ಕರಿಮಣಿ ಮಾಲೀಕ ನೀನಲ್ಲ ಹಾಡು ಬಳಸಿ ಸಚಿವೆ ಶೋಭಾ ವಿರುದ್ದ ಟೀಕೆ
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಕರಿಮಣಿ ಮಾಲೀಕ ನೀನಲ್ಲ ಹಾಡು ರಚಿಸಲಾಗಿದೆ. ಇದೀಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.;
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಕರಿಮಣಿ ಮಾಲೀಕ ನೀನಲ್ಲ ಹಾಡಿನ ಟ್ಯೂನಿಗೆ ಬೇರೆ ಸಾಹಿತ್ಯ ರಚಿಸಿ ಮಾಡಲಾಗಿರುವ ಟ್ರೋಲ್ ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಹದಗೆಟ್ಟ ರಸ್ತೆಗಳು, ಉಡುಪಿಯ ಸಂತೆಕಟ್ಟೆ ಜಂಕ್ಷನ್‌ನ ಹೆದ್ದಾರಿಯ ಒಂದು ಭಾಗ ಕುಸಿಯುವ ವಿಡಿಯೋವನ್ನು ಬಳಸಿಕೊಂಡು ಹಾಡನ್ನು ರಚಿಸಲಾಗಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರ ಖಾತೆಯಿಂದ ಪೋಸ್ಟ್ ಆಗಿರುವ ಹಾಡನ್ನು 1900ಕ್ಕೂ ಹೆಚ್ಚು ಮಂದಿ ಷೇರ್ ಮಾಡಿದ್ದು, 750ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರು ಕಳೆದ ಹತ್ತು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸದ್ಯ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಕೃಷಿ ಖಾತೆಯ ರಾಜ್ಯಸಚಿವೆಯಾಗಿದ್ದಾರೆ. ಆದರೆ, ಗೆದ್ದು ಹೋದ ಬಳಿಕ ಕ್ಷೇತ್ರದ ಜನರ ಸಂಪರ್ಕ ಕಡಿದುಕೊಂಡಿದ್ದಾರೆ. ಕ್ಷೇತ್ರದ ಮೂಲ ಸೌಕರ್ಯ, ಬರ, ನೆರೆಯ ಬಿಕ್ಕಟ್ಟುಗಳು, ಕೃಷಿ ಮತ್ತು ತೋಟಗಾರಿಕೆ ಸಮಸ್ಯೆಗಳ ವಿಷಯದಲ್ಲಿ ಜನಪರವಾಗಿ ನಿಂತಿಲ್ಲ. ಬಿಜೆಪಿಯ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿಲ್ಲ ಎಂಬ ವ್ಯಾಪಕ ದೂರುಗಳು ಸ್ವಪಕ್ಷೀಯರಿಂದಲೇ ಕೇಳಿಬರುತ್ತಿವೆ.
ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪತ್ರ ಚಳವಳಿ, ಬೈಕ್ ರ್ಯಾಲಿ, ನಿಯೋಗ ಮುಂತಾದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕೇವಲ ಪತ್ರಿಕಾಗೋಷ್ಠಿಗಳಿಗೆ ಸೀಮಿತವಾಗಿರುವ ಶೋಭಾ ಅವರ ಬದಲಾಗಿ ಸ್ಥಳೀಯರ ಸಂಪರ್ಕದಲ್ಲಿರುವ, ಸ್ಥಳೀಯ ಸಮಸ್ಯೆಗಳನ್ನು ಬಲ್ಲ ಸ್ಥಳೀಯರಿಗೇ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕು ಎಂದು ನಿರಂತರ ಅಭಿಯಾನ ನಡೆಸುತ್ತಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿರುವ ಕರಿಮಣಿ ಮಾಲೀಕ ನೀನಲ್ಲ ಎಂಬ ಜನಪ್ರಿಯ ಹಾಡಿನ ಟ್ಯೂನ್ ಬಳಸಿ ಸಂಸದೆಯ ವಿರುದ್ಧ ಸ್ಥಳೀಯರು ವ್ಯಂಗ್ಯವಾಡಿದ್ದಾರೆ.