ಹರ್ಯಾಣದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಮೂವರು ಸ್ವತಂತ್ರ ಶಾಸಕರು ಬಿಜೆಪಿಗೆ ಬೆಂಬಲ ಹಿಂಪಡೆದಿದ್ದು, ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಸರ್ಕಾರ ವನ್ನು ವಜಾಗೊಳಿಸುವಂತೆ ಒತ್ತಾಯಿಸಿ, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆಯುವುದಾಗಿ ಪಕ್ಷ ಬುಧವಾರ (ಮೇ 8) ತಿಳಿಸಿದೆ.
ಜೆಜೆಪಿ, ಐಎನ್‌ಎಲ್‌ಡಿ ಮತ್ತು ಸ್ವತಂತ್ರ ಶಾಸಕ ಬಾಲ್‌ರಾಜ್ ಕುಂಡು ಕೂಡ ರಾಜ್ಯಪಾಲರಿಗೆ ಇಂಥದ್ದೇ ಪತ್ರ ಬರೆಯುವಂತೆ ಅದು ಕೇಳಿದೆ. ಆದರೆ, ಬುಧವಾರ ಸಿರ್ಸಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಯಾಬ್ ಸಿಂಗ್ ಸೈನಿ, ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.ಅದು ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರಿಗೆ ಪತ್ರ: ʻಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿದ್ದು, ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದಾರೆ ಎಂದು ರಾಜ್ಯಪಾಲ ರಿಗೆ ಪತ್ರ ಬರೆಯಲಿದ್ದೇವೆ. ಸರ್ಕಾರ ಬಹುಮತ ಕಳೆದುಕೊಂಡಿದ್ದು, ಅವರಿಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ. ಸರ್ಕಾರವನ್ನು ವಜಾಗೊಳಿಸಬೇಕು, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಮತ್ತು ಹೊಸದಾಗಿ ಚುನಾವಣೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆʼ ಎಂದು ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಹೇಳಿದ್ದಾರೆ.
ʻಜೆಜೆಪಿ ಕೂಡ ಸರ್ಕಾರ ವಜಾಗೊಳಿಸುವಂತೆ ಪತ್ರ ಬರೆಯಬೇಕು. ಸರ್ಕಾರವನ್ನು ವಿರೋಧಿಸುವುದಾಗಿ ಹೇಳಿಕೊಳ್ಳುವ ಐಎನ್‌ಎಲ್‌ಡಿ ನಾಯಕ ಅಭಯ್ ಸಿಂಗ್ ಚೌತಾಲಾ ಮತ್ತು ಸ್ವತಂತ್ರ ಶಾಸಕ ಬಲರಾಜ್ ಕುಂಡು ಕೂಡ ಇಂಥದ್ದೇ ಪತ್ರ ಬರೆಯಬೇಕುʼ ಎಂದು ಹೇಳಿದರು.
ಜೆಜೆಪಿ ನಿಲುವು ಸ್ಪಷ್ಟಪಡಿಸಲಿ: ʻರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಜನನಾಯಕ್ ಜನತಾ ಪಕ್ಷ (ಜೆಜೆಪಿ), ರಾಜ್ಯಪಾಲರಿಗೆ ಪತ್ರ ಬರೆದು ತಾವು ಆಡಳಿತ ಪಕ್ಷವನ್ನು ಬೆಂಬಲಿಸುತ್ತಿಲ್ಲವೆಂದು ಸ್ಪಷ್ಟಪಡಿಸಬೇಕುʼ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಬಿ. ಬಾತ್ರಾ ಹೇಳಿದ್ದಾರೆ. ಜೆಜೆಪಿ ನಾಯಕ ದಿಗ್ವಿಜಯ್ ಸಿಂಗ್ ಚೌತಾಲಾ ಅವರು, ʻಜನರ ವಿಶ್ವಾಸವನ್ನು ಕಳೆದುಕೊಂಡಿರುವ ನಯಾಬ್ ಸಿಂಗ್ ಸೈನಿ ಸರ್ಕಾರವನ್ನು ಕೆಳಗಿಳಿಸುವ ಪ್ರಕ್ರಿಯೆಯನ್ನು ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಪ್ರಾರಂಭಿಸಬೇಕುʼ ಎಂದು ಮಂಗಳವಾರ ಹೇಳಿದ್ದರು.
ಚೌತಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾತ್ರಾ, ʻಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿಲ್ಲ ಎಂದು ಜೆಜೆಪಿ ರಾಜ್ಯಪಾಲರಿಗೆ ಪತ್ರ ಬರೆಯಲಿ. ಬಿಜೆಪಿಗೆ ಜೆಜೆಪಿ ಬೆಂಬಲ ನೀಡುತ್ತಿಲ್ಲ ಎನ್ನುವುದು ನಮಗೆ ತಿಳಿದಿರಬಹುದು. ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವಂತೆ, ಜೆಜೆಪಿ ಕೂಡ ಪತ್ರ ಬರೆಯಬೇಕು,ʼ ಎಂದರು.
ಸರ್ಕಾರಕ್ಕೆ ಅಪಾಯವಿಲ್ಲ: ಬಿಜೆಪಿ ಸೈನಿ ಅವರು ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಬದಲಿಸಿದ್ದರು. ʻಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲʼ ಎಂದು ಬಿಜೆಪಿಯ ಜವಾಹರ್ ಯಾದವ್ ಹೇಳಿದ್ದಾರೆ. ʻಸೈನಿ ಸರ್ಕಾರ ಮಾರ್ಚ್ 13 ರಂದು ವಿಶ್ವಾಸಮತವನ್ನು ಗೆದ್ದಿದೆ. ಅಗತ್ಯವಿದ್ದಲ್ಲಿ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಲಿದೆ,ʼ ಎಂದು ಹೇಳಿದರು. ಇಬ್ಬರು ಪಕ್ಷೇತರರ ಬೆಂಬಲ ಹೊಂದಿರುವ ಸರ್ಕಾರಕ್ಕೆ ಬಹುಮತಕ್ಕೆ ಎರಡು ಶಾಸಕರ ಕೊರತೆಯಿದೆ.
ಜೆಜೆಪಿ ಬೆಂಬಲ: ಸದನದಲ್ಲಿ ಬಿಜೆಪಿ 40, ಕಾಂಗ್ರೆಸ್ 30 ಮತ್ತು ಜೆಜೆಪಿ 10 ಶಾಸಕರನ್ನು ಹೊಂದಿದೆ. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೆ, ಜೆಜೆಪಿ ಶಾಸಕರು ಗೈರುಹಾಜರಾಗಬಹುದು. ವಿಧಾನಸಭೆ ಎರಡು ಅಧಿವೇಶನಗಳ ನಡುವಿನ ಮಧ್ಯಂತರ ಅವಧಿ ಆರು ತಿಂಗಳಿಗಿಂತ ಹೆಚ್ಚಿರಬಾರದು. ಹೀಗಾಗಿ, ರಾಜ್ಯಪಾಲರು ಸೆಪ್ಟೆಂಬರ್ 13 ರಂದು ಅಧಿವೇಶನ ಕರೆಯಬೇಕಾಗುತ್ತದೆ. ಕರ್ನಾಲ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೈನಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರು ಗೆದ್ದರೆ ವಿಧಾನಸಭೆಯಲ್ಲಿ ಪಕ್ಷದ ಬಲ 41 ಕ್ಕೆ ಏರಲಿದೆ.
ಹರಿಯಾಣದಲ್ಲಿ ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.