ಚುನಾವಣೆ 2024: ಬಿಜೆಪಿ ಸೇರಿದ ನಟಿ ರೂಪಾಲಿ ಗಂಗೂಲಿ

Update: 2024-05-01 08:21 GMT

ನಟಿ ರೂಪಾಲಿ ಗಂಗೂಲಿ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಗಂಗೂಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ ಅವರ ʻಮತ ಜಿಹಾದ್ʼ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಲು ಈ ಅವಕಾಶ ಬಳಸಿಕೊಂಡರು. 

ಫರೂಕಾಬಾದ್ ಲೋಕಸಭೆ ಕ್ಷೇತ್ರದಿಂದ ಇಂಡಿಯಾ ಒಕ್ಕೂಟದ ಅಭ್ಯರ್ಥಿಗೆ ಮತ ಯಾಚಿಸುತ್ತಿರುವ ಆಲಂ, ʻವೋಟ್ ಜಿಹಾದ್ʼ ಗೆ ಕರೆ ನೀಡಿದರು; ʻಪ್ರಸ್ತುತ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯವು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಅಗತ್ಯʼ ಎಂದು ಹೇಳಿದ್ದರು. 

ಆಲಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ತಾವ್ಡೆ, ʻಸುಳ್ಳು ಹಬ್ಬಿಸುತ್ತಿರುವ ಪ್ರತಿಪಕ್ಷಗಳು ಈಗ ವೋಟ್ ಜಿಹಾದ್ ಅಭಿಯಾನ ಪ್ರಾರಂಭಿಸಿವೆ. ಇದು ಅವರ ಗೊಂದಲವನ್ನು ತೋರಿಸುತ್ತದೆ. ಒಂದೆಡೆ ಮುಸ್ಲಿಮರಿಗೆ ಒಬಿಸಿಗಳ ಮೀಸಲು ನೀಡುತ್ತಿದ್ದರೆ, ಮತ್ತೊಂದೆಡೆ ಚುನಾವಣೆ ಸಂದರ್ಭದಲ್ಲಿ ವೋಟ್‌ ಜಿಹಾದ್‌ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಈ ಪ್ರಚಾರ ಆರಂಭಿಸಲಾಗಿದೆಯೇ?ʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಾವ್ಡೆ ಪ್ರಶ್ನಿಸಿದರು. 

ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ಸೇರಿದಂತೆ ಹಲವು ಪಕ್ಷದ ನಾಯಕರು ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:    

Similar News