ಕಾಂಗ್ರೆಸ್‌: ಬಗೆಹರಿದ ಅಮೇಥಿ, ರಾಯ್‌ ಬರೇಲಿ ಒಗಟು

ರಾಯ್‌ಬರೇಲಿಯನ್ನು ಕುಟುಂಬದಲ್ಲೇ ಉಳಿಸಿಕೊಂಡು, ಅಮೇಥಿಯನ್ನು ದೀರ್ಘಕಾಲದ ನಿಷ್ಠಾವಂತ ಶರ್ಮಾಗೆ ಬಿಟ್ಟುಕೊಡುವ ಗಾಂಧಿ ಕುಟುಂಬದ ನಿರ್ಧಾರವು ಚುನಾವಣೆ ಫಲಿತಾಂಶ ಮತ್ತು ಪಕ್ಷದ ಮೇಲೆ ಪರಿಣಾಮ ಬೀರಲಿದೆ.

Update: 2024-05-03 12:45 GMT

ಕಾಂಗ್ರೆಸ್ ಅಂತಿಮವಾಗಿ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಗೆ ಶುಕ್ರವಾರ ಮುಂಜಾನೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ರಾಹುಲ್ ಗಾಂಧಿ ಮತ್ತು ಕೆಎಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. 

ರಾಹುಲ್ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ರಾಯ್ ಬರೇಲಿಯ ಹಾಲಿ ಸಂಸದೆ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ, ಅಮೇಥಿಯಿಂದ ರಾಹುಲ್ ಮತ್ತು ಪ್ರಿಯಾಂಕಾ ರಾಯ್ ಬರೇಲಿಯಿಂದ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. 

ಎಚ್ಚರಿಕೆಯ ನಡೆ: ರಾಯ್‌ಬರೇಲಿಯನ್ನು ಕುಟುಂಬದೊಳಗೆ ಉಳಿಸಿಕೊಂಡು, ಅಮೇಥಿಯನ್ನು ತಮ್ಮ ದೀರ್ಘಕಾಲದ ನಿಷ್ಠಾವಂತ ಶರ್ಮಾಗೆ ಬಿಟ್ಟುಕೊಡುವ ಗಾಂಧಿ ಕುಟುಂಬದ ನಿರ್ಧಾರವು ಚುನಾವಣೆ ಫಲಿತಾಂಶದ ಮೇಲೆ ಮತ್ತು ವಿಶೇಷವಾಗಿ, ಪಕ್ಷದ ಮೇಲೆ ನೈತಿಕತೆ ಪರಿಣಾಮ ಬೀರಲಿದೆ. ರಾಹುಲ್‌ ಐದು ವರ್ಷಗಳ ಹಿಂದೆ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋತಿದ್ದರು. 

ಆದರೆ, ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಚುನಾವಣೆ ನಿರೂಪಣೆಯನ್ನು ಬಹಳ ಎಚ್ಚರಿಕೆಯಿಂದ ರಚಿಸಬೇಕಿದೆ. ಚುನಾವಣೆ ವೇಳೆ ಗಾಂಧಿ ಕುಟುಂಬ ಬಿಜೆಪಿಯಿಂದ ಎದುರಿಸಬಹುದಾದ ಟೀಕಾಸ್ತ್ರಗಳನ್ನು ತಳ್ಳಿಹಾಕಲು ಮಾತ್ರವಲ್ಲದೆ, ಒಂದುವೇಳೆ ರಾಹುಲ್‌ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದುರಾಗಲಿದೆ. 2019ರಲ್ಲಿ ಅವರು ಗೆದ್ದು, ಮರುಚುನಾವಣೆ ಬಯಸಿರುವ ಕೇರಳದ ವಯನಾಡ್ ಕ್ಷೇತ್ರವನ್ನೇ ಅಥವಾ ರಾಯ್‌ ಬರೇಲಿಯನ್ನೇ?

ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ತ್ಯಜಿಸುವುದು ಗಾಂಧಿ ಕುಟುಂಬಕ್ಕೆ ಸುಲಭದ ಆಯ್ಕೆಯಾಗಿರಲಿಲ್ಲ.ಸ್ಮೃತಿ ಇರಾನಿ ವಿರುದ್ಧ ಎರಡನೇ ಸೋಲಿನ ಸಾಧ್ಯತೆ ಮತ್ತು ಅದರ ವ್ಯಾಪಕ ಪರಿಣಾಮಗಳು ಕಳೆದ ಹದಿನೈದು ದಿನಗಳಿಂದ ಗಾಂಧಿ ಕುಟುಂಬ ಮತ್ತು ಅವರ ಪಕ್ಷದ ಮೇಲೆ ಅಪಾರ ಒತ್ತಡ ಹೇರಿದ್ದವು.ಇದರಿಂದ ಅಮೇಥಿ ಮತ್ತು ರಾಯ್ ಬರೇಲಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಮುಂದೂಡುತ್ತಲೇ ಬಂದಿದ್ದರು.

ಅಮೇಥಿಯನ್ನು ಕೈಬಿಡುವುದು ಎಂದರೆ?: ಕುಟುಂಬದ ಭದ್ರಕೋಟೆಗಳಿಂದ ಸ್ಪರ್ಧಿಸಬೇಕೆ ಅಥವಾ ಹೊರಗುಳಿಯಬೇಕೆ ಎಂಬ ಬಗ್ಗೆ ಗಾಂಧಿ ಕುಟುಂಬದ ಅನಿಶ್ಚಿತತೆಯು ಬಿಜೆಪಿಯಿಂದ ಅಪಹಾಸ್ಯಗಳ ಬಿರುಗಾಳಿಯನ್ನು ಎದುರಿಸಿತ್ತು. ಇರಾನಿ ಅವರ 2019 ರ ಗೆಲುವಿನ ಸಂಭ್ರಮ ಮುಂದುವರಿದಿದೆ. ಕಾಂಗ್ರೆಸ್‌ನ ಮೊದಲ ಕುಟುಂಬ ತನ್ನ ಕರ್ಮಭೂಮಿಯನ್ನು ತ್ಯಜಿಸುತ್ತಿದೆ ಮತ್ತು ಇರಾನಿ ವಿರುದ್ಧ ಸತತ ಎರಡನೇ ಸೋಲಿನ ಭಯದಲ್ಲಿ ರಾಹುಲ್ ಇದ್ದಾರೆ ಎಂದು ಕೇಸರಿ ಪಕ್ಷದ ಪುಡಿ ನಾಯಕರು ಹೇಳಿಕೊಳ್ಳುತ್ತಿದ್ದರು.

ರಾಹುಲ್ ರಾಯ್ ಬರೇಲಿಯಿಂದ ಸ್ಪರ್ಧಿಸುವ ಮೂಲಕ‌ ತಾಯಿಯಿಂದ ಕುಟುಂಬದ ನೆಲೆಯನ್ನು ಮಗ ತೆಗೆದುಕೊಳ್ಳುತ್ತಿದ್ದಾನೆ ಎಂಬ ಭಾವನಾತ್ಮಕ ಕಾರ್ಡ್ ಬಳಸುತ್ತಿದ್ದಾರೆ. ಆದರೆ, ಅದು ಬಿಜೆಪಿಯಿಂದ ಪ್ರತಿರೋಧವನ್ನು ತಟಸ್ಥಗೊಳಿಸುವುದಿಲ್ಲ.

ಅಮೇಥಿ ರಾಹುಲ್‌ ಅವರನ್ನು 2004, 2009 ಮತ್ತು 2014 ರಲ್ಲಿ ಮತ್ತು ಈ ಹಿಂದೆ ಅವರ ತಂದೆಯನ್ನು 1981, 1984, 1989 ಮತ್ತು 1991 ರಲ್ಲಿ ಮತ್ತು 1999 ರಲ್ಲಿ ತಾಯಿಯನ್ನು ಲೋಕಸಭೆಗೆ ಆಯ್ಕೆ ಮಾಡಿದೆ.

ಕೆಎಲ್ ಶರ್ಮಾ ಪ್ರವೇಶ: ರಾಹುಲ್ ಮತ್ತೆ ಅಮೇಥಿಯಿಂದ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಳೆದು ತೂಗುತ್ತಿರುವಾಗಲೇ ಪಕ್ಷವು ಈ ವಿಚಾರದ ಬಗ್ಗೆ ಚರ್ಚೆ ನಡೆಸಿತ್ತು ಎಂದು ಪಕ್ಷದ ಮೂಲಗಳು ಹೇಳುತ್ತವೆ. 1981ರ ಉಪ ಚುನಾವಣೆಯಲ್ಲಿ ರಾಜೀವ್ ಅವರು ಗೆದ್ದಾಗಿನಿಂದ ಗಾಂಧಿ ಕುಟುಂಬ ಮತ್ತು ಅಮೇಥಿ ಹಾಗೂ ರಾಯ್ ಬರೇಲಿಯ ಜನರ ನಡುವೆ ಪ್ರಮುಖ ಸಂಪರ್ಕ ಕೋಂಡಿಯಂತೆ ಸೇವೆ ಸಲ್ಲಿಸಿದ ಶರ್ಮಾ ಅವರನ್ನು ಕಣಕ್ಕಿಳಿಸುವ ಮೂಲಕ ಪಕ್ಷ ಅಮೇಥಿಯನ್ನು ವಶಪಡಿಸಿಕೊಂಡರೆ ತಮ್ಮ ಕುಟುಂಬ ಮೇಲ್ವಿಚಾರಕರಾಗಿ ಉಳಿಯುತ್ತಾರೆ ಎಂಬುದನ್ನು ಸಂವಹಿಸಲು ಪ್ರಯತ್ನಿಸಿದ್ದಾರೆ.

ಮೂಲತಃ ಪಂಜಾಬಿನವರಾಗಿದ್ದರೂ, ಕೆಳ ಹಂತದಲ್ಲಿ ಕಾರ್ಯ ನಿರ್ವಹಿಸುವ ಶರ್ಮಾ ಅವರನ್ನು ಎರಡೂ ಕ್ಷೇತ್ರಗಳ ಜನ ಇಷ್ಟಪಡು ತ್ತಾರೆ ಮತ್ತು ಅವರು ಸುಲಭವಾಗಿ ಕೈಗೆ ಸಿಗುವ ವ್ಯಕ್ತಿ ಎಂದು ಹೆಸರಾಗಿದ್ದಾರೆ. ಕಳೆದ ನಾಲ್ಕು ದಶಕದಿಂದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ; ಮತ್ತು ಜನರಿಗೆ ಪರಿಚಿತರಾಗಿದ್ದಾರೆ.

ರಾಯ್ ಬರೇಲಿಯಿಂದ ರಾಹುಲ್ ಸ್ಪರ್ಧೆ ಈಗ ಘೋಷಣೆಯಾಗಿದ್ದರೂ, ಎರಡೂ ಕ್ಷೇತ್ರಗಳಲ್ಲಿ ಚುನಾವಣೆ ಸಿದ್ಧತೆ ನಡೆಸುವಂತೆ ಶರ್ಮಾ ಅವರಿಗೆ ಬಹಳ ಹಿಂದೆಯೇ ಸೂಚನೆ ನೀಡಲಾಗಿದೆ ಎಂದು ಮೂಲಗಳು ದಿ ಫೆಡರಲ್‌ಗೆ ತಿಳಿಸಿವೆ.

ಭದ್ರ ತಳಹದಿ: ʻಕಳೆದ ಆರು ತಿಂಗಳಿನಿಂದ ಶರ್ಮಾ ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬೂತ್ ಮಟ್ಟ ದ ಏಜೆಂಟರನ್ನು ಗುರುತಿಸಿ, ಪ್ರತಿ ಮನೆಯಿಂದ ಪ್ರತಿಕ್ರಿಯೆ ಸಂಗ್ರಹಿಸುವ ಕಾರ್ಯ ನಡೆಸಿದ್ದಾರೆ. ಅಮೇಥಿಯಲ್ಲಿ ಇರಾನಿ ಅವರ ವಿರುದ್ಧ ಯಾವ ವಿಷಯದ ಬಗ್ಗೆ ಅಸಮಾಧಾನವಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿದ್ದು,ಸ್ಥಳೀಯ ಮತ್ತು ಪರಿಣಾಮಕಾರಿ ತಳಮಟ್ಟದ ಪ್ರಚಾರವನ್ನು ಖಚಿತಪಡಿಸಿಕೊಳ್ಳಲಾಗಿದೆ,ʼ ಎಂದು ಅಮೇಥಿಯ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ಫೆಡರಲ್‌ಗೆ ತಿಳಿಸಿದರು.

ʻಶರ್ಮಾ ಅವರು ಗಾಂಧಿ ಉಪನಾಮವನ್ನು ಹೊಂದಿಲ್ಲದಿದ್ದರೂ, ಅವರನ್ನು ಅಮೇಥಿ ಮತ್ತು ರಾಯ್ ಬರೇಲಿಯಾದ್ಯಂತ ಗಾಂಧಿ ಕುಟುಂಬದ ವಿಸ್ತರಣೆ ಎಂದು ನೋಡುತ್ತಾರೆ. ಮತ್ತು ಹೆಚ್ಚುವರಿ ಅಂಶವೆಂದರೆ, ಅವರು ಎರಡೂ ಕ್ಷೇತ್ರಗಳ ಜನರಿಗೆ ಯಾವಾಗಲೂ ಕೈಗೆ ಸಿಗುತ್ತಾರೆ. ಒಂದುವೇಳೆ ರಾಹುಲ್ ಅವರು ಬರೇಲಿಯಲ್ಲಿ ಗೆದ್ದರೆ, ಅಲ್ಲಿನ ದೈನಂದಿನ ವ್ಯವಹಾರಗಳನ್ನು ಶರ್ಮಾ ಅವರೇ ನಿರ್ವಹಿಸುತ್ತಾರೆ ಎಂಬುದು ಖಚಿತ,ʼ ಎಂದು ಅವರು ಹೇಳಿದರು.

ಇರಾನಿಯಂತಹ ಪ್ರತಿಸ್ಪರ್ಧಿಯನ್ನು ಎದುರಿಸಲು ಶರ್ಮಾ ಅವರಿಗೆ ಅರ್ಹತೆಯಿದೆಯೇ ಮತ್ತು ಐದು ವರ್ಷಗಳ ಹಿಂದೆ ರಾಹುಲ್ ವಿಫಲವಾದ ಸ್ಥಳದಲ್ಲಿ ಅವರು ಯಶಸ್ವಿಯಾಗುವರೇ ಎಂಬುದನ್ನು ಕಾಯ್ದು ನೋಡಬೇಕಿದೆ. ರಾಹುಲ್ ಮತ್ತು ಪ್ರಿಯಾಂಕಾ ಅವರು ಶರ್ಮಾ ಪರವಾಗಿ ವ್ಯಾಪಕ ಪ್ರಚಾರ ಮಾಡುವ ನಿರೀಕ್ಷೆಯಿದೆ.

ರಾಯ್ ಬರೇಲಿಯೊಂದಿಗೆ ಸಂಬಂಧ: ರಾಯ್ ಬರೇಲಿಯಿಂದ ರಾಹುಲ್ ಅವರನ್ನು ಕಣಕ್ಕಿಳಿಸುವುದು ಗಾಂಧಿ ವಂಶಸ್ಥರು ಮತ್ತೊಂದು ಚುನಾವಣೆಯಲ್ಲಿ ಸೋಲದಂತೆ ನೋಡಿಕೊಳ್ಳಲು ಹೆಚ್ಚು ಸುರಕ್ಷಿತ ನಡೆಯಂತೆ ಮೇಲ್ನೋಟಕ್ಕೆ ಕಾಣಿಸಬಹುದು. ಈ ಕ್ಷೇತ್ರ 1952 ರಿಂದ 17 ಬಾರಿ ಕಾಂಗ್ರೆಸ್, 2 ಬಾರಿ ಬಿಜೆಪಿ ಬಾರಿ ಮತ್ತು ಒಮ್ಮೆ ಜನತಾ ಪಕ್ಷ ಗೆದ್ದಿವೆ.

ರಾಹುಲ್ ಅವರ ಅಜ್ಜ ಫಿರೋಜ್ ಗಾಂಧಿ ಅವರು 1952 ರಲ್ಲಿ ರಾಯ್ ಬರೇಲಿಯ ಮೊದಲ ಸಂಸದರಾಗಿದ್ದರು ಮತ್ತು ಅವರ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1967, 1971 ಮತ್ತು 1980 ರಲ್ಲಿಈ ಕ್ಷೇತ್ರದಿಂದ ಗೆದ್ದಿದ್ದಾರೆ. ಸೋನಿಯಾ ಅವರು 2004 ರಿಂದ ರಾಯ್ ಬರೇಲಿಯಲ್ಲಿ ಗೆಲ್ಲುತ್ತಿದ್ದಾರೆ ಮತ್ತು 2019 ರಲ್ಲಿ ಅವರು ರಾಜ್ಯದಿಂದ ಗೆದ್ದ ಏಕೈಕ ಸಂಸದೆ ಆಗಿದ್ದರು. ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 1.67 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಬಿಜೆಪಿ ಮತ್ತೊಮ್ಮೆಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಸೋನಿಯಾ ಅವರ ಪ್ರತಿಸ್ಪರ್ಧಿ ಈಗ ರಾಹುಲ್ ಅವರನ್ನು ಎದುರಿಸಲಿದ್ದಾರೆ.

ಕಠಿಣ ಆಯ್ಕೆ: ರಾಯ್‌ಬರೇಲಿಯಲ್ಲಿ ರಾಹುಲ್‌ಗೆ ಸುಲಭ ಸವಾಲು ಎದುರಾಗಬಹುದು. ರಾಹುಲ್ ಅವರು ಕೇರಳದ ವಯನಾಡಿ ನಿಂದಲೂ ಗೆಲ್ಲುತ್ತಾರೆ ಎನ್ನಲಾಗಿದೆ. ಎರಡೂ ಕ್ಷೇತ್ರದಿಂದ ಗೆಲುವು ಸಾಧಿಸಿದರೆ, ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ರಾಹುಲ್ ವಯನಾಡನ್ನು ಕೈಬಿಟ್ಟರೆ, 2019ರಲ್ಲಿ ಬೆಂಬಲಕ್ಕೆ ನಿಂತ ಕ್ಷೇತ್ರಕ್ಕೆ ದ್ರೋಹ ಬಗೆದಂತಾಗುತ್ತದೆ. ಒಂದುವೇಳೆ ರಾಯ್‌ಬರೇಲಿಯನ್ನು ಬಿಟ್ಟುಕೊಟ್ಟರೆ, ಗಾಂಧಿ ಕುಟುಂಬವನ್ನು ಎಂದಿಗೂ ಕೈಬಿಡದ ಕ್ಷೇತ್ರವನ್ನು ತೊರೆದರು ಎಂದು ಬಿಜೆಪಿ ಉಗ್ರ ಪ್ರತಿರೋಧ ಎದುರಿಸಬೇಕಾಗುತ್ತದೆ(1977 ರಲ್ಲಿ ಇಂದಿರಾ ಗಾಂಧಿ ಅವರು ಜನತಾ ಪಕ್ಷದ ರಾಜ್ ನಾರಾಯಣ್ ವಿರುದ್ಧ ಸೋಲು ಹೊರತುಪಡಿಸಿ). ಇಂತಹ ಆರೋಪ ರಾಯ್ ಬರೇಲಿಯಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ.

ಇಂಥ ಸನ್ನಿವೇಶ ಎದುರಾದಾಗ, ಏಕೈಕ ಕಾರ್ಯಸಾಧು ಪರ್ಯಾಯವೆಂದರೆ ಆ ಸ್ಥಾನವನ್ನು ಪ್ರಿಯಾಂಕಾ ಅವರಿಗೆ ಬಿಟ್ಟುಕೊಡುವುದು. ಈಮೂಲಕ ಚುನಾವಣಾ ರಾಜಕೀಯದಿಂದ ದೂರವಿದ್ದು, ಪಕ್ಷದ ಪರವಾಗಿ ದೇಶಾದ್ಯಂತ ಪ್ರಚಾರ ಮಾಡಲು ಮತ್ತು ಕಾಂಗ್ರೆಸ್‌ನ ತೆರೆಮರೆಯ ಬಿಕ್ಕಟ್ಟಿನ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕಾ ಅವರಿಗೆ ನ್ಯಾಯ ಸಲ್ಲಿಸಿದಂತೆ ಆಗಲಿದೆ.

Tags:    

Similar News