ಸಕ್ಕರೆ ನಾಡು ಮಂಡ್ಯದ ಮೇಲೆ ಬಿಜೆಪಿಗೆ ಯಾಕೆ ಅಷ್ಟೊಂದು ಅಕ್ಕರೆ?

ಒಕ್ಕಲಿಗರ ಪ್ರಾಬಲ್ಯದ ಹಳೇ ಮೈಸೂರು ಪ್ರದೇಶದ ಮೇಲಿನ ರಾಜಕೀಯ ಹಿಡಿತಕ್ಕಾಗಿ ಭಾರತೀಯ ಜನತಾ ಪಾರ್ಟಿ ಮಂಡ್ಯವನ್ನು ಕೇಂದ್ರವಾಗಿಸಿಕೊಂಡು ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆಯೇ?;

Byline :  Shashi Sampalli
Update: 2024-02-05 06:30 GMT
ಒಕ್ಕಲಿಗರ ಪ್ರಾಬಲ್ಯದ ಹಳೇ ಮೈಸೂರು ಭಾಗದ ಮೇಲಿನ ರಾಜಕೀಯ ಹಿಡಿತಕ್ಕಾಗಿ ಬಿಜೆಪಿ ಮಂಡ್ಯವನ್ನು ಕೇಂದ್ರವಾಗಿಸಿಕೊಂಡು ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆಯೇ?

ಮಂಡ್ಯ ಜಿಲ್ಲೆಯ ಕೆರಗೋಡು ಹನುಮಧ್ವಜ ವಿವಾದ ಇನ್ನೂ ತಣ್ಣಗಾಗಿಲ್ಲ. ಹನುಮಧ್ವಜ ತೆರವು ಮಾಡಿದ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ, ಜೆಡಿಎಸ್ ಮತ್ತು ಸಂಘಪರಿವಾರ ಗ್ರಾಮದಲ್ಲಿ ಪ್ರತಿ ಮನೆಯ ಮೇಲೆ ಹನುಮ ಧ್ವಜ ಹಾರಿಸುವ ಆಂದೋಲನ ಆರಂಭಿಸಿದೆ. ಅಷ್ಟೇ ಅಲ್ಲ; ಈ ಆಂದೋಲನವನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವುದಾಗಿಯೂ ಬಿಜೆಪಿ ಹೇಳಿದೆ.

ಹಾಗೆ ನೋಡಿದರೆ, ಸಂಘ ಪರಿವಾರ ಮತ್ತು ಅದರ ರಾಜಕೀಯ ವೇದಿಕೆ ಬಿಜೆಪಿ, ಹಿಂದುತ್ವ ರಾಜಕಾರಣದ ಭಾಗವಾಗಿ ಮಂಡ್ಯ ಜಿಲ್ಲೆಯಲ್ಲಿ ಇಂತಹ ಅಭಿಯಾನಗಳನ್ನು ನಡೆಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ಹನುಮಜಯಂತಿ, ಟಿಪ್ಪು ಸುಲ್ತಾನ್ ವಿವಾದ, ಉರಿಗೌಡ- ನಂಜೇಗೌಡ ಅಭಿಯಾನ ಸೇರಿದಂತೆ ಸಾಲು ಸಾಲು ಅಭಿಯಾನ- ಹೋರಾಟಗಳನ್ನು ಬಿಜೆಪಿ ಮತ್ತು ಸಂಘಪರಿವಾರ ನಡೆಸಿದೆ. ಕಲ್ಲಡ್ಕ ಪ್ರಭಾಕರ್ ಭಟ್, ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪರಿವಾರದ ಫೈರ್ ಬ್ರಾಂಡ್ ಭಾಷಣಕಾರರನ್ನು ಮೇಲಿಂದ ಮೇಲೆ ಕರೆಸಿ ʼಸಕ್ಕರೆ ನಾಡಿನಲ್ಲಿʼ ಹಿಂದುತ್ವದ ಬಿರುಗಾಳಿಗೆ ತಿದಿಯೊತ್ತಲಾಗುತ್ತಿದೆ.

ಆ ದೃಷ್ಟಿಯಲ್ಲಿ, ಕಳೆದ ಎರಡು ವರ್ಷಗಳಿಂದ ಈಚೆಗೆ ಇಡೀ ರಾಜ್ಯದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಹೆಚ್ಚು ಗಮನ ಕೇಂದ್ರೀಕರಿಸಿ ಎಡಬಿಡದೆ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದು ಮಂಡ್ಯದಲ್ಲಿಯೇ. 2022ರ ಡಿಸೆಂಬರಿನಲ್ಲಿ ಚಿಕ್ಕಮಗಳೂರಿನಲ್ಲಿ ನಡೆಸುವ ದತ್ತಮಾಲೆ ಅಭಿಯಾನದ ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲೆ ಅಭಿಯಾನ ಆರಂಭಿಸಿದ ಸಂಘಪರಿವಾರ, ಅಲ್ಲಿನ ಜಾಮಿಯಾ ಮಸೀದಿಯ ಜಾಗದಲ್ಲಿ ಆಂಜನೇಯ ದೇವಾಲಯದ ಕುರುಹುಗಳಿವೆ. ಹಾಗಾಗಿ ಮಸೀದಿ ಕೆಡವಿ ದೇವಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿತ್ತು. ಅಲ್ಲಿಂದ ಕಾವು ಪಡೆದ ಹಿಂದುತ್ವದ ಆಂದೋಲನ, ಮಂಡ್ಯ ಜಿಲ್ಲೆಯಲ್ಲಿ ಹತ್ತು ಹಲವು ಹೋರಾಟ, ಅಭಿಯಾನಗಳನ್ನು ಹಾದು ಇದೀಗ ಕೆರಗೋಡು ಹನುಮಧ್ವಜ ವಿವಾದಕ್ಕೆ ತಲುಪಿದೆ.

ಬಿಜೆಪಿ ಮತ್ತು ಪರಿವಾರಕ್ಕೆ ಮಂಡ್ಯದ ಮೇಲೇಕೆ ಕಣ್ಣು?

ಅಸಲಿಗೆ ಇದು ಪ್ರಶ್ನೆ. ಇಷ್ಟು ವರ್ಷಗಳ ಕಾಲ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯಲ್ಲಿ ಹಿಂದುತ್ವವಾದಿ ರಾಜಕಾರಣದ ಪ್ರಯೋಗಗಳನ್ನು ನಡೆಸುತ್ತಿದ್ದ ಬಿಜೆಪಿ ಮತ್ತು ಅದರ ಪರಿವಾರ, ಕಳೆದ ಎರಡು- ಮೂರು ವರ್ಷಗಳಿಂದ ಮಂಡ್ಯ-ಮೈಸೂರು ಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವುದು ಯಾಕೆ? ಅದರ ಹಿಂದೆ ನಿಜಕ್ಕೂ ಧರ್ಮ ರಕ್ಷಣೆ ಮತ್ತು ಹಿಂದುತ್ವದ ಪುನರುಜ್ಜೀವನದ ಉದ್ದೇಶವಷ್ಟೇ ಇದೆಯೇ? ಅಥವಾ ಆ ಭಾಗದಲ್ಲಿ ತೀರಾ ದುರ್ಬಲವಾಗಿರುವ ಬಿಜೆಪಿಯನ್ನು ರಾಜಕೀಯವಾಗಿ ಬಲಪಡಿಸುವ ಮೆಗಾ ಕಾರ್ಯತಂತ್ರದ ಭಾಗವಾಗಿ ಹಿಂದುತ್ವದ ಅಭಿಯಾನಗಳು ಜಾರಿಗೆ ಬಂದಿವೆಯೇ? ಎಂಬುದು ಕೇಳಬೇಕಾದ ಪ್ರಶ್ನೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ ಆರ್ ಪೇಟೆ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಏಳು ಕಡೆಯೂ ಕಾಂಗ್ರೆಸ್(ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಪಕ್ಷದ ಅಭ್ಯರ್ಥಿ) ಗೆಲುವು ಪಡೆದಿದೆ. 2013ರ ಚುನಾವಣೆಯಲ್ಲಿ ಗೆಲುವು ಪಡೆಯುವ ಮೂಲಕ ಜಿಲ್ಲೆಯಲ್ಲಿ ಖಾತೆ ತೆರೆದಿದ್ದ ಕೆ ಆರ್ ಪೇಟೆ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡು ಜಿಲ್ಲೆಯಲ್ಲಿ ಸಂಪೂರ್ಣ ಅಧಿಕಾರ ಕಳೆದುಕೊಂಡಿದೆ. ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿಯೇ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯರು ಎಂಬುದು ಸದ್ಯ ಬಿಜೆಪಿಗೆ ಇರುವ ಏಕೈಕ ಸಮಾಧಾನ.

ಮಂಡ್ಯ ಕೇಂದ್ರವಷ್ಟೇ, ಸುತ್ತಮುತ್ತಲ ನೆಲೆ ವಿಸ್ತರಣೆ ಗುರಿ!

ಹಾಗೆಂದು ಬಿಜೆಪಿಯ ಈ ನಿರಂತರ ಅಭಿಯಾನಗಳ ಗುರಿ ಕೇವಲ ಮಂಡ್ಯ ಜಿಲ್ಲೆ ಮಾತ್ರವಲ್ಲ; ಬದಲಾಗಿ ಮಂಡ್ಯವನ್ನು ಕೇಂದ್ರವಾಗಿಸಿಕೊಂಡು ಸುತ್ತಮುತ್ತಲ ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಮತ್ತು ಕೆಲಮಟ್ಟಿಗೆ ತುಮಕೂರು ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಇಡೀ ಹಳೇ ಮೈಸೂರು ಭಾಗದ ಮೇಲೆ ರಾಜಕೀಯ ಹಿಡಿತ ಸಾಧಿಸುವುದು ಅದರ ಹೆಗ್ಗುರಿ ಎಂಬುದು ಗುಟ್ಟೇನಲ್ಲ.

ಕರಾವಳಿ, ಮಲೆನಾಡು ಮುಂತಾದ ಮುಸ್ಲಿಂ ಸಮುದಾಯ ಗಣನೀಯ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಹಿಂದೂ- ಮುಸ್ಲಿಂ ಜನಸಮುದಾಯಗಳ ನಡುವೆ ಕಂದಕ ಸೃಷ್ಟಿಸುವ ಕೋಮುವಾದಿ ಅಜೆಂಡಾದ ಮೂಲಕವೇ ಆ ಪ್ರದೇಶಗಳಲ್ಲಿ ರಾಜಕೀಯ ಪಾರುಪತ್ಯ ಸಾಧಿಸಿದ ಬಿಜೆಪಿಗೆ, ಉತ್ತರ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಲಿಂಗಾಯತ ಸಮುದಾಯ ಮತ್ತು ಆ ಸಮುದಾಯದ ನಾಯಕ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವ ಪ್ರಬಲ ಅಸ್ತ್ರವಾಗಿ ಒದಗಿಬಂದಿತು. ಆದರೆ, ಒಕ್ಕಲಿಗ ಸಮುದಾಯದ ಪ್ರಾಬಲ್ಯ ಮತ್ತು ಆ ಸಮುದಾಯದ ಪ್ರಭಾವಿ ನಾಯಕ ಎಚ್ ಡಿ ದೇವೇಗೌಡರ ಪ್ರಭಾವ ಹೊಂದಿರುವ ಹಳೇ ಮೈಸೂರು ಪ್ರದೇಶ ಬಿಜೆಪಿಯ ಪಾಲಿಗೆ ಈವರೆಗೂ ಸವಾಲಾಗೇ ಉಳಿದಿದೆ(ಬಿ ಬಿ ಶಿವಪ್ಪ ಅವರಂಥ ನಾಯಕರ ಹೊರತಾಗಿಯೂ). ಒಕ್ಕಲಿಗರ ರಾಜಕೀಯ ಪ್ರಬುದ್ಧತೆ ಮತ್ತು ದಟ್ಟ ಸಮುದಾಯ ಪ್ರಜ್ಞೆಯ ಈ ಪ್ರದೇಶದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವ ಭಾಗವಾಗಿಯೇ ಬಿಜೆಪಿ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಎಚ್ ಸಿ ಶ್ರೀಕಂಠಯ್ಯ, ಜಿ ಟಿ ದೇವೇಗೌಡರಂಥ ನಾಯಕರನ್ನು ಸೆಳೆದಿತ್ತು.

ಇದೀಗ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಬಲದ ಮೇಲೆ ಆ ಭಾಗದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವುದು ಕೂಡ ತನ್ನ ಪಟ್ಟುಗಳಿಗೆ ಪಕ್ಕಾಗದ ಹಳೇ ಮೈಸೂರು ಭಾಗದ ಒಕ್ಕಲಿಗರ ಕೋಟೆಗೆ ಕನ್ನ ಹಾಕುವ ಮೆಗಾ ತಂತ್ರಗಾರಿಕೆಯ ಭಾಗವೇ ಎಂಬುದು ರಾಜಕೀಯ ಚಿಂತಕರ ವಾದ.


ಬಿಜೆಪಿ ಈ ವಾದವನ್ನು ಒಪ್ಪುವುದೆ?

ಆದರೆ, ರಾಜ್ಯ ಬಿಜೆಪಿಯ ವಕ್ತಾರ ಎಂ ಜಿ ಮಹೇಶ್ ಈ ಮಾತನ್ನು ಒಪ್ಪುವುದಿಲ್ಲ. ಈ ಕುರಿತು ʼದ ಫೆಡರಲ್-ಕರ್ನಾಟಕʼನೊಂದಿಗೆ ಮಾತನಾಡಿದ ಅವರು, “ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಹಳೇಮೈಸೂರು ಭಾಗದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಹಿಂದುತ್ವ ಅಭಿಯಾನ ನಡೆಸುತ್ತಿದೆ ಎಂಬ ಮಾತನ್ನು ಒಪ್ಪುವುದಿಲ್ಲ. ನಾವು ರಾಜಕಾರಣಕ್ಕಾಗಿ ಧರ್ಮ, ದೇವರನ್ನು ಎಳೆದು ತರುವುದಿಲ್ಲ. ಬದಲಾಗಿ ಕಾಂಗ್ರೆಸ್, ತನ್ನ ಮತಬ್ಯಾಂಕ್ ಆಗಿರುವ ಒಂದು ಸಮುದಾಯವನ್ನು ಓಲೈಸಲು ಹಿಂದೂ ದೇವರು ಮತ್ತು ಧರ್ಮದ ವಿಷಯದಲ್ಲಿ ವಿನಾ ಕಾರಣ ವಿವಾದ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆ. ಹಳೇ ಮೈಸೂರು ಭಾಗದ ಮಂಡ್ಯ ಹೊರತುಪಡಿಸಿ ಉಳಿದ ಕಡೆ ಬಿಜೆಪಿ 1994ರಿಂದಲೂ ವಿಧಾನಸಭಾ ಮತ್ತು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಲೇ ಬಂದಿದೆ. ಅಲ್ಲಿ ಇನ್ನಷ್ಟು ಪಕ್ಷದ ನೆಲೆ ವಿಸ್ತರಿಸಲು ನಮಗೆ ನಮ್ಮದೇ ಆದ ಸಂಘಟನಾ ವ್ಯವಸ್ಥೆ ಇದೆ. ಅದಕ್ಕಾಗಿ ಹಿಂದುತ್ವವನ್ನೇ ಬಳಸಬೇಕಾದ ಅನಿವಾರ್ಯತೆ ಇಲ್ಲ. ಅಷ್ಟಕ್ಕೂ ಹಿಂದುತ್ವ ಎಂದರೆ, ನಮಗೆ ರಾಷ್ಟ್ರೀಯತೆ. ಭಾರತದ ರಾಷ್ಟ್ರೀಯತೆಯೇ ಹಿಂದುತ್ವವಾಗಿರುವಾಗ ಅದರ ಹೆಸರಿನಲ್ಲಿ ಮತ ಕೇಳುವುದರಲ್ಲಿ ತಪ್ಪೇನಿದೆ” ಎನ್ನುತ್ತಾರೆ.

ಹಿಂದೂಗಳ ರಾಷ್ಟ್ರವಾದ ಭಾರತದಲ್ಲಿ ಹಿಂದುತ್ವವೇ ರಾಷ್ಟ್ರೀಯತೆ. ಹಿಂದುತ್ವವನ್ನು ವಿರೋಧಿಸುವುದು ಎಂದರೆ ರಾಷ್ಟ್ರೀಯತೆಯನ್ನೇ ವಿರೋಧಿಸಿದಂತೆ ಎಂಬ ʼನರೇಟಿವ್ ಸೆಟ್ʼ ಮಾಡುತ್ತಿರುವ ಬಿಜೆಪಿ, ಹಳೇ ಮೈಸೂರು ಭಾಗದಲ್ಲಿ ತನ್ನ ಹಿಂದುತ್ವ ಅಜೆಂಡಾದ ಮೂಲಕವೇ ಪಕ್ಷವನ್ನು ಗಟ್ಟಿಗೊಳಿಸಲು ಇನ್ನಿಲ್ಲದ ಯತ್ನಗಳನ್ನು ನಡೆಸುತ್ತಿದೆ. ಅಂತಹ ಅದರ ಯತ್ನಗಳ ಗುರಿ ಕೇವಲ ಮತಬ್ಯಾಂಕ್ ಸೃಷ್ಟಿ ಮಾತ್ರವಲ್ಲ; ಜೆಡಿಎಸ್ ತನ್ನೊಂದಿಗೆ ಕೈಜೋಡಿಸಿದ ಬಳಿಕ ಆ ಪ್ರದೇಶದ ತನ್ನ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್ ಬಲ ಉಡುಗಿಸುವುದು ಕೂಡ. ಅಂತಹ ಕಾರ್ಯತಂತ್ರದ ಭಾಗವಾಗಿಯೇ ಬಿಜೆಪಿ ಈಗ ಹನುಮಧ್ವಜ ತೆಗೆಸಿರುವುದರ ಹಿಂದೆ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಧೋರಣೆ ಇದೆ. ಮತ್ತು ಮುಖ್ಯವಾಗಿ ಆ ಭಾಗದ ಪ್ರಭಾವಿ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿದೆ ಎಂದು ಸಾರಿ ಸಾರಿ ಹೇಳುತ್ತಿದೆ.

ಕುರುಬ ವರ್ಸಸ್ ಒಕ್ಕಲಿಗ ತಂತ್ರ!

ಜೊತೆಗೆ, ಕುರುಬ ಸಮುದಾಯದ ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗ ಸಮುದಾಯದ ಎಚ್ ಡಿ ಕುಮಾರಸ್ವಾಮಿ ಅವರು ಗಟ್ಟಿಯಾಗಿ ಮಾತನಾಡತೊಡಗಿದ್ದಾರೆ. ʼಸಿದ್ದರಾಮಯ್ಯ ಎಂಬ ಹೆಸರಿನಲ್ಲಿ ರಾಮನಿದ್ದರೆ ಸಾಲದು, ವ್ಯಕ್ತಿತ್ವದಲ್ಲೂ ರಾಮನ ಗುಣವಿರಬೇಕುʼ ಎಂಬ ಮಾತನ್ನು ಹನುಮಧ್ವಜ ಆಂದೋಲನದ ಭಾಗವಾಗಿ ನಡೆದ ರ್ಯಾಲಿಯಲ್ಲಿ ಹೇಳುವ ಮೂಲಕ ಕುಮಾರಸ್ವಾಮಿ ಕೂಡ, ಬಿಜೆಪಿಯ ತಂತ್ರಗಾರಿಕೆಯನ್ನು ಇನ್ನಷ್ಟು ಹರಿತಗೊಳಿಸುತ್ತಿದ್ದಾರೆ.

ಈ ವಿದ್ಯಮಾನವನ್ನು ಕುರಿತು ʼದ ಫೆಡರಲ್- ಕರ್ನಾಟಕʼದೊಂದಿಗೆ ಮಾತನಾಡಿದ ರಾಜಕೀಯ ಚಿಂತಕ ಕೆ ಪಿ ಸುರೇಶ್, “ಒಕ್ಕಲಿಗ ಸಮುದಾಯದ ಶಕ್ತಿ ಕೇಂದ್ರ ಮಂಡ್ಯ. ಆ ಶಕ್ತಿಕೇಂದ್ರದಿಂದಲೇ ಬಿಜೆಪಿ ಕಳೆದ ಎರಡು ಮೂರು ವರ್ಷಗಳಿಂದ ನಿರಂತರ ಪ್ರಯೋಗಗಳ ಮೂಲಕ ರಾಜಕೀಯ ನೆಲೆ ವಿಸ್ತರಣೆಗೆ ಮುಂದಾಗಿದೆ. ಈ ಬಾರಿಯ ಹನುಮಧ್ವಜ ಕೂಡ ಅಂತಹದ್ದೇ ಒಂದು ಪ್ರಯತ್ನ. ಹಾಗಂತ ಅವರಿಗೆ ದಿಢೀರನೇ ಮುಂದಿನ ಚುನಾವಣೆಯಲ್ಲೇ ಅದರ ಫಲ ಬೇಕೆಂದೇನಿಲ್ಲ. ಅವರಿಗೆ ಚುನಾವಣೆ ಗೆಲುವು ಯಾವತ್ತೂ ತತಕ್ಷಣದ ಆದ್ಯತೆಯಲ್ಲ. ಬದಲಾಗಿ ತಮ್ಮ ಐಡಿಯಾಲಜಿಯನ್ನು, ಯೋಚನಾ ಕ್ರಮವನ್ನು ಜನರಲ್ಲಿ ಬಿತ್ತುವುದು ಮತ್ತು ಆ ಚಿಂತನೆಗೆ ಅವರನ್ನು ಒಪ್ಪಿಸುವುದು ಆದ್ಯತೆ. ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಕರಾವಳಿ, ಮಲೆನಾಡು, ಉತ್ತರಕರ್ನಾಟಕದ ಬಳಿಕ ಈ ಪ್ರದೇಶದಲ್ಲಿ ಹಿಂದುತ್ವದ ನೆಲೆ ವಿಸ್ತರಿಸುವುದು ಈ ಎಲ್ಲದರ ಹಿಂದಿನ ಉದ್ದೇಶ” ಎನ್ನುತ್ತಾರೆ.

ಒಟ್ಟಾರೆ, ಹಳೇ ಮೈಸೂರು ಭಾಗದ ಮೇಲಿನ ದಿಗ್ವಿಜಯಕ್ಕಾಗಿ ಬಿಜೆಪಿ ರಣ ಕಹಳೆ ಮೊಳಗಿಸಿದೆ. ಅದಕ್ಕಾಗಿ ಆ ಭಾಗದ ನಿರ್ಣಾಯಕ ಮತ್ತು ಪ್ರಭಾವಿ ಸಮುದಾಯದ ನಾಯಕ ಎಚ್ ಡಿ ಕುಮಾರಸ್ವಾಮಿಯವರಿಂದಲೇ ಪಾಂಚಜನ್ಯ ಮೊಳಗಿಸಿದೆ. ಸುರೇಶ್ ಅವರು ಹೇಳುವಂತೆ ಈ ರಣರಂಗದಲ್ಲಿ ಸೋಲು- ಗೆಲುವು ತತಕ್ಷಣದ ಗುರಿಯಲ್ಲ. ಬದಲಾಗಿ ರಣರಂಗ ಸದಾ ಕುದಿನೆಲವಾಗಿರುವುದು ಮಾತ್ರ ಮುಖ್ಯ. ಆದರೆ, ಸಕ್ಕರೆಯ ನಾಡು ಇಂತಹದ್ದೊಂದು ಕದನಕುದಿಗೆ ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುವುದು ಎಂಬುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ನಿಖರವಾಗಿ ಹೇಳಲಿದೆ.

Tags:    

Similar News