ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆ

Update: 2024-02-22 14:44 GMT

ನವದೆಹಲಿ, ಫೆ. 22- ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. 

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕಮಾಂಡೋಗಳು ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಿದ್ದಾರೆ. ಗೃಹ ಸಚಿವಾಲಯ ಈ ತಿಂಗಳ ಆರಂಭದಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. 

ಪ್ರಧಾನ ವಿರೋಧ ಪಕ್ಷದ ಅಧ್ಯಕ್ಷರಾದ ಖರ್ಗೆ ಅವರು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರವಾಸ ಮಾಡುವ ನಿರೀಕ್ಷೆಯಿದೆ. ಹೀಗಾಗಿ, ಅವರ ಭದ್ರತೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ಪಾಳಿಗಳಲ್ಲಿ ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳು 24 ಗಂಟೆ ರಕ್ಷಣೆ ನೀಡಲಿದ್ದಾರೆ. ಬುಲೆಟ್ ಪ್ರೂಫ್ ವಾಹನ, ಪೈಲಟ್ ಮತ್ತು ಎಸ್ಕಾರ್ಟ್ ನೀಡಲಾಗುತ್ತದೆ. 

ಝಡ್‌ + ಅತ್ಯುನ್ನತ ವರ್ಗದ ಭದ್ರತೆಯಾಗಿದೆ. ಇಂಟೆಲಿಜೆನ್ಸ್ ಬ್ಯೂರೋ ನೀಡುವ ವಿಶ್ಲೇಷಣೆಯನ್ನುಆಧರಿಸಿ ಝಡ್‌ ಪ್ಲಸ್, ಝಡ್,‌ ವೈ ಮತ್ತು ಎಕ್ಸ್‌ ಎಂಬ ನಾಲ್ಕು ರೀತಿಯ ಭದ್ರತೆ ಒದಗಿಸಲಾಗುತ್ತದೆ.

ಪ್ರಧಾನಿ ಅವರಿಗೆ ವಿಶೇಷ ರಕ್ಷಣಾ ಗುಂಪು ಅತ್ಯುನ್ನತ ಭದ್ರತೆಯನ್ನು ಒದಗಿಸುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತಿದೆ.

2019 ರಲ್ಲಿ ಸರ್ಕಾರ 350 ರಾಜಕಾರಣಿಗಳ ಭದ್ರತೆಯನ್ನು ತೆಗೆದುಹಾಕಿತು ಅಥವಾ ಕಡಿಮೆಗೊಳಿಸಿತು. ಇದರಿಂದ 1,300 ಕಮಾಂಡೋ ಗಳನ್ನು ಬಿಡುಗಡೆ ಮಾಡಲಾಯಿತು. 

Tags:    

Similar News