Union Budget 2025: ಕೇಂದ್ರ ಬಜೆಟ್‌ನಲ್ಲಿ ಈಡೇರದ ರೈತರ ಮೂರು ಬೇಡಿಕೆಗಳು
Union Budget 2025: ಕೃಷಿ ಯಂತ್ರೋಪಕರಣಗಳು, ಉಪಕರಣಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳಿಂದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಕಡಿತಗೊಳಿಸಬೇಕೆಂದು ರೈತರು ಬಯಸಿದ್ದರು.;
ಕೇಂದ್ರ ಬಜೆಟ್ ಪ್ರಕಟಗೊಂಡಿದೆ. ಆದರೆ ದೇಶದ ರೈತರ ಬಹುದಿನಗಳ ಮೂರು ಪ್ರಮುಖ ಬೇಡಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಅಸಮಾಧಾನ ರೈತ ಸಮುದಾಯಗಳಲ್ಲಿ ವ್ಯಕ್ತಗೊಂಡಿದೆ. 2025-26 ರ ಬಜೆಟ್ ರೈತ ಸಮುದಾಯವನ್ನು ನಿರಾಶೆಗೊಳಿಸಿದೆ ಎಂಬ ಅಭಿಪ್ರಾಯ ಮೂಡಿದೆ. ಕನಿಷ್ಠ ಬೆಂಬಲ ಲೆಕ್ಕಾಚಾರ ಹಾಗೂ ಏರಿಕೆ, ಕೃಷಿ ಯಂತ್ರೋಪಕರಣಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳಿಂದ ಸರಕು ಮತ್ತು ಸೇವಾ ತೆರಿಗೆ ಕಡಿತಗೊಳಿಸಬೇಕೆಂದು ರೈತರು ಬಯಸಿದ್ದರು. ಇವುಗಳಲ್ಲಿ ಯಾವುದನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಗಣಿಸಿಲ್ಲ .
ಬಿಕೆಎಸ್‌ಗೆ ಅಸಮಾಧಾನ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌ನ) ಅಂಗಸಂಸ್ಥೆಯಾದ ರೈತ ಸಂಘಟನೆ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಕೂಡ ಬಜೆಟ್ ಘೋಷಣೆಗಳನ್ನು ಸ್ವಾಗತಿಸಿದೆ. ಆದರೆ, ರೈತಪರವಾಗಿ ಇನ್ನೂ ಕೆಲವು ಘೋಷಣೆಗಳನ್ನು ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದೆ.
"ಬಿಕೆಎಸ್ ಕಡೆಯಿಂದ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದರಲ್ಲಿ ಒಂದಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲದ ಮೊತ್ತವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಆದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ನೀಡಲಾಗುವ ಹಣವನ್ನು ಹೆಚ್ಚಿಸಲು ನಾವು ಬಯಸಿದ್ದೆವು. ಆದರೆ ಸರ್ಕಾರವು ಬಜೆಟ್‌ನಲ್ಲಿ ಅಂತಹ ಯಾವುದೇ ಘೋಷಣೆ ಮಾಡಿಲ್ಲ" ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ್ ಮಿಶ್ರಾ ʼದ ಫೆಡರಲ್ʼಗೆ ತಿಳಿಸಿದರು.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಕೃಷಿ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಇತರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆಗೆದುಹಾಕುವುದು ಮತ್ತೊಂದು ಬೇಡಿಕೆಯಾಗಿತ್ತು. ಅದು ಕೂಡ ಸಾಕಾರವಾಗಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.
ಸಾವಯವ ಕೃಷಿ ಮಖಾನಾ (ತಾವರೆ ಬೀಜ) ಉತ್ಪಾದನೆ ಮತ್ತು ಮಾರಾಟ ಉತ್ತೇಜಿಸಲು ಬಿಹಾರದಲ್ಲಿ ಮಖಾನಾ ಮಂಡಳಿ ತೆರೆಯುವ ಬಜೆಟ್ ನಿರ್ಧಾರವನ್ನು ಮಿಶ್ರಾ ಸ್ವಾಗತಿಸಿದ್ದಾರೆ. ಆದರೆ, ಸಾವಯವವಾಗಿ ಉತ್ಪಾದಿಸಿದ ಬೆಳೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆ ರಚಿಸುವ ಬೇಡಿಕೆ ಈಡೇರಿಸಿಲ್ಲ ಎಂದು ಬಿಕೆಎಸ್ ಹೇಳಿದೆ. ಸಾವಯವ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ಅದನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಮಾರುಕಟ್ಟೆ ರಚನೆ ಮಾಡಬೇಕಾಗಿದೆ" ಎಂದು ಅವರು ಹೇಳಿದ್ದಾರೆ. ಬೆಂಬಲ ಬೆಲೆಯ ಲೆಕ್ಕಾಚಾರದ ಪ್ರಶ್ನೆಯನ್ನೂ ಕೇಂದ್ರ ಸರ್ಕಾರ ಪರಿಹರಿಸಿಲ್ಲ ಎಂದು ವಿವಿಧ ರೈತ ಸಂಘಟನೆಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಬೆಂಬಲ ಬೆಲೆಯ ಬೇಡಿಕೆ
ಬೆಂಬಲ ಬೆಲೆಯ ಲೆಕ್ಕಾಚಾರದ ಸಮಯದಲ್ಲಿ ಉತ್ಪಾದನಾ ವೆಚ್ಚ ಮತ್ತು ಶೇಕಡಾ 50ರಷ್ಟು ಲಾಭ ಸೇರಿಸುವ ಭಾರತೀಯ ಕಿಸಾನ್ ಯೂನಿಯನ್ ಅರಾಜ್ನಾನೈತಿಕ್ (ಬಿಕೆಯು ನಾಗರಿಕ್) ಆಶಯವನ್ನು ಬಜೆಟ್ ನಿರ್ಲಕ್ಷಿಸಿದೆ. "ಸರ್ಕಾರವು ಎಂಎಸ್‌ಪಿ ಬಿಕ್ಕಟ್ಟು ಪರಿಹರಿಸದ ಹೊರತು, ರೈತರು ಕೃಷಿಯಿಂದ ಲಾಭ ಪಡೆಯುವುದು ಕಷ್ಟ" ಎಂದು ಪಂಜಾಬ್‌ನ ರೈತ ಮುಖಂಡ ರಮಣ್‌ದೀಪ್ ಸಿಂಗ್ ಮಾನ್ ʼದ ಫೆಡರಲ್‌ಗೆʼ ತಿಳಿಸಿದ್ದಾರೆ. ಅವರು ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವ ನಿಯೋಗದ ಭಾಗವಾಗಿದ್ದಾರೆ.
ರೈತರಿಗೆ ಸಾಲ
ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಸಾಲವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸುವ ಸರ್ಕಾರದ ನಿರ್ಧಾರ ರೈತ ಸಮುದಾಯಕ್ಕೆ ತೃಪ್ತಿ ತಂದಿಲ್ಲ. ಬಿಕೆಎಸ್ ಈ ನಿರ್ಧಾರವನ್ನು ಬೆಂಬಲಿಸಿದರೂ, ಇದು ದೀರ್ಘಾವಧಿಯಲ್ಲಿ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಕೆಲವು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
" ಸಮಸ್ಯೆಯೆಂದರೆ ಕೃಷಿ ಉತ್ಪನ್ನಗಳ ವೆಚ್ಚ ಹೆಚ್ಚಳದ ಸಮಸ್ಯೆಗೆ ಯಾವುದೇ ಪರಿಹಾರ ಸಿಗದ ಕಾಣ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದು ಅಸಾಧ್ಯ. ಹೀಗಾಗಿ ತೆಗೆದುಕೊಂಡ ದೊಡ್ಡ ಸಾಲವನ್ನು ಮರುಪಾವತಿಸಲು ಕಷ್ಟಪಡಬೇಕಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೈತರ ಸಾಲ ಹೆಚ್ಚಿಸುವುದರಿಂದ ದೀರ್ಘಾವಧಿಯಲ್ಲಿ ರೈತರಿಗೆ ತೊಂದರೆಯಾಗುತ್ತದೆ. ಇದು ರೈತರಿಗೆ ಸಾಲದ ಸುಳಿಯಂತೆ " ಎಂದು ಮಾನ್ ಹೇಳಿದ್ದಾರೆ.
ಸಾಲ ಮನ್ನಾ
ಕೃಷಿ ಸಾಲ ಮನ್ನಾ ಮಾಡಬೇಕು ಎಂಬುದು ರೈೂತರ ಒತ್ತಾಯಾಗಿತ್ತು.ಅದು ಕೂಡ ಬಜೆಟ್‌ನಲ್ಲಿ ಇರಲಿಲ್ಲ. "ಕೃಷಿ ಸಾಲ ಮನ್ನಾ ಅಥವಾ ರೈತರಿಗೆ ಪರಿಹಾರ ದೊರಕುತ್ತದೆ ಎಂಬುದು ರೈತರ ಸಾಮಾನ್ಯ ಬೇಡಿಕೆಯಾಗಿತ್ತು, ಆದರೆ ಸರ್ಕಾರವು ಅಂತಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ" ಎಂದು ಸ್ವತಂತ್ರ ಭಾರತ್ ಪಕ್ಷದ ಅಧ್ಯಕ್ಷ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ರೈತರ ಸಮಿತಿಯ ಮಾಜಿ ಸದಸ್ಯ ಅನಿಲ್ ಘನ್ವತ್ ʼದ ಫೆಡರಲ್ʼಗೆ ತಿಳಿಸಿದ್ದಾರೆ.