ವರುಣನ ಅಬ್ಬರ | ಬೆಂಗಳೂರಿನ ನಗರ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ ಘೋಷಣೆ

ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

Update: 2024-10-21 03:23 GMT

ಬೆಂಗಳೂರಿನಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಿಗೆ ಸೋಮವಾರ (ಅ. 21) ರಜೆ ಘೋಷಿಸಲಾಗಿದೆ. 

ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಕಾಲೇಜು ಕಟ್ಟಡಗಳು ದುರ್ಬಲ ಅಥವಾ ಶಿಥಿಲವಾಗಿದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸದಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ರಜೆ ನೀಡಿರುವುದರಿಂದ ಉಂಟಾಗುವ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಲು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳ ಪೋಷಕರು, ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರಿರುವ ತಗ್ಗು ಪ್ರದೇಶಗಳಿಗೆ ಹೋಗಬಾರದು. ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ಮುನ್ನೆಚ್ಚರಿಕೆ

ಭಾರೀ ಮಳೆಯಾಗುತ್ತಿರುವ ಮತ್ತು ಮಳೆ ಮುನ್ಸೂಚನೆ ಇರುವುದರಿಂದ ಬೆಂಗಳೂರು ಜನರಿಗೆ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಲಹೆ ನೀಡಿದೆ. ಈ ಕುರಿತು ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.

21.10.2024 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ದಯವಿಟ್ಟು ಮುನ್ನೆಚ್ಚರಿಕೆ ವಹಿಸಿ. ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಿ. ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ. ಮಳೆ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳಿ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ. ವಿದ್ಯುತ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್ಪ್ಲಗ್ ಮಾಡಿ ಇಡಿ. ಜಲಮೂಲಗಳಿಂದ ಹೊರಬನ್ನಿ ಎಂದು ಬಿಬಿಎಂಪಿ ಸಲಹೆ ನೀಡಿದೆ.

ವಿದ್ಯುಚ್ಛಕ್ತಿಗೆ ಸಂಬಂಧಿತ ಎಲ್ಲ ಸಾಧನಗಳಿಂದ ದೂರವಿರಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಯಾವುದೇ ಸಹಾಯ ಬೇಕಿದ್ದಲ್ಲಿ 1533 ಗೆ ಕರೆ ಮಾಡಿ ಎಂದು ಸೂಚಿಸಿದೆ.

ಮನೆಗಳಿಗೆ ನೀರು ನುಗ್ಗಿ ಅವಾಂತರ

ಬ್ಯಾಟರಾಯನಪುರ ಬಳಿ ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನದ ಸಮೀಪ ಭಾರಿ ಮಳೆಗೆ ರಾಜಕಾಲುವೆ ನೀರು ತುಂಬಿ ಹರಿದಿದೆ. ಇದರಿಂದ ಬಡಾವಣೆಯ ಹಲವು ಮನೆಗಳಿಗೆ 2 ಅಡಿಯಷ್ಟು ನೀರು ನುಗ್ಗಿ ನಿವಾಸಿಗಳು ಬವಣೆ ಅನುಭವಿಸಿದರು.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ರಸ್ತೆಗಳು ನದಿಯಂತಾಗಿದ್ದು, ವಾಹನ ಸವಾರರು ಪರದಾಡಿದರು. ಇನ್ನು ಮಲ್ಲೇಶ್ವರಂ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಭಾನುವಾರ ರಾತ್ರಿ ಮರವೊಂದು ಆಲ್ಟೋ ಕಾರಿನ ಮೇಲೆ ಬಿದ್ದು ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು ಉತ್ತರ ತಾಲೂಕಿನ ತೋಟಗೆರೆ ಗ್ರಾಮದ ಬಳಿ ರಸ್ತೆಗೆ ಮರ ಧರೆಗುರುಳಿದೆ. ಇದರಿಂದ ಹೆಸರಘಟ್ಟ-ಗೊಲ್ಲಹಳ್ಳಿ ಮಾರ್ಗಮಧ್ಯೆ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ತಡರಾತ್ರಿವರೆಗೂ ಸುರಿದ ಜಡಿಮಳೆಯಿಂದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ದಾಸನಪುರ ರಸ್ತೆಯಲ್ಲಿ 4 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Tags:    

Similar News