ನಿಜ್ಜರ್ ಹತ್ಯೆ: ನ್ಯಾಯಾಲಯಕ್ಕೆ ಆರೋಪಿಗಳು ಹಾಜರು

Update: 2024-05-08 08:56 GMT

ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಂದ ಆರೋಪ ಹೊತ್ತಿರುವ ಮೂವರು ಭಾರತೀಯ ಪ್ರಜೆಗಳು ಮಂಗಳವಾರ (ಮೇ 7) ಮೊದಲ ಬಾರಿಗೆ ವಿಡಿಯೋ ಮೂಲಕ ಕೆನಡಾದ ನ್ಯಾಯಾಲಯಕ್ಕೆ ಹಾಜರಾಗಿದ್ದರು. 

ಎಡ್ಮಂಟನ್‌ನಲ್ಲಿ ನೆಲೆಸಿರುವ ಕರಣ್ ಬ್ರಾರ್( 22), ಕಮಲ್‌ಪ್ರೀತ್ ಸಿಂಗ್(22) ಮತ್ತು ಕರಣ್‌ಪ್ರೀತ್ ಸಿಂಗ್( 28) ಮೇಲೆ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಅವರೆಲ್ಲರು ವಿದ್ಯಾರ್ಥಿ ವೀಸಾದಲ್ಲಿ ಕೆನಡಾವನ್ನು ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಖಲಿಸ್ತಾನ್ ಬೆಂಬಲಿಗರು: ಹತ್ಯೆ ತಂಡದ ಸದಸ್ಯರು ಎಂದು ನಂಬಲಾದ ಈ ಮೂವರು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ಪ್ರಾಂತೀಯ ನ್ಯಾಯಾಲಯದಲ್ಲಿ ಹಾಜರಾದರು. ನೂರಾರು ಸ್ಥಳೀಯ ಖಲಿಸ್ತಾನ್ ಬೆಂಬಲಿಗರು ಕೂಡ ಕಾಣಿಸಿಕೊಂಡರು ಎಂದು ವ್ಯಾಂಕೋವರ್ ಸನ್ ವರದಿ ಮಾಡಿದೆ.

ವಿಚಾರಣೆಗೆ ಸಾಕ್ಷಿಯಾಗಲು ಬಯಸಿದ ಹೆಚ್ಚುವರಿ 50 ಜನರಿಗೆ ಅವಕಾಶ ಕಲ್ಪಿಸಲು ನ್ಯಾಯಾಲಯದ ಒಳಗೆ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಯಿತು. ನ್ಯಾಯಾಲಯದ ಹೊರಗೆ ಹಲವರು ಖಲಿಸ್ತಾನ್ ಧ್ವಜಗಳನ್ನು ಬೀಸಿದರು ಮತ್ತು ಸಿಖ್ ಪ್ರತ್ಯೇಕತಾವಾದವನ್ನು ಬೆಂಬಲಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಮಾದಕವಸ್ತು ಕಳ್ಳಸಾಗಣೆ: ಆರೋಪಿಗಳು ಜೈಲಿನಿಂದ ನೀಡಿದ ವಸ್ತ್ರ ಧರಿಸಿದ್ದು,ನಾರ್ತ್ ಫ್ರೇಸರ್ ಪ್ರಿ ಟ್ರಯಲ್ ಸೆಂಟರ್‌ನಿಂದ ಪ್ರತ್ಯೇಕವಾಗಿ ಆಗಮಿಸಿದರು. ಆಪಾದಿತರು ಕಳೆದ ಐದು ವರ್ಷಗಳಲ್ಲಿ ಕೆನಡಾ ಪ್ರವೇಶಿಸಿದ್ದಾರೆ. ಮಾದಕವಸ್ತು ಕಳ್ಳಸಾಗಣೆ ಹಾಗೂ ಹಿಂಸಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಭಾರತ ಖಂಡನೆ:  ಪ್ರತ್ಯೇಕತಾವಾದಿಗಳಿಗೆ ಕೆನಡಾ ರಾಜಕೀಯ ನೆಲೆ ನೀಡಿದೆ ಎಂದು ಭಾರತ ಖಂಡಿಸಿದೆ. ಒಂಟಾರಿಯೊದ ಮಾಲ್ಟನ್ ಪ್ರದೇಶದಲ್ಲಿ ನಡೆದ ಮೆರವಣಿಗೆಯಲ್ಲಿ ಭಾರತದ ಪ್ರಧಾನಿ ಅವರ ಭಾವಚಿತ್ರವನ್ನು ಕೆಟ್ಟದಾಗಿ ಪ್ರದರ್ಶಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು,ಕೆನಡಾ ಹಿಂಸಾಚಾರದ ಆಚರಣೆ ಮತ್ತು ವೈಭವೀಕರಣಕ್ಕೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದೆ.   ʻಕೆನಡಾ ಅಪರಾಧಿಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ಸುರಕ್ಷಿತ ನೆಲೆ ಮತ್ತು ರಾಜಕೀಯ ನೆಲೆ ಒದಗಿಸುವುದನ್ನು ನಿಲ್ಲಿಸುವಂತೆ ನಾವು ಮತ್ತೊಮ್ಮೆ ಕರೆ ನೀಡುತ್ತೇವೆʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ನಿಜ್ಜರ್ ಹತ್ಯೆ ಕುರಿತು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಈ ಹೇಳಿಕೆಗಳು ಕೆನಡಾದಲ್ಲಿ ಪ್ರತ್ಯೇಕತಾವಾದ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ನೀಡಿರುವ ರಾಜಕೀಯ ನೆಲೆಯನ್ನು ಮತ್ತೊಮ್ಮೆ ವಿವರಿಸುತ್ತದೆ ಎಂದು ಹೇಳಿದೆ.

ಕೆನಡಾದ ಪ್ರಜೆಯಾದ ನಿಜ್ಜರ್(45) ಅವರನ್ನು ಜೂನ್ 18, 2023 ರಂದು ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟರ ʻಸಂಭಾವ್ಯ ಪಾಲ್ಗೊಳ್ಳುವಿಕೆʼ ಬಗ್ಗೆ ಟ್ರೂಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾದವು.

Tags:    

Similar News