ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಆಜೀವ ನಿಷೇಧಕ್ಕೆ ಕೇಂದ್ರ ಸರ್ಕಾರ ವಿರೋಧ
Supreme Court : ಅಸ್ತಿತ್ವದಲ್ಲಿರುವ ಆರು ವರ್ಷಗಳ ಅನರ್ಹತೆಯ ಅವಧಿಯನ್ನು ಕೇಂದ್ರವು ಸಮರ್ಥಿಸಿಕೊಂಡಿದ್ದು, ಅಷ್ಟೇ ಸಾಕು ಎಂದು ಕೋರ್ಟ್ಗೆ ಹೇಳಿದೆ.;
ಸಾಂದರ್ಭಿಕ ಚಿತ್ರ.
ಯಾವುದೇ ಪ್ರಕರಣದಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಆಜೀವ ನಿಷೇಧ ಹೇರುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದ ಮನವಿಯನ್ನು ಕೇಂದ್ರ ಸರ್ಕಾರ ಬುಧವಾರ (ಫೆಬ್ರವರಿ 26) ಆಕ್ಷೇಪಿಸಿದೆ. ಅನರ್ಹತೆ ವಿಧಿಸುವ ಕಾನೂನು ರಚಿಸುವ ಜವಾಬ್ದಾರಿ ಸಂಸತ್ನದ್ದು ಹಾಗೂ ಸಂಪೂರ್ಣವಾಗಿ ಕೋರ್ಟ್ ವ್ಯಾಪ್ತಿ ಮೀರಿದ್ದು ಎಂದು ಹೇಳಿದೆ.
ಅಸ್ತಿತ್ವದಲ್ಲಿರುವ ಆರು ವರ್ಷಗಳ ಅನರ್ಹತೆಯ ಅವಧಿಯನ್ನು ಕೇಂದ್ರವು ಸಮರ್ಥಿಸಿಕೊಂಡಿದ್ದು, ಅಷ್ಟೇ ಸಾಕು ಎಂದು ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದೆ.
ಈ ಬಗೆಯ ಅರ್ಜಿಗಳನ್ನು ಮಾನ್ಯ ಮಾಡುವುದರಿಂದ, ಕಾನೂನನ್ನು ಬದಲಾವಣೆಗೆ ಅಥವಾ ಕಾನೂನುಗಳನ್ನು ರೂಪಿಸುವಂತೆ ಸಂಸತ್ತಿಗೆ ನಿರ್ದೇಶನ ಮಾಡಿದಂತಾಗುತ್ತದೆ . ಹೀಗಾಗಿ ಇದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಮೀರಿದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಶಿಕ್ಷೆಗೊಳಗಾದ ರಾಜಕಾರಣಿಗೆ ಆಜೀವ ನಿಷೇಧವು ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯು ಸಂಸತ್ತಿನ ವ್ಯಾಪ್ತಿಗೆ ಸೇರಿದ್ದು ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ.
ಶಿಕ್ಷೆಯ ಪ್ರಮಾಣವನ್ನು ನಿರ್ದಿಷ್ಟ ಕಾಲಕ್ಕೆ ಮಿತಿಗೊಳಿಸುವುದರಲ್ಲಿ ಅಸಂವಿಧಾನಿಕವಾದುದು ಏನೂ ಇಲ್ಲ. ಶಿಕ್ಷೆಯನ್ನು ನಿರ್ದಿಷ್ಟ ಸಮಯ ಅಥವಾ ಪ್ರಮಾಣಕ್ಕೆ ಸೀಮಿತಗೊಳಿಸುವುದು ಕೂಡ ಕಾನೂನಿನ ತತ್ವ ಎಂದು ಕೇಂದ್ರ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ.
"ಅರ್ಜಿದಾರರು ಎತ್ತಿದ ವಿಷಯಗಳು ವ್ಯಾಪಕ ಪರಿಣಾಮಗಳನ್ನು ಹೊಂದಿವೆ. ಸ್ಪಷ್ಟವಾಗಿ ಸಂಸತ್ತಿನ ಶಾಸನ ರಚನಾ ವ್ಯಾಪ್ತಿಗೆ ಸೇರಿದ್ದು, ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಆರು ವರ್ಷಗಳ ಅನರ್ಹತೆ
ದೇಶದಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದರ ಜೊತೆಗೆ ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಜೀವಾವಧಿ ನಿಷೇಧ ಹೇರಬೇಕೆಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 (1) ರ ಅಡಿಯಲ್ಲಿ, ಅನರ್ಹತೆಯ ಅವಧಿಯು ಶಿಕ್ಷೆಗೊಳಗಾದ ದಿನಾಂಕದಿಂದ ಆರು ವರ್ಷಗಳು ಅಥವಾ ಜೈಲು ಶಿಕ್ಷೆಗೊಳಗಾದರೆ, ಬಿಡುಗಡೆಯಾದ ದಿನಾಂಕದಿಂದ ಆರು ವರ್ಷಗಳು ಎಂದು ಅದು ಹೇಳಿದೆ.