ಲೋಕಸಭೆ ಚುನಾವಣೆ 4 ನೇ ಹಂತ: ಸಂಜೆ 5 ಗಂಟೆಯವರೆಗೆ ಶೇ.62ರಷ್ಟು ಮತದಾನ
ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ.75 ಮತದಾನ ಆಗಿದೆ.;
ಲೋಕಸಭೆ ಚುನಾವಣೆಯ 4 ನೇ ಹಂತದಲ್ಲಿ ಸಂಜೆ 5 ಗಂಟೆಯವರೆಗೆ ಶೇ.62ರಷ್ಟು ಮತದಾನವಾಗಿದೆ. ಬಂಗಾಳದಲ್ಲಿ ಗರಿಷ್ಠ ಮತದಾನವಾಗಿದೆ. 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ 96 ಕ್ಷೇತ್ರಗಳಿಗೆ ಹಾಗೂ ಆಂಧ್ರಪ್ರದೇಶದ 175 ಹಾಗೂ ಒಡಿಷಾದ 28ವಿಧಾನಸಭೆ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು.
ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ವರದಿಗಳಿವೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತು. ಜಮ್ಮು ಮತ್ತು ಕಾಶ್ಮೀರವು ಅತ್ಯಂತ ಕಡಿಮೆ ಮತದಾನ(ಶೇ 35)ಕ್ಕೆ ಸಾಕ್ಷಿಯಾಗಿದೆ. ಇತರ ರಾಜ್ಯಗಳ ಪೈಕಿ ಆಂಧ್ರಪ್ರದೇಶದಲ್ಲಿ ಶೇ.68.04, ಬಿಹಾರದಲ್ಲಿ ಶೇ.54.14, ಜಾರ್ಖಂಡ್ ನಲ್ಲಿ ಶೇ.63.14ರಷ್ಟು ಮತದಾನವಾಗಿದೆ.
ಏಳು ಹಂತಗಳ ಲೋಕಸಭೆ ಚುನಾವಣೆಯ ಮೊದಲ ಮೂರು ಹಂತಗಳಲ್ಲಿ 543 ಸ್ಥಾನಗಳಲ್ಲಿ 283 ಸ್ಥಾನಗಳಿಗೆ ಮತದಾನ ಮುಕ್ತಾಯಗೊಂಡಿದೆ.
ಸೋಮವಾರ 1.92 ಲಕ್ಷ ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆದಿದ್ದು, 19 ಲಕ್ಷಕ್ಕೂ ಹೆಚ್ಚು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳು, ಆಂಧ್ರಪ್ರದೇಶದ ಎಲ್ಲಾ 25 ಸ್ಥಾನಗಳು, ಉತ್ತರ ಪ್ರದೇಶದ 13 ಲೋಕಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಿತು.