ಪಾಕಿಸ್ತಾನವನ್ನು ಗೌರವಿಸಬೇಕು: ಮಣಿಶಂಕರ್ ಅಯ್ಯರ್
ವಿವಾದ ಸೃಷ್ಟಿಸಿದ ಹೇಳಿಕೆ, ಅಂತರ ಕಾಯ್ದುಕೊಂಡ ಕಾಂಗ್ರೆಸ್;
ʻಪಾಕಿಸ್ತಾನ ನಮ್ಮ ಮೇಲೆ ಅಣುಬಾಂಬ್ ಹಾಕದಂತೆ ಭಾರತ ಆ ದೇಶವನ್ನು ಗೌರವಿಸಬೇಕುʼ ಎಂಬ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಶುಕ್ರವಾರ (ಮೇ 10) ಅಂತರ ಕಾಯ್ದುಕೊಂಡಿದೆ.
ʻಕಾಂಗ್ರೆಸ್ ಕೆಲವು ತಿಂಗಳ ಹಿಂದೆ ಮಣಿಶಂಕರ್ ಅಯ್ಯರ್ ಅವರು ನೀಡಿದ ಹೇಳಿಕೆಗಿಂತ ಸಂಪೂರ್ಣವಾಗಿ ಭಿನ್ನಾಭಿಪ್ರಾಯ ಹೊಂದಿದೆ. ಬಿಜೆಪಿ ಪ್ರಧಾನಿ ಮೋದಿಯವರ ಹೇಳಿಕೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅಯ್ಯರ್ ಅವರ ಹೇಳಿಕೆಯನ್ನು ಬಳಸಿಕೊಂಡಿ ದೆʼ ಎಂದು ಪವನ್ ಖೇರಾ ಎಕ್ಸ್ ನಲ್ಲಿ ಹೇಳಿದ್ದಾರೆ.
ಹಳೆಯ ಹೇಳಿಕೆ: ಅಯ್ಯರ್ ʻಹಲವು ತಿಂಗಳುಗಳ ಹಿಂದೆ ಚಳಿಗಾಲದಲ್ಲಿ ಚಿಲ್ ಪಿಲ್‌ಗೆ ನೀಡಿದ ಹೇಳಿಕೆ ಇದಾಗಿದ್ದು, ಧರಿಸಿರುವ ಸ್ವೆಟರ್ ನಿಂದ ಸ್ಪಷ್ಟವಾಗಿದೆʼ ಎಂದು ಅಯ್ಯರ್ ಹೇಳಿದ್ದಾರೆ. ʻಬಿಜೆಪಿಯ ಚುನಾವಣೆ ಪ್ರಚಾರ ಕುಂಟುತ್ತಿರುವುದರಿಂದ, ಹಳೆಯ ಹೇಳಿಕೆಯನ್ನು ಈಗ ಮುನ್ನೆಲೆಗೆ ತರಲಾಗಿದೆ. ಆಸಕ್ತರು ಕಳೆದ ವರ್ಷ ಜಗ್ಗರ್‌ನಾಟ್ ಪ್ರಕಟಿಸಿದ ನನ್ನ ಪುಸ್ತಕಗಳಾದ 'ಮೆಮಾಯ್ರ್ಸ್ ಆಫ್ ಎ ಮೇವರಿಕ್' ಮತ್ತು 'ದಿ ರಾಜೀವ್ ಐ ನೋ'ದಲ್ಲಿನ ಸಂಬಂಧಿತ ಭಾಗಗಳನ್ನು ದಯವಿಟ್ಟು ಓದಬಹುದು,ʼಎಂದು ಅಯ್ಯರ್ ಹೇಳಿದರು.
ವೈರಲ್ ಆದ ವಿಡಿಯೋದಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಬೇಕು. ಬಾಹುಬಲ ಪ್ರದರ್ಶಿಸಬಾರದು ಎಂದು ಹೇಳಿದ್ದರು. ʻಸರ್ಕಾರ ಇಸ್ಲಾಮಾಬಾದ್‌ನೊಂದಿಗೆ ಕಠಿಣವಾಗಿ ಮಾತನಾಡಬಹುದು. ಆದರೆ, ನೆರೆಯ ದೇಶವನ್ನು ಗೌರವಿಸದಿದ್ದರೆ ಭಾರಿ ಬೆಲೆ ತೆರಬೇಕಾಗಬಹುದು. ಅವರ ಬಳಿ ಪರಮಾಣು ಬಾಂಬುಗಳಿವೆ. ನಮ್ಮಲ್ಲಿಯೂ ಇದೆ. ಲಾಹೋರ್ ಮೇಲೆ ಬಾಂಬ್ ಹಾಕಿದರೆ, ವಿಕಿರಣ ಅಮೃತಸರವನ್ನು ತಲುಪಲು 8 ಸೆಕೆಂಡು ಸಾಕು,ʼ ಎಂದು ಎಚ್ಚರಿಸಿದ್ದರು.
ಬಿಜೆಪಿ ವಾಗ್ದಾಳಿ: ಪಾಕಿಸ್ತಾನ ಮತ್ತು ಅದರ ಭಯೋತ್ಪಾದನೆಗೆ ಕಾಂಗ್ರೆಸ್ ಕ್ಷಮೆಯಾಚಿಸುತ್ತಿದೆʼ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ. ʻಹೊಸ ಭಾರತ ಯಾರಿಗೂ ಹೆದರುವುದಿಲ್ಲ.ಅಯ್ಯರ್ ಅವರ ಹೇಳಿಕೆಗಳು ಕಾಂಗ್ರೆಸ್‌ನ ಉದ್ದೇಶ, ನೀತಿ ಮತ್ತು ಸಿದ್ಧಾಂತಗಳನ್ನು ಎತ್ತಿ ತೋರಿಸಿದೆ,ʼ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.