ಕುಮಾರಸ್ವಾಮಿಗೆ ಕೊಟ್ಟ ಕುದುರೆಯನೇರಲು ಗೊತ್ತಿಲ್ಲ: ಡಿ.ಕೆ ಶಿವಕುಮಾರ್ ಟೀಕೆ

ಕುಮಾರಸ್ವಾಮಿ ಮಾತಿನಿಂದ ಒಕ್ಕಲಿಗ ಸಮುದಾಯಕ್ಕೆ ಕೆಟ್ಟ ಹೆಸರು ಬರ್ತಿದೆ.‌ ಅವರಿಂದ ಆಗ ಸರ್ಕಾರವನ್ನು ಉಳಿಸಿಕೊಳ್ಳಲೂ ಆಗಲಿಲ್ಲ, ಈಗ ಮಾತನಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.;

Update: 2024-04-15 06:42 GMT
ಎಚ್‌.ಡಿ ಕುಮಾರಸ್ವಾಮಿ vs ಡಿ.ಕೆ ಶಿವಕುಮಾರ್‌

ʻಜೆಡಿಎಸ್ ಪಕ್ಷ ಇನ್ಮುಂದೆ ಅಸ್ತಿತ್ವ ಕಳೆದುಕೊಳ್ಳಲಿದೆ. ನಾವೇನೂ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ಅವರೇ ಜೆಡಿಎಸ್ ಪಕ್ಷವನ್ನು ಮುಗಿಸಲಿದ್ದಾರೆʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು - ಕೊಡಗು ಒಕ್ಕಲಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ʻಇತ್ತೀಚಿನ ವರ್ಷದಲ್ಲಿ ಜೆಡಿಎಸ್ ಕಡಿಮೆ ಸ್ಥಾನದಲ್ಲಿ ಗೆಲುವು ಸಾಧಿಸುತ್ತಿದೆ. ಜೆಡಿಎಸ್ ಶಾಸಕರ ಸಂಖ್ಯೆ 40ರಿಂದ 19ಕ್ಕೆ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಈ ಪಕ್ಷವೇ ಅಸ್ತಿತ್ವದಲ್ಲಿ ಇರುವುದಿಲ್ಲʼ ಎಂದರು.

ʻನಾನು ಸಮಾಜಕ್ಕೆ (ಒಕ್ಕಲಿಗ ಸಮುದಾಯ) ಹೆದುರುತ್ತೇನೆ. ಇವರಿಗೆಲ್ಲ (ಎಚ್.ಡಿ ಕುಮಾರಸ್ವಾಮಿ) ಹೆದರುವ ಮಗ ಅಲ್ಲ. ನಾವು ಹೇಗೆ ಮತ್ತು ಏನು ಮಾತನಾಡುತ್ತೇವೆ ಎಂದು ನಮ್ಮ ಸಮಾಜ ನೋಡುತ್ತಿರುತ್ತದೆ. ಹೀಗಾಗಿ, ಗೌರವದಿಂದ ಮಾತನಾಡಬೇಕು. ಎಚ್.ಡಿ ಕುಮಾರಸ್ವಾಮಿ ಅವರು ಬಹಿರಂಗವಾಗಿ ತುಚ್ಛ ಪದಗಳನ್ನು ಬಳಸುತ್ತಾರೆ. ಅವರ ಮಾತುಗಳಿಂದ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಒಕ್ಕಲಿಗರು ಏನಪ್ಪಾ ಇಷ್ಟು ದರಿದ್ರವಾಗಿ ಮಾತನಾಡುತ್ತಾರೆ ಎಂದು ಜನ ಹೇಳುತ್ತಾರೆ. "ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಏನಿದು ಮಾತು, ಹೇಳೋರು ಕೇಳೋರು ಯಾರೂ ಇಲ್ವಾ ಇವರಿಗೆʼ ಎಂದು ಪ್ರಶ್ನೆ ಮಾಡಿದರು.

ʻಮೈತ್ರಿ ಸರ್ಕಾರ (ಕಾಂಗ್ರೆಸ್‌ - ಜೆಡಿಎಸ್‌) ಬೀಳಿಸಿದವರೊಂದಿಗೆ ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ಸೇರಿದ್ದಾರೆ. ಬಿಜೆಪಿಗೆ ಅಧಿಕಾರ ಹೋಗುವುದು ಬೇಡ ಎಂದು ನಾವು (ಕಾಂಗ್ರೆಸ್) ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು, ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅಧಿಕಾರ ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅವರದ್ದು. ಪರಿಸ್ಥಿತಿ ಸರಿ ಇಲ್ಲ ಅಮೆರಿಕಾಗೆ ಹೋಗಬೇಡಿ ಎಂದು ಮನವಿ ಮಾಡಿದರೂ, ಕೇಳದೆ ಪ್ರವಾಸಕ್ಕೆ ಹೋದರು. ಸರ್ಕಾರ ಉಳಿಸಲು ನಾನು ಹಲವು ಪ್ರಯತ್ನ ಮಾಡಿದೆ. ಮುಂಬೈಗೂ ಹೋಗಿದ್ದೆ. ಆದರೆ, ಸಿಎಂಗಾಗಿ ಸರ್ಕಾರ ಕೊಟ್ಟ ಕ್ವಾಟರ್ಸ್‌ನಲ್ಲಿ ಕುಮಾರಸ್ವಾಮಿ ವಾಸ ಮಾಡಲಿಲ್ಲ. ಪಂಚತಾರ ಹೋಟೆಲ್‌ಗೆ ಹೋಗಿ ಕುಳಿತರು. ಹೋಟೆಲ್‌ನಲ್ಲಿ ಕುಳಿತು ರಾಜಕೀಯ ಮಾಡಲು ಸಾಧ್ಯವೇ. ಗಾದೆ ಮಾತಿದೆ, "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರಬಯಸುವರು.. ವೀರರೂ ಅಲ್ಲ, ಧೀರರೂ ಅಲ್ಲ" ಎಂದು ಗಾದೆ ಮಾತು ಉಲ್ಲೇಖಿಸಿ ಪರೋಕ್ಷವಾಗಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ನಮ್ಮವರು ಇಲ್ಲ

ʻಬಿಜೆಪಿಯಲ್ಲಿ ಒಕ್ಕಲಿಗ ನಾಯಕರನ್ನು ಬೆಳೆಸುತ್ತಾರೆ ಎನ್ನುವ ವಿಶ್ವಾಸ ಇಲ್ಲ. ಆರ್. ಅಶೋಕ್, ಅಶ್ವತ್ ನಾರಾಯಣ್ ಅವರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಪ್ರತಾಪ್ ಸಿಂಹ, ಸದಾನಂದ ಗೌಡ ಅವರಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವುದು ಬಹುದೊಡ್ಡ ಪ್ರಶ್ನೆ. ಬಿ.ಎನ್. ಬಚ್ಚೇಗೌಡ ಅವರು ಇವರ ಸಹವಾಸವೇ ಬೇಡ ಎಂದು ರಾಜಕೀಯದಿಂದ ದೂರ ಸರಿದಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಈ ಬಾರಿ ಒಕ್ಕಲಿಗ ಸಮುದಾಯದ 8 ಜನರಿಗೆ ಟಿಕೆಟ್ ಸಿಕ್ಕಿದೆ. ಮೈಸೂರಿನಲ್ಲಿ ಸ್ಥಾನ ಕಳೆದುಕೊಂಡರೆ, ಮತ್ತೆ ನಮಗೆ ಅವಕಾಶ ಸಿಗುವುದಿಲ್ಲ. ಪ್ರತಾಪ್ ಸಿಂಹ, ಸದಾನಂದ ಗೌಡ ಅವರು ಕೊಡಬೇಕಾದ ಸಂದೇಶ ಕೊಟ್ಟಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈಸೂರು – ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ಕೊಡಿಸಬೇಕು ಎಂದು ಪ್ರಯತ್ನಿಸಿದ್ದೆ. ಈ ಬಾರಿ ಅದು ಯಶಸ್ಸು ಕಂಡಿದ್ದು, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದುʼ ಎಂದರು.

ʻಈ ಬಾರಿ 8 ಜನ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇವರೆಲ್ಲರನ್ನು ಗೆಲ್ಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ನನಗೆ, ಎನ್. ಚಲುವರಾಯಸ್ವಾಮಿ, ವೆಂಕಟೇಶ್ ಹಾಗೂ ಕೃಷ್ಣಬೈರೇಗೌಡ ಅವರಿಗೆ ಸಮಸ್ಯೆ ಆಗಲಿದೆ. ರಾಜಕೀಯದಲ್ಲಿ ದೊಡ್ಡ ಹಬ್ಬ (ತೊಂದರೆ) ಆಗುತ್ತೆʼ ಎಂದರು.

ʻಕೊಡಗು – ಮೈಸೂರು ಬಿಜೆಪಿ ಅಭ್ಯರ್ಥಿ ನಿಮ್ಮ ಕೈಗೆ ಸಿಗಲ್ಲ. ಸುಮ್ಮನೆ ದೇವರಿಗೆ ಕೈ ಮುಗಿದಂತೆ ಕೈ ಮುಗಿದುಕೊಂಡು ಬರಬೇಕಷ್ಟೇ. ನಮ್ಮ ಅಭ್ಯರ್ಥಿ ಲಕ್ಷ್ಮಣ ಅವರನ್ನು ಗೆಲ್ಲಿಸಿ. ನಮ್ಮ ಸರ್ಕಾರ ಐದು ವರ್ಷ ಇರುವ ಸರ್ಕಾರ ಅಲ್ಲ 10 ವರ್ಷ ಇರಲಿದೆʼ ಎಂದು ಹೇಳಿದರು.

Tags:    

Similar News