ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ

ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದಿದ್ದ ಒಂದು ವಾರದಲ್ಲೇ ಯು-ಟರ್ನ್;

Update: 2024-05-04 12:21 GMT

ದೆಹಲಿ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು. 

ಆಮ್ ಆದ್ಮಿ ಪಕ್ಷದೊಂದಿಗೆ ಕಾಂಗ್ರೆಸ್‌ ಮೈತ್ರಿಯಿಂದಾಗಿ ತಾವು ರಾಜೀನಾಮೆ ನೀಡಿರುವುದಾಗಿ ಹೇಳಿದ್ದ ಅವರು,  ಒಂದು ವಾರದೊಳಗೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಏಪ್ರಿಲ್ 28 ರಂದು,ʻಕಾಂಗ್ರೆಸ್‌ನ ದೆಹಲಿ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲʼ ಎಂದು ಹೇಳಿದ್ದರು. ಹರ್ಷ್ ಮಲ್ಹೋತ್ರಾ ಅವರ ಬದಲು ಪೂರ್ವ ದೆಹಲಿ ಕ್ಷೇತ್ರದಿಂದ ಲವ್ಲಿ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಆಸಿಫ್ ಮೊಹಮ್ಮದ್ ಖಾನ್ ಹೇಳಿದ ನಂತರ ಈ ಸ್ಪಷ್ಟೀಕರಣ ಬಂದಿತ್ತು. 

ಕಾಂಗ್ರೆಸ್ ವಿರುದ್ಧ ಲವ್ಲಿ ದೂರು: ʻಎಎಪಿ ಜೊತೆಗಿನ ಮೈತ್ರಿಗೆ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿ ಸರ್ಕಾರದ ಹಲವು ಸಚಿವರು ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದಾರೆ. ಕಾಂಗ್ರೆಸ್‌ನ ದೆಹಲಿ ಉಸ್ತುವಾರಿ ದೀಪಕ್ ಬಬಾರಿಯಾ ತಮಗೆ ಕೆಲಸ ಮಾಡಲು ಬಿಡಲಿಲ್ಲ. ಈಶಾನ್ಯ ದೆಹಲಿಯಿಂದ ಕನ್ಹಯ್ಯಾ ಕುಮಾರ್ ಮತ್ತು ವಾಯವ್ಯ ದೆಹಲಿ ಕ್ಷೇತ್ರದಿಂದ ಉದಿತ್ ರಾಜ್ ಅವರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರ ಸರಿಯಿಲ್ಲ. ಇವರ ಸ್ಪರ್ಧೆ ಬಗ್ಗೆ ತಮ್ಮೊಂದಿಗೆ ಚರ್ಚಿಸಲಿಲ್ಲʼ ಎಂದು ದೂರಿದ್ದರು. 

Tags:    

Similar News