ಏಪ್ರಿಲ್ 20: ಬಿಜೆಪಿ-ಆರ್‌ಎಸ್‌ಎಸ್ ಮತ್ತು ಬೆರಳೆಣಿಕೆಯಷ್ಟು ಶತಕೋಟ್ಯಧಿಪತಿಗಳು ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನಕ್ಕೆ ಅಪಾಯ ಉಂಟುಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದರು.
ಬಿಹಾರದ ಭಾಗಲ್ಪುರದಲ್ಲಿ ತಮ್ಮ ಮೊದಲನೆ ಚುನಾವಣಾ ಸಭೆಯಲ್ಲಿ ಮಾತನಾಡಿ, ʻನರೇಂದ್ರ ಮೋದಿ ಆಡಳಿತದಲ್ಲಿ ಮನ್ನಾ ಮಾಡಿದ ಸಾಲದ ಮೊತ್ತ ನಾವು ಮನ್ನಾ ಮಾಡಿದ ರೈತರ ಸಾಲದ 25 ಪಟ್ಟು ಹೆಚ್ಚು. 70 ಕೋಟಿ ಜನರ ಆಸ್ತಿಗೆ ಸಮನಾದ ಸಂಪತ್ತನ್ನು ಹೊಂದಿರುವ 22 ಮಂದಿ ದೇಶದಲ್ಲಿದ್ದಾರೆ. ದೇಶದ 70 ಕೋಟಿ ಜನರು ದಿನವೊಂದಕ್ಕೆ 100 ರೂ.ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆʼ ಎಂದು ಹೇಳಿದರು.
ʻಮೋದಿ ಅವರು 25 ಜನರ ಸುಮಾರು 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಇದು ನರೇಗಾದ 25 ವರ್ಷಗಳ ವೆಚ್ಚಕ್ಕೆ ಸಮ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಸಂಪತ್ತನ್ನು ಬಡ ಜನರ ನಡುವೆ ಹಂಚಲು ಬದ್ಧವಾಗಿದೆʼ ಎಂದು ಹೇಳಿದರು.
ನೋಟು ರದ್ದು, ಜಿಎಸ್‌ಟಿಯಿಂದ ಉದ್ಯೋಗಕ್ಕೆ ಹೊಡೆತ: ʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 'ಮಹಾಲಕ್ಷ್ಮಿ'ಯಂತಹ ಯೋಜನೆಗಳ ಮೂಲಕ ಬಡವರಿಗೆ ಸಹಾಯ ಮಾಡಲಾಗುವುದು. ಬಡ ಕುಟುಂಬ ದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಜನರು ತಮ್ಮ ಸುತ್ತಲಿನ ಪರಿಸ್ಥಿತಿಯತ್ತ ಗಮನ ಹರಿಸುವುದು ಮೋದಿ ಅವರಿಗೆ ಇಷ್ಟವಿಲ್ಲ. ಅವರು ಕೆಲವು ವಿಧಾನಗಳ ಮೂಲಕ ನಿಮ್ಮೆಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆʼ ಎಂದು ಆರೋಪಿಸಿದರು.
ʻದೇಶದ ಎಲ್ಲೆಡೆ ಯುವಜನರು ಸ್ಮಾರ್ಟ್‌ಫೋನಿನಲ್ಲಿ ಗಂಟೆಗಟ್ಟಲೆ ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡಿರುತ್ತಾರೆ. ದೇಶ ನಿರುದ್ಯೋಗದ ಕೇಂದ್ರವಾಗಿ ಮಾರ್ಪಟ್ಟಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ದೋಷಯುಕ್ತ ಅನುಷ್ಠಾನದಿಂದ ಉದ್ಯೋಗ ಸೃಷ್ಟಿಗೆ ಹೊಡೆತ ಬಿದ್ದಿದೆʼ ಎಂದರು.
'ಅಗ್ನಿಪಥ' ಯೋಜನೆ ರದ್ದು: 'ಅಗ್ನಿಪಥ' ಯೋಜನೆಯನ್ನು ತೆಗೆದುಹಾಕುತ್ತೇವೆ. ರೈತರ ಸಾಲ ಮನ್ನಾ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಲಾಗುತ್ತದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ. ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಎಲ್ಲವೂ ಸಿಕ್ಕಿರುವುದು ಸಂವಿಧಾನದಿಂದ. ಆದರೆ, ಬಿಜೆಪಿ-ಆರ್‌ಎಸ್‌ಎಸ್ ಮತ್ತು ನಾಲ್ಕೈದು ಶತಕೋಟ್ಯಧಿಪತಿಗಳಿಂದ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನವನ್ನು ರದ್ದುಪಡಿಸುವಲ್ಲಿ ಈವರೆಗಿನ ಎಲ್ಲ ಅಭಿವೃದ್ಧಿ ಅಂತ್ಯಗೊಳ್ಳುತ್ತದೆʼ ಎಂದು ಹೇಳಿದರು.
ಬಿಜೆಪಿ 370ಕ್ಕೂ ಹೆಚ್ಚು ಮತ್ತು ಮಿತ್ರಪಕ್ಷಗಳೊಂದಿಗೆ 400ಕ್ಕೂ ಅಧಿಕ ಸ್ಥಾನ ಗಳಿಸಲಿದೆ ಎಂಬ ಪ್ರಧಾನಿ ಹೇಳಿಕೆಯನ್ನು ಲೇವಡಿ ಮಾಡಿ, ʻಅವರು ವಿಲಕ್ಷಣ ವಾದ ಮಾಡುತ್ತಾರೆ. ಆದರೆ, ಅವರು 150 ಸ್ಥಾನ ದಾಟುವುದಿಲ್ಲʼ ಎಂದು ಹೇಳಿದರು.