KEA SEAT BLOCKING | ಸೀಟು ಬ್ಲಾಕಿಂಗ್‌ ದಂಧೆ: ಹತ್ತು ಮಂದಿಯ ಹೆಡಮುರಿಕಟ್ಟಿದ ಪೊಲೀಸರು

ವೃತ್ತಿಪರ ಕೋರ್ಸುಗಳ ಸೀಟುಗಳ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಬಂಧಿಸಿರುವ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯ ಪೊಲೀಸರು, ವಂಚಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ನೌಕರನೇ ಪಾಸ್ವರ್ಡ್ ಕೊಡುತ್ತಿದ್ದ ಎಂಬ ಆಘಾತಕಾರಿ ಸಂಗತಿಯನ್ನು ಬಯಲಿಗೆಳೆದಿದ್ದಾರೆ.

Update: 2024-12-03 06:26 GMT

ವೃತ್ತಿಪರ ಕೋರ್ಸುಗಳ ಸೀಟುಗಳ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಹತ್ತು ಜನರನ್ನು ಬಂಧಿಸಿರುವ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯ ಪೊಲೀಸರು, ವಂಚಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ನೌಕರನೇ ಪಾಸ್ವರ್ಡ್ ಕೊಡುತ್ತಿದ್ದ ಎಂಬ ಆಘಾತಕಾರಿ ಸಂಗತಿಯನ್ನು ಬಯಲಿಗೆಳೆದಿದ್ದಾರೆ.

ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಸೀಟು ಆಯ್ಕೆಗಾಗಿ ನಡೆದ ಪ್ರಕ್ರಿಯೆ ವೇಳೆ ಸೀಟು ಬ್ಲಾಕಿಂಗ್ ದಂಧೆ ಬೆಳಕಿಗೆ ಬಂದಿತ್ತು. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಮಲ್ಲೇಶ್ವರಂ ಪೊಲೀಸರು ಇದೀಗ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್ ಮತ್ತು ಕೆಇಎ ನೌಕರ ಅವಿನಾಶ್ ಸೇರಿದಂತೆ ಹತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆ ಪೈಕಿ ಹರ್ಷ ಇಡೀ ಹಗರಣದ ಕಿಂಗ್ಪಿನ್ ಎಂದು ಹೇಳಲಾಗಿದೆ. ಈತ ಕೆಇಎಯ ನೌಕರ ಅವಿನಾಶ್ನೊಂದಿಗೆ ವ್ಯವಹಾರ ಕುದುರಿಸಿ, ಆತನಿಂದಲೇ ಸೀಟ್ ಬ್ಲಾಕಿಂಗ್ ಗೆ ಪಾಸ್ವರ್ಡ್ ಪಡೆದು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿಯನ್ನು ತನಿಖೆಯ ವೇಳೆ ಹೊರಗೆಳೆದಿದ್ದಾರೆ.

ಸೀಟು ಆಯ್ಕೆಯ ಕೌನ್ಸೆಲಿಂಗ್ ಗೆ ಆಯ್ಕೆಯಾಗಿಯೂ ವಿದ್ಯಾರ್ಥಿಗಳು, ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳದೇ ಬಿಟ್ಟ ಸೀಟುಗಳನ್ನು ಮತ್ತು ಸರ್ಕಾರದ ಕೋಟಾದಡಿ ಖಾಸಗಿ ಕಾಲೇಜು ಸೀಟು ಪಡೆದು ದಾಖಲಾತಿ ಆಗದೆ ಬಿಟ್ಟ ಸೀಟುಗಳನ್ನು ಗುರುತಿಸಿ, ಆ ಸೀಟುಗಳನ್ನು ಕೆಇಎಗೆ ಅರಿವಿಲ್ಲದಂತೆ ಬ್ಲಾಕ್ ಮಾಡುತ್ತಿದ್ದ ಈ ಗ್ಯಾಂಗ್, ಬಳಿಕ ಆ ಸೀಟುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಬೇರೆಯವರಿಗೆ ಮಾರಿಕೊಳ್ಳುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಹೊರ ರಾಜ್ಯದವರು, ಮತ್ತು ಉತ್ತರ ಭಾರತೀಯರಿಗೆ ದುಬಾರಿ ಬೆಲೆಗೆ ಈ ಸೀಟುಗಳನ್ನು ಮಾರಿಕೊಂಡು ಕಾಸು ಮಾಡುವ ಭಾರೀ ಹಗರಣ ಇದು ಎನ್ನಲಾಗಿದೆ.

ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳು ಮತ್ತು ಕೆಲವು ಮಧ್ಯವರ್ತಿಗಳೂ ಭಾಗಿಯಾಗಿದ್ದು, ಪೊಲೀಸರು ಆ ದಿಕ್ಕಿನಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.

ಸೀಟ್ ಬ್ಲಾಕಿಂಗ್ ಹಗರಣದ ಸಂಬಂಧ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ ಗಾಡಿಯಲ್ ಅವರು ಕಳೆದ ನವೆಂಬರ್ 13ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ಸುಳಿವು ಪಡೆದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರಕಾಶ್, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ತನ್ನ ಜಮೀನಿನಲ್ಲೇ ತನ್ನ ಲ್ಯಾಪ್ಟಾಪ್ ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ.

Tags:    

Similar News