ಮೇ ಮೊದಲ ವಾರದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಶಾಖದ ಅಲೆ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಪುದುಚೇರಿಗಳಲ್ಲಿ ಮೇ 6 ವರೆಗೆ ಬಿಸಿ ಗಾಳಿ ಪರಿಸ್ಥಿತಿ ಇರಲಿದೆ. ಕೇರಳದಲ್ಲಿ ಮೇ 2ರಂದು ಹಾಗೂ ತಮಿಳುನಾಡಿನಲ್ಲಿ ಶುಕ್ರವಾರ (ಮೇ 3)ದವರೆಗೆ ಇಂಥದ್ಧೇ ಪರಿಸ್ಥಿತಿ ಇರುತ್ತದೆ ಎಂದು ಐಎಂಡಿ ಹೇಳಿದೆ. ಜಾರ್ಖಂಡ್‌ನಲ್ಲಿ ಗುರುವಾರ (ಮೇ 2) ತೀವ್ರ ಶಾಖದ ಅಲೆಗಳು ಮತ್ತು ಶನಿವಾರ (ಮೇ 4) ವರೆಗೆ ಶಾಖದ ಅಲೆಗಳು ಇರಲಿವೆ.
ದೆಹಲಿಯಲ್ಲಿ ತಾಪಮಾನ 49 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಉತ್ತರ ಭಾರತದಾದ್ಯಂತ ತೀವ್ರವಾದ ಶಾಖದ ಅಲೆಗಳು ವ್ಯಾಪಿಸುತ್ತಿವೆ. ಗಂಗಾನದಿ ತೀರದ ಪಶ್ಚಿಮ ಬಂಗಾಳ, ಪೂರ್ವ ಜಾರ್ಖಂಡ್, ಉತ್ತರ ಒಡಿಶಾ, ರಾಯಲಸೀಮಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಾಪಮಾನ 44 ರಿಂದ 47 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ದೇಶದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳು ಕೂಡ ಶಾಖದ ಅಲೆಗಳಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಐಎಂಡಿ ಹೇಳಿದೆ.
ಐದು ದಿನ ಶಾಖದ ಅಲೆ ಸಾಧ್ಯತೆ: ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನ ಶಾಖದ ಅಲೆ ಎಚ್ಚರಿಕೆಯನ್ನು ಐಎಂಡಿ ನೀಡಿದೆ. ಮಧ್ಯ, ವಾಯವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಮೇ ತಿಂಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಅಧಿಕ ತಾಪಮಾನ ಇರಲಿದೆ ಎಂದು ಏಜೆನ್ಸಿ ಮುನ್ಸೂಚನೆ ನೀಡಿದೆ.
ವಿದರ್ಭ, ಪಶ್ಚಿಮ ಮಧ್ಯಪ್ರದೇಶ, ಗುಜರಾತ್, ದಕ್ಷಿಣ ರಾಜಸ್ಥಾನ ಮತ್ತು ಮರಾಠವಾಡಗಳು ಮೇ ತಿಂಗಳಿನಲ್ಲಿ 5 ರಿಂದ 8 ಹೆಚ್ಚುವರಿ ಶಾಖದ ಅಲೆಗಳಿಗೆ ಸಾಕ್ಷಿಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಏಪ್ರಿಲ್‌ನಲ್ಲಿ ಅತಿ ಹೆಚ್ಚು: ಕಳೆದ 15 ವರ್ಷಕ್ಕೆ ಹೋಲಿಸಿದರೆ, ಏಪ್ರಿಲ್‌ನಲ್ಲಿ ಅತಿ ಹೆಚ್ಚು ಶಾಖದ ಅಲೆಗಳು ಇದ್ದವು ಎಂದು ಐಎಂಡಿ ಹೇಳಿದೆ. ತಮಿಳುನಾಡಿನ ಊಟಿ ಮತ್ತು ಮಹಾರಾಷ್ಟ್ರದ ಮಾಥೆರಾನ್‌ನಂತಹ ಗಿರಿಧಾಮಗಳಲ್ಲಿ ಕೂಡ ಹೆಚ್ಚಿನ ತಾಪಮಾನ ಇದ್ದಿತ್ತು. ಈ ಗಿರಿಧಾಮಗಳಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್ ಮತ್ತು 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಊಟಿ ಈ ವರ್ಷ ಅತ್ಯಂತ ಬಿಸಿಯಾಗಿದೆ ಎಂದು ಸಂಸ್ಥೆ ಹೇಳಿದೆ.
ಮತ ಚಲಾವಣೆ ಸಮಯ ಬದಲಾವಣೆ: ತೆಲಂಗಾಣದಲ್ಲಿ ಬಿಸಿ ಗಾಳಿ ಅಲೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಆಯೋಗವು ಮತ ಚಲಾವಣೆ ಸಮಯವನ್ನು ಸಂಜೆ ಒಂದು ಗಂಟೆ ಹೆಚ್ಚಿಸಿದೆ. ಹೊಸ ಸಮಯ ಬೆಳಗ್ಗೆ 7 ರಿಂದ ಸಂಜೆ 6. ತೆಲಂಗಾಣದಲ್ಲಿ ಮೇ 13ರಂದು ಎಲ್ಲ 17 ಸ್ಥಾನಗಳಿಗೆ ಮತದಾನ ನಡೆಯಲಿದೆ.