ಉಪರಾಷ್ಟ್ರಪತಿ ಚುನಾವಣೆ| ಸುಪ್ರೀಂ ನಿವೃತ್ತ ನ್ಯಾ. ಸುದರ್ಶನ್ ರೆಡ್ಡಿ ಇಂಡಿಯಾ ಒಕ್ಕೂಟದ ಅಭ್ಯರ್ಥಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ (ಆಗಸ್ಟ್ 8) ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.;
ರೆಡ್ಡಿ ಅವರ ಉಮೇದುವಾರಿಕೆ ಬಗ್ಗೆ ವಿರೋಧ ಪಕ್ಷಗಳಲ್ಲಿ ಸಂಪೂರ್ಣ ಒಮ್ಮತವಿದೆ ಎಂದು ಖರ್ಗೆ ಹೇಳಿದರು.
ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸಲು ಇಂಡಿಯಾ ಒಕ್ಕೂಟ ಮಂಗಳವಾರ (ಆಗಸ್ಟ್ 19) ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಲು ಇಂಡಿಯಾ ಒಕ್ಕೂಟದಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಆಂಧ್ರಪ್ರದೇಶದ ಮೂಲದ ನ್ಯಾ.ಸುದರ್ಶನ್ ರೆಡ್ಡಿ ಅವರು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಗೋವಾದ ಮೊದಲ ಲೋಕಾಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸೋಮವಾರ (ಆಗಸ್ಟ್ 18) ದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ್ದ ಇಂಡಿಯಾ ಒಕ್ಕೂಟದ ನಾಯಕರು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚಿಸಿದ್ದರು. ಸತತ ಎರಡು ಸಭೆಗಳ ಬಳಿಕ ಒಮ್ಮತದ ಅಭ್ಯರ್ಥಿಯನ್ನು ಮಂಗಳವಾರ ಘೋಷಿಸಲಾಯಿತು. ಇಂಡಿಯಾ ಒಕ್ಕೂಟದ ಅಭ್ಯರ್ಥಿಗೆ ಎಎಪಿ ಕೂಡ ಬೆಂಬಲ ಸೂಚಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್ ಹೇಳಿದರು.
ಉಪರಾಷ್ಟ್ರಪತಿ ಚುನಾವಣೆಗೆ ಆ. 21 ರಂದು ನಾಮಪತ್ರ ಸಲ್ಲಿಸಲಾಗುವುದು. ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರು ಆಗಸ್ಟ್ 20 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಮಿತ್ರಪಕ್ಷಗಳಿಗೆ ಇಷ್ಟವಿರಲಿಲ್ಲ
ಸಂಸತ್ತಿನ ಉಭಯ ಸದನಗಳಲ್ಲಿಯೂ ಎನ್‌ಡಿಎಗೆ ಸಂಖ್ಯಾಬಲವಿದೆ. ಹಾಗಾಗಿ ಅಭ್ಯರ್ಥಿಯನ್ನು ಹಾಕದಿರಲು ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳು ಅಭ್ಯರ್ಥಿ ಆಯ್ಕೆಗೆ ಅಸಮ್ಮತಿ ಸೂಚಿಸಿದ್ದವು ಎಂದು ಹೇಳಲಾಗಿದೆ. ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷಗಳ ಸದಸ್ಯರು ಎನ್‌ಡಿಎ ಅಡ್ಡ-ಮತದಾನದ ಭೀತಿಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.
ಉಪರಾಷ್ಟ್ರಪತಿ ಹುದ್ದೆಗೆ 'ಇಂಡಿಯಾ' ಒಕ್ಕೂಟವು ಹಲವರ ಹೆಸರನ್ನು ಪ್ರಸ್ತಾಪಿಸಿತ್ತು. ಇಸ್ರೋ ಮಾಜಿ ವಿಜ್ಞಾನಿ ಮೈಲ್‌ಸ್ವಾಮಿ ಅಣ್ಣಾದೊರೈ, ಡಿಎಂಕೆ ಸಂಸದ ತಿರುಚಿ ಶಿವ ಅವರನ್ನು ಹೆಸರಿಸಿತ್ತು. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡಿದ್ದಲ್ಲದೇ, ಎನ್‌ಡಿಎ ತಂತ್ರಕ್ಕೆ ತಿರುಗೇಟು ನೀಡಲು ತಮಿಳುನಾಡು ಮೂಲದವರಿಗೆ ಆದ್ಯತೆ ನೀಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ತಮಿಳುನಾಡು ಮೂಲದವರ ಹೆಸರನ್ನು ಕೈಬಿಡಲಾಯಿತು.
ಇದೇ ಸಂದರ್ಭ ಮಹಾತ್ಮ ಗಾಂಧಿಯವರ ಮರಿಮೊಮ್ಮಗ, ಸರ್ಕಾರದಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಚಿಂತಕ ಮತ್ತು ಅವಿಭಜಿತ ಆಂಧ್ರಪ್ರದೇಶದ ಪ್ರಭಾವಿ ವ್ಯಕ್ತಿ ತುಷಾರ್ ಗಾಂಧಿ ಅವರ ಹೆಸರೂ ಕೂಡ ಚರ್ಚೆಯಲ್ಲಿತ್ತು ಎಂದು ವರದಿಯಾಗಿದೆ. ಕಳೆದ ತಿಂಗಳು ಜಗದೀಪ್ ಧನ್‌ಕರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.