ರಾಧಿಕಾ-ಅನಂತ್‌ ಅಂಬಾನಿ ವಿವಾಹ

ದೇಶದ ಅತ್ಯಂತ ದುಬಾರಿ ವಿವಾಹಗಳ ನೋಟ

Update: 2024-03-05 08:59 GMT
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ಆಕಾಶ್ ಅಂಬಾನಿ ಮತ್ತು ಪತ್ನಿ ಶ್ಲೋಕಾ ಮೆಹ್ತಾ

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಅದ್ಧೂರಿ ವಿವಾಹಪೂರ್ವ ಸಮಾರಂಭ ದೇಶಿಗರ ಗಮನ ಸೆಳೆದಿದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಪಾಪ್ ತಾರೆ ರಿಹಾನ್ನಾ, ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್, ಬಾಲಿವುಡ್ ಸಂಗೀತ ಜೋಡಿ ಅಜಯ್-ಅತುಲ್ ಮತ್ತು ಅಮೆರಿಕದ ಇಲ್ಯೂಷನಿಸ್ಟ್ ಡೇವಿಡ್ ಬ್ಲೇನ್ ಅವರ ಪ್ರದರ್ಶನಗಳನ್ನು ಒಳಗೊಂಡಿತ್ತು.

ಅತಿಥಿಗಳ ಪಟ್ಟಿಯಲ್ಲಿ ದೇಶಿ ಬಿಲಿಯನೇರ್‌ಗಳಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳು, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಇವಾಂಕಾ ಟ್ರಂಪ್ ಇದ್ದರು. ಮುಂಬೈನಲ್ಲಿ ಜುಲೈ 12 ರಂದು ವಿವಾಹ ನಡೆಯಲಿದೆ.

ದೇಶದ ಈವರೆಗಿನ ದುಬಾರಿ ವಿವಾಹಗಳು ಇಂತಿವೆ:

ಮಿತ್ತಲ್ ಮದುವೆ

ಇಂಥ ದುಬಾರಿ ಮದುವೆಗಳಿಗೆ ಆರಂಭ ಬಿಂದು ಇದು. ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್‌ ಮತ್ತು ಬ್ರಿಟಿಷ್ ಉದ್ಯಮಿ ಅಮಿತ್ ಭಾಟಿಯಾ ವಿವಾಹ ಪ್ಯಾರಿಸ್‌ನಲ್ಲಿ ನಡೆದಿದ್ದು, ಸಂಪತ್ತು, ಅಧಿಕಾರ ಮತ್ತು ದುಂದುಗಾರಿಕೆಯ ಪ್ರತೀಕವಾಗಿತ್ತು.

ಸಮಾರಂಭ ಪ್ಯಾರಿಸ್‌ನ ವಿವಿಧ ಸಾಂಪ್ರದಾಯಿಕ ಹೆಗ್ಗುರುತು ಸ್ಥಳಗಳಲ್ಲಿ ನಡೆಯಿತು. ಜಾರ್ಡಿನ್ ಡೆಸ್ ಟ್ಯುಲೆರೀಸ್‌ನಲ್ಲಿ ಆಹ್ವಾನಿತರಿಗೆ ಭಾರತೀಯ ಬಾಣಸಿಗರು ರುಚಿಕರ ಭಕ್ಷ್ಯಗಳನ್ನುಬಡಿಸಿದರು. ಮರುದಿನ ವರ್ಸೈಲ್ಸ್‌ ಅರಮನೆಯಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಫ್ರೆಂಚ್ ಒಪೆರಾ ಮತ್ತು ಮೌಲಿನ್ ರೂಜ್ ಶೈಲಿಯ ಕ್ಯಾನ್‌ಕನ್ ನೃತ್ಯ ಪ್ರದರ್ಶನ ಇದ್ದಿತ್ತು. ವಿವಾಹ ಸಮಾರಂಭ 17 ನೇ ಶತಮಾನದ ವಾಕ್ಸ್ ಲೆ ವಿಕಾಮ್ಟೆ ಅರಮನೆಯಲ್ಲಿ ನಡೆಯಿತು. ಮುಂಬೈಯಿಂದ ಆಗಮಿಸಿದ 35 ಕ್ಕೂ ಹೆಚ್ಚು ಕುಶಲಕರ್ಮಿ ಗಳು ಕೊಳದ ಮೇಲೆ ಮಂಟಪವನ್ನು ಸೃಷ್ಟಿಸಿದರು. ಫೈಬರ್ ಗ್ಲಾಸ್‌ನಿಂದ ತಯಾರಿಸಿದ ಆನೆಗಳು, ಮಿನಾರ್‌ಗಳು ಮತ್ತು ಗುಲಾಬಿ ಬಣ್ಣದ ಬೃಹತ್ ಸ್ವಾಗತ ಕಮಾನು ರಚಿಸಲಾಗಿತ್ತು.

ಅತಿಥಿಗಳಿಗೆ ಅರಮನೆ ಪ್ರವಾಸ ಮತ್ತು ಆನಂತರ ಲೇಗ್ರ್ಯಾಂಡ್ ಇಂಟರ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಮೋಜಿನ ಕೂಟ ಆಯೋಜಿಸಲಾಗಿತ್ತು.

ವಿನ್ಯಾಸಕಾರರಾದ ತರುಣ್ ತಹಿಲಿಯಾನಿ, ಸುನೀತ್ ವರ್ಮಾ ಮತ್ತು ಅಬು ಜಾನಿ-ಸಂದೀಪ್ ಖೋಸ್ಲಾ ಜೋಡಿ ವಿವಾಹ ವಸ್ತ್ರಗಳನ್ನು ಸಿದ್ಧಪಡಿಸಿತ್ತು. ಪಾಪ್ ದಿವಾ ಕೈಲಿ ಮಿನೋಗ್ ಅವರಿಂದ ಪ್ರದರ್ಶನ ವಿತ್ತು(ಅರ್ಧ ಗಂಟೆಗೆ 2,00,000 ಪೌಂಡ್‌ ಪಡೆದರು ಎಂಬ ವದಂತಿಯಿದೆ); ಜಾವೇದ್ ಅಖ್ತರ್ ರಚಿಸಿದ ನಾಟಕದಲ್ಲಿ ಮಿತ್ತಲ್ ಕುಟುಂಬದವರು, ಐಶ್ವರ್ಯ ರೈ, ಜೂಹಿ ಚಾವ್ಲಾ, ಸೈಫ್ ಅಲಿ ಖಾನ್, ಶಾರುಖ್ ಖಾನ್ ಮತ್ತು ಇತರ ಬಾಲಿವುಡ್ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.ಬಾಲಿವುಡ್ ತಾರೆಗಳ 'ಮದುವೆಗಳಲ್ಲಿ ನೃತ್ಯ'ಕ್ಕಾಗಿ ಕಟು ಟೀಕೆ ಎದುರಿಸಬೇಕಾಗಿ ಬಂದಿತು. ಇದೀಗ ಸಾಮಾನ್ಯ ಎನ್ನಿಸಿಬಿಟ್ಟಿದೆ. ಅನಂತ್ ಅಂಬಾನಿ ವಿವಾಹಪೂರ್ವ ಸಂಭ್ರಮಕ್ಕೆ ಬಾಲಿವುಡ್‌ ನಟ-ನಟಿಯರು ಬಸ್‌ಗಳಲ್ಲಿ ಹಿಂಡು ಹಿಂಡಾಗಿ ಬಂದರೂ ಯಾರೂ ಕಣ್ಣುರೆಪ್ಪೆ ಹೊಡೆಯಲಿಲ್ಲ!

2004ರಲ್ಲಿ ನಡೆದ ಈ ವಿವಾಹಕ್ಕೆ 240 ಕೋಟಿ ರೂ. ವೆಚ್ಚವಾಗಿದ್ದು, ಐಫೆಲ್ ಗೋಫುರದಲ್ಲಿ ಪಟಾಕಿ ಪ್ರದರ್ಶನದೊಂದಿಗೆ ಕೊನೆಗೊಂಡಿತು.

ರೆಡ್ಡಿ ಮದುವೆ:

ಗಣಿ ಉದ್ಯಮಿ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಅವರ ವಿವಾಹ 2016 ರಲ್ಲಿ ಸುದ್ದಿ ಮಾಡಿತು. ಬೆಂಗಳೂರಿನ ಅರಮನೆಯಲ್ಲಿ ಐದು ದಿನ ನನಡೆದ ಐಷಾರಾಮಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಮತ್ತು ರಾಜಕಾರಣಿಗಳು ಸೇರಿದಂತೆ 50,000 ಅತಿಥಿಗಳು ಭಾಗವಹಿಸಿದ್ದರು. ಬ್ರಹ್ಮಣಿ ಹೈದರಾಬಾದ್ ಉದ್ಯಮಿ ವಿಕ್ರಮ್ ದೇವ್ ರೆಡ್ಡಿ ಅವರ ಮಗ ರಾಜೀವ್ ರೆಡ್ಡಿ ಅವರನ್ನು ವಿವಾಹವಾದರು.

ಕಲಾ ನಿರ್ದೇಶಕರು ವಿನ್ಯಾಸಗೊಳಿಸಿದ ಪ್ರಾಚೀನ ಭಾರತೀಯ ದೇವಾಲಯಗಳ ಪ್ರತಿಕೃತಿಗಳು, ಅತಿಥಿಗಳನ್ನು ಎತ್ತಿನ ಬಂಡಿಗಳಲ್ಲಿ ಕರೆದೊಯ್ಯಲಾಯಿತು ಮತ್ತು ಬೃಹತ್ ಹೀಲಿಯಂ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. 3,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ವಧುವಿನ ಮದುವೆ ಸೀರೆಗೆ 17 ಕೋಟಿ ರೂ.ವೆಚ್ಚವಾಗಿದೆ ಎಂದು ವರದಿಯಾಗಿದೆ. ಆಮಂತ್ರಣ ಪತ್ರಗಳು ಚಿನ್ನದಿಂದ ಲೇಪಿತವಾಗಿದ್ದು, ಎಲ್‌ಸಿಡಿ ಪರದೆ ಮತ್ತು ಹಾಡಿನ ವಿಡಿಯೋ ಒಳಗೊಂಡಿತ್ತು. ಇದಕ್ಕೆ 5 ಕೋಟಿ ರೂ. ಹಾಗೂ ಮದುವೆಗೆ ಜನಾರ್ದನ ರೆಡ್ಡಿ 500 ಕೋಟಿ ರೂ. ವೆಚ್ಚ ಮಾಡಿದ್ದರು.

ಅಂಬಾನಿ ವಿವಾಹ: ಡಿಸೆಂಬರ್‌ 2018 ರಲ್ಲಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ವಿವಾಹದಲ್ಲಿ ಬಿಯಾನ್ಸ್ ನೌಲ್ಸ್‌ ಪ್ರದರ್ಶನ ನೀಡಿದರು. ಇಟಲಿಯ ಲೇಕ್ ಕೊಮೊ, ಮುಂಬೈ ಮತ್ತು ರಾಜಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು.

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ವಿವಾಹಕ್ಕೆ 700 ಕೋಟಿ ರೂ. ವೆಚ್ಚವಾಗಿದೆ. ಮದುವೆಯ ಆಮಂತ್ರಣವನ್ನು ಡೋಲ್ಸ್ ಆಂಡ್‌ ಗಬ್ಬಾನಾ ಬಾಕ್ಸ್‌ನಲ್ಲಿ ವಿತರಿಸಲಾಯಿತು. ವರದಿ ಪ್ರಕಾರ, ಬಿಯಾನ್ಸ್‌ಗೆ 45 ನಿಮಿಷಗಳ ಪ್ರದರ್ಶನಕ್ಕೆ 15 ದಶಲಕ್ಷ ಡಾಲರ್‌ ಸಂಭಾವನೆ ನೀಡಲಾಯಿತು; ವಧುವಿನ ಮದುವೆ ಸೀರೆಗೆ 20 ಲಕ್ಷ ರೂ.ಗಿಂತ ಹೆಚ್ಚು ವೆಚ್ಚವಾಗಿದೆ.

ಒಬೆರಾಯ್ ಉದಯವಿಲಾಸ್ ಹೋಟೆಲ್ ಮತ್ತು ಸಿಟಿ ಪ್ಯಾಲೇಸ್‌ನಲ್ಲಿ ವಿವಾಹಪೂರ್ವ ಕಾರ್ಯಕ್ರಮದೊಂದಿಗೆ ಉದಯಪುರದಲ್ಲಿ ವಿವಾಹ ಕಾರ್ಯಕ್ರಮ ಪ್ರಾರಂಭವಾಯಿತು. ಅತಿಥಿಗಳ ಸಂಚಾರಕ್ಕೆ ವಿಮಾನ ಬಳಸಲಾಯಿತು. ಉದಯಪುರದಲ್ಲಿ ಪಿಚೋಲಾ ಸರೋವರದ ಮಧ್ಯದಲ್ಲಿರುವ ಖಾಸಗಿ ದ್ವೀಪದಲ್ಲಿ ವಿವಾಹ ಮಂಟಪ ನಿರ್ಮಿಸಲಾಗಿತ್ತು.

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಿಯಾನ್ಸ್ ಪ್ರದರ್ಶನ, ಹಿಲರಿ ಕ್ಲಿಂಟನ್ ಅವರಂತಹ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಸುಬ್ರತಾ ರಾಯ್‌ :

ಸಹಾರಾದ ಸುಬ್ರತಾ ರಾಯ್ ತಮ್ಮ ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಅವರ ಜೋಡಿ ಮದುವೆಗೆ 554 ಕೋಟಿ ರೂ.ಖರ್ಚು ಮಾಡಿದ್ದರು. ಲಕ್ನೋದ ಸಹಾರಾ ಸ್ಟೇಡಿಯಂನ್ನು ಅರಮನೆಯಂತೆ ಸಿಂಗರಿಸಲಾಗಿತ್ತು.

ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ತಾರೆಯರು ಸೇರಿದಂತೆ 11,000 ಅತಿಥಿಗಳು ಪಾಲ್ಗೊಂಡಿದ್ದರು. ರಾಯ್ ಅವರು 110 ಜೋಡಿಗೆ ವಿವಾಹ ಏರ್ಪಡಿಸಿದ್ದರು.

ಹಿಂದೂಜಾ ಮದುವೆ:

ಸಂಜಯ್ ಹಿಂದುಜಾ ಮತ್ತು ಅವರ ದೀರ್ಘಕಾಲದ ಗೆಳತಿ- ಪ್ರಸಿದ್ಧ ಫ್ಯಾಷನ್ ಡಿಸೈನರ್ ಅನುಸೂಯಾ ಮಹತಾನಿ ಅವರ ವಿವಾಹದಲ್ಲಿ 16,000 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿ ದ್ದರು. ಹಿಂದುಜಾ ಗ್ರೂಪ್ ಕಂಪನಿಗಳ ಭಾಗವಾದ ಗಲ್ಫ್ ಆಯಿಲ್ ಇಂಟ‌ರ್‌ ನ್ಯಾಷನಲ್ ಲಿ. ಅಧ್ಯಕ್ಷರಾದ ಸಂಜಯ್ ಹಿಂದುಜಾ ಈ ವಿವಾಹಕ್ಕೆ 140 ಕೋಟಿ ರೂ.ಖರ್ಚು ಮಾಡಿದ್ದಾರೆ.

ಬಾಲಿವುಡ್ ತಾರೆಯರಾದ ಮಲೈಕಾ ಅರೋರಾ, ಅರ್ಜುನ್ ಕಪೂರ್, ರಣಬೀರ್ ಕಪೂರ್ ಮತ್ತು ಜೆನ್ನಿಫರ್ ಲೋಪೆಜ್ ಕಾರ್ಯಕ್ರಮ ನೀಡಿದರು.

ಸಾಜನ್ ಮದುವೆ:

ಡಾನುಬೆ ಹೋಮ್ಸ್ ಸಿಇಒ ಅಡೆಲ್ ಸಾಜನ್ ಮತ್ತು ಸನಾ ಖಾನ್‌ ವಿವಾಹ ಕೋಸ್ಟಾ ಫ್ಯಾಸಿನೋಸಾದಲ್ಲಿ ನಡೆಯಿತು. ಹಡಗು ಪ್ರಯಾಣ ಬಾರ್ಸಿಲೋನಾ, ಸ್ಪೇನ್, ಮಾರ್ಸಿಲ್ಲೆಸ್ ಮತ್ತು ಕ್ಯಾನ್, ಫ್ರಾನ್ಸ್ ಮೂಲಕ ಸಾಗಿ, ಇಟಲಿಯ ಸವೊನಾದಲ್ಲಿ ಕೊನೆಗೊಂಡಿತು.

ಅತಿಥಿಗಳಿಗಾಗಿ ಹರೋಡ್ಸ್‌ನಿಂದ ವೈಯಕ್ತಿಕಗೊಳಿಸಿದ ಉಡುಗೊರೆ ಬುಟ್ಟಿ, ಬಾದ್‌ಶಾ ಮತ್ತು ವಿಶಾಲ್‌ರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ 100 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಯಿತು. ಗೌಹರ್ ಖಾನ್ ಮತ್ತು ಸುಶ್ಮಿತಾ ಸೇನ್ ಅವರಂತಹ ಸೆಲೆಬ್ರಿಟಿಗಳು

ಅತಿಥಿಗಳಾಗಿ ಪಾಲ್ಗೊಂಡಿದ್ದರು.


Tags:    

Similar News