ಚುನಾವಣೆ ಬಾಂಡ್‌: ಎಸ್‌ಬಿಐ ಮನವಿ ವಿಚಾರಣೆ 11ಕ್ಕೆ

Update: 2024-03-08 12:10 GMT

ಹೊಸದಿಲ್ಲಿ, ಮಾ.8-  ಪ್ರತಿ ಚುನಾವಣಾ ಬಾಂಡ್‌ನ ವಿವರ ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮಾರ್ಚ್ 11 ರಂದು ವಿಚಾರಣೆ ನಡೆಸಲಿದೆ.

ಮು.ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಎಸ್‌ಬಿಐ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ʻಉದ್ದೇಶಪೂರ್ವಕವಾಗಿ ಧಿಕ್ಕರಿಸಿದೆʼ ಎಂದು ನಿಂದನೆ ಕ್ರಮವನ್ನು ಪ್ರಾರಂಭಿಸಲು ಕೋರಿದ ಪ್ರತ್ಯೇಕ ಅರ್ಜಿಯನ್ನು ಆಲಿಸಲಿದೆ.

ಸುಪ್ರೀಂ ಕೋರ್ಟ್‌ ಫೆಬ್ರವರಿ 15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಚುನಾವಣೆ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದೆ. ಯೋಜನೆ ʻಅಸಾಂವಿಧಾನಿಕʼ ಎಂದು ಕರೆದಿದೆಯಲ್ಲದೆ, ದಾನಿಗಳು ಮತ್ತು ಅವರು ನೀಡಿದ ಮೊತ್ತವನ್ನುಬಹಿರಂಗಪಡಿಸುವಂತೆ ಆದೇಶಿಸಿದೆ. 2019 ರ ಏಪ್ರಿಲ್ 12 ರಿಂದ ಈವರೆಗಿನ ಚುನಾವಣಾ ಬಾಂಡ್‌ಗಳ ವಿವರಗಳನ್ನು ಮಾರ್ಚ್ 6 ರೊಳಗೆ ಸಲ್ಲಿಸುವಂತೆ ಹಾಗೂ ಮಾರ್ಚ್ 13 ರೊಳಗೆ  ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಬೇಕೆಂದು ಹೇಳಿತ್ತು.

ಆನಂತರ, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಕಾಮನ್ ಕಾಸ್ ಸಲ್ಲಿಸಿದ ಅರ್ಜಿಯಲ್ಲಿ ಎಸ್‌ ಬಿಐ ಉದ್ದೇಶಪೂರ್ವಕವಾಗಿ ಸಮಯ ವಿಸ್ತರಣೆ ಕೋರಿ ಮನವಿ ಸಲ್ಲಿಸಿದೆ ಎಂದು ದೂರಲಾಗಿದೆ.


Tags:    

Similar News