೇಕೆಂದು ಎನ್‌ಜಿಒ ಸಲ್ಲಿಸಿರುವ ಮನವಿಯನ್ನು ಮೇ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಈ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ತಿಳಿಸಿದೆ.
ಎಡಿಆರ್ ಕಳೆದ ವಾರ ತನ್ನ 2019 ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಎಲ್ಲಾ ಮತಗಟ್ಟೆಗಳ ಫಾರ್ಮ್ 17ಸಿ ಭಾಗ-1 (ದಾಖಲಾದ ಮತಗಳ ಲೆಕ್ಕಾಚಾರ)ನ್ನು ಮತದಾನದ ಅಂತ್ಯಗೊಂಡ ನಂತರ ತಕ್ಷಣವೇ ಅಪ್‌ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.
ʻ2024 ರ ಚುನಾವಣೆಯ ಪ್ರತಿಯೊಂದು ಹಂತದ ಮತದಾನದ ನಂತರ ಮತಗಟ್ಟೆವಾರು ಅಂಕಿಅಂಶಗಳನ್ನು ಜಾಲತಾಣದಲ್ಲಿ ಅಳವಡಿಸಲು ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಬೇಕು. ಅಕ್ರಮಗಳಿಂದ ಚುನಾವಣೆಯ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ಮನವಿ ಸಲ್ಲಿಸಲಾಗಿದೆʼ ಎಂದು ಎಡಿಆರ್ ಹೇಳಿದೆ.
ʻಲೋಕಸಭೆ ಚುನಾವಣೆಯ ಏ.19ರಂದು ನಡೆದ ಮೊದಲ ಹಂತದ ಮತದಾನದ ದತ್ತಾಂಶವನ್ನು 11 ದಿನಗಳ ನಂತರ ಮತ್ತು 26ರಂದು ನಡೆದ ಎರಡನೇ ಹಂತದ ಮತದಾನದ ದತ್ತಾಂಶವನ್ನು ನಾಲ್ಕು ದಿನಗಳ ನಂತರ ಪ್ರಕಟಿಸಲಾಗಿದೆ. ಏಪ್ರಿಲ್ 30, 2024 ರಂದು ಪ್ರಕಟಿಸಿದ ಮಾಹಿತಿಯು ಮತದಾನದ ದಿನದಂದು ಸಂಜೆ 7 ಗಂಟೆಗೆ ಘೋಷಿಸಿದ ಆರಂಭಿಕ ಶೇಕಡಾವಾರಿಗಿಂತ ಸುಮಾರು ಶೇ. 5-6 ರಷ್ಟು ತೀವ್ರ ಹೆಚ್ಚಳವಿದೆ,ʼ ಎಂದು ಹೇಳಿದೆ.
ʻಅಂತಿಮ ದತ್ತಾಂಶ ಬಿಡುಗಡೆಯಲ್ಲಿನ ಅತಿ ವಿಳಂಬವು ಸಾರ್ವಜನಿಕರಲ್ಲಿ ಕಳವಳ ಮತ್ತು ಅನುಮಾನ ಹುಟ್ಟುಹಾಕಿದೆ. ಇದನ್ನು ಪರಿಹರಿಸಲು ಮತ್ತು ಮತದಾರರ ವಿಶ್ವಾಸವನ್ನು ಎತ್ತಿಹಿಡಿಯಲು ಚುನಾವಣೆ ಆಯೋಗಕ್ಕೆ ಫಾರ್ಮ್ 17ಸಿ ಭಾಗ-1ರ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮತದಾನ ಮುಗಿದ 48 ಗಂಟೆಗಳೊಳಗೆ ವೆಬ್‌ಸೈಟ್‌ನಲ್ಲಿ ಅಳವಡಿಸಲು ನಿರ್ದೇಶನ ನೀಡಬೇಕುʼ ಎಂದು ಕೋರಿದೆ.