ಸೋಮವಾರದ ಮಂಡಳಿ ಸಭೆ; ಬಣ್ಣದ ಲೋಕದ ಕರಾಳ ಮುಖಗಳನ್ನು ಅನಾವರಣಗೊಳಿಸುತ್ತದೆಯೇ?

ಅಷ್ಟ ದಿಕ್ಕುಗಳಿಂದ ಅಟ್ಟಿಸಿಕೊಂಡು ಬಂದಿರುವ ಒತ್ತಡಕ್ಕೆ ಮಣಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದೆಯರ ಮೇಲಿನ ʻಲೈಂಗಿಕ ದೌರ್ಜನ್ಯʼ ಕುರಿತು ಸಮಿತಿಯೊಂದರ ರಚನೆಯ ಬಗ್ಗೆ ಚರ್ಚಿಸಲು ಮಹತ್ವದ ಸಭೆಯನ್ನು ಕರೆದಿದೆ. ಹಾಗಾಗಿ ಉಪೇಂದ್ರ ಅವರ ಚಿತ್ರದ ಗೀತೆ- “ಮಾರಿಕಣ್ಣು ಹೋರಿ ಮ್ಯಾಗೆ…” ಎನ್ನುವಂತೆ ಕನ್ನಡ ಚಿತ್ರರಂಗದ ಚಿತ್ತ ಈಗ ಮಂಡಳಿಯತ್ತ…

Update: 2024-09-15 00:30 GMT
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
Click the Play button to listen to article

ಕಳೆದ ಮಾರ್ಚ್‌ ತಿಂಗಳಲ್ಲಿ ತೊಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ ಕನ್ನಡ ಚಿತ್ರರಂಗ, ಚಿತ್ರಮಂದಿರಗಳು ಚಿತ್ರಮಂದಿರಗಳಲ್ಲಿ ನಿಲ್ಲುತ್ತಿಲ್ಲ. ಓಟಿಟಿ ವೇದಿಕೆಗಳು ಕನ್ನಡ ಚಿತ್ರಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಪ್ರೇಕ್ಷಕರು ಚಿತ್ರಮಂದಿರಗಳ ಇರುವಿಕೆಯನ್ನೇ ಮರೆತಿವೆ. ಪ್ರೇಕ್ಷಕರು ಓಟಿಟಿ ವೇದಿಕೆಯಲ್ಲಿ ಇತರ ಎಲ್ಲ ಭಾಷೆಗಳ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ….ಹೀಗೆ ನೂರಾರು ಸಮಸ್ಯೆಗಳ ಮೂಟೆಯನ್ನು ಹೊತ್ತುಕೊಂಡಿದೆ. ದರ್ಶನ್‌ ಕೊಲೆ ಆರೋಪದಲ್ಲಿ ಜೈಲು ಬಂಧಿಯಾಗಿರುವುದರಿಂದ ತಾರಾ ನಟರ ಚಿತ್ರಗಳ ಮೇಲೆ ನಿಂತಿರುವ ಕನ್ನಡ ಚಿತ್ರರಂಗ ಮತ್ತೊಂದು ತೊಂದರೆಯಲ್ಲಿ ಸಿಲುಕಿದೆ.

ಮುಖ್ಯವಾಗಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce )ಏಕೆಂದರೆ, ಇತ್ತೀಚೆಗೆ ಕೆಎಫ್‌ಸಿಸಿ ನಿಯೋಗವೊಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಹೇಳಿಕೊಂಡು, ಸರ್ಕಾರದ ನೆರವು, ಬಂಬಲ ಕೋರಿತ್ತು. ಇಂಥ ಹೊತ್ತಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣಾ ಸಮಿತಿಯೊಂದನ್ನು ನೇಮಿಸಬೇಕೆಂದು ಫೈರ್(Film Industry for Rights and Equality (FIRE) ಒಕ್ಕೂಟದ ನಿಯೋಗವೊಂದು ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿಯೊಂದನ್ನು ಸಲ್ಲಿಸಿದ್ದು, ಅದಕ್ಕೆ ಸಿದ್ದರಾಮಯ್ಯ ನವರು ಸಕಾರಾತ್ಮಕ ಪ್ರತಿಕ್ರಿಯಿಸಿರುವುದು, ಕರ್ನಾಟಕ ಚಿತ್ರರಂಗಕ್ಕೆ ಅದರಲ್ಲೂ ಕೆಎಫ್‌ಸಿಸಿ ಗೆ  ನುಂಗಲಾರದ ತುತ್ತಾಗಿದೆ.

ಫೈರ್  ಸಲ್ಲಿಸಿದ ಈ ಹಕ್ಕೋತ್ತಾಯದ ಮನವಿಗೆ ನೂರಕ್ಕೂ ಹೆಚ್ಚು ಮಂದಿ ಚಿತ್ರರಂಗದ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಗಣ್ಯರು ಸಹಿ ಹಾಕಿರುವುದರಿಂದ, ಕರ್ನಾಟಕ ಸರ್ಕಾರ ಈ, ಸಮಸ್ಯೆಯನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೆಎಫ್‌ಸಿಸಿ ಈಗ ಎಚ್ಚೆತುಕೊಳ್ಳುವುದು ಅನಿವಾರ್ಯವಾಯಿತೆಂದು ಹೇಳಬಹುದು.

ಮಂಡಳಿಗೆ ಮುಜುಗರವೇಕೆ

ಕೆಎಫ್‌ಸಿಸಿ ಮುಜುಗರವಾಗಲು ಮತ್ತೊಂದು ಕಾರಣವೂ ಇದೆ. 2018ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರು ಅನುಭವಿಸುತ್ತಿರುವ ನಾನಾ ರೀತಿಯ ಲೈಂಗಿಕ ಹಿಂಸೆಯ ಸ್ವರೂಪವನ್ನು ಬಹುಭಾಷಾ ನಟಿ ಶೃತಿಹರಿಹರನ್‌ ಅವರು ಬಿಚ್ಚಿಟ್ಟಾಗ,ಕೆಎಫ್‌ಸಿಸಿಮಧ್ಯಸ್ತಿಕೆ ವಹಿಸಿತ್ತು. ಆ ಸಂದರ್ಭದಲ್ಲಿಫೈರ್ ಒಕ್ಕೂಟಕ್ಕೆ ಕೆಎಫ್‌ಸಿಸಿ ತನ್ನ ನೇತೃತ್ವದಲ್ಲಿ ಐಸಿಸಿ ಅಥವಾ ಆಂತರಿಕ ದೂರು ಸಮಿತಿ ರಚಿಸುವ ಭರವಸೆಯನ್ನು ನೀಡಿತ್ತು ಆ ಪ್ರಕರಣವಾಗಿ ಆರು ವರ್ಷ ಕಳೆದರೂ,ಕೆಎಫ್‌ಸಿಸಿ ಈ ಕುರಿತು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಫೈರ್ ಒಕ್ಕೂಟವನ್ನು ಮುನ್ನಡೆಸುತ್ತಿರುವ ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಇತ್ತೀಚೆಗೆ ಆರೋಪಿಸಿದ್ದರು. ಕಲಾವಿದೆಯರ ದೂರಿಗೆ ಕೆಎಫ್‌ಸಿಸಿ ಯಾವುದೇ ಬೆಲೆ ನೀಡುತ್ತಿಲ್ಲ ಎಂಬ ಕೂಗು ಬಹಳ ಹಿಂದಿನಿಂದಿಲೇ ಇರುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು, ಅದನ್ನು ಕೆಎಫ್‌ಸಿಸಿ ನಿರ್ಲಕ್ಷಿಸಿದೆ ಎಂಬುದು ಮುಖ್ಯಮಂತ್ರಿಗಳಿಗೆ ಅರಿವಾಗಿದೆ ಎಂಬುದು ಮಂಡಳಿಯ ಪದಾಧಿಕಾರಿಗಳಿಗೆ ಗೊತ್ತಾಗಿದೆ. ಹಾಗಾಗಿ, ಕನ್ನಡ ಚಿತ್ರರಂಗದ ಕೆಲವು ಪ್ರಮುಖ ಕಲಾವಿದರು ಮತ್ತು ನಿರ್ಮಾಪಕರು “ಅಂಥದ್ದೇನೂ ಕನ್ನಡ ಚಿತ್ರರಂಗದಲ್ಲಿ ನಡೆದಿಲ್ಲ” ಎಂದು ಸಮರ್ಥಿಸುವ ಮಟ್ಟಕ್ಕೆ ಇಳಿದಿದ್ದಾರೆ. ಲೈಂಗಿಕ ದೌರ್ಜನ್ಯ ಅನುಭವಿಸಿದ ಕಲಾವಿದೆಯರ ಆರ್ತನಾದ ಅವರ ಕಿವಿಗೆ ಕೇಳಿಸಿದಂತಿಲ್ಲ.

ಮುಖ್ಯಮಂತ್ರಿಯ ಮುಗ್ಧತೆ?

ಆದರೆ ಈಗ ಕರ್ನಾಟದ ʼದೋರೆʼಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ, “ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇದೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಗ್ಧತೆಯಿಂದ ಪ್ರಶ್ನಿಸಿರುವುದು ಕೆಎಫ್‌ಸಿಸಿ ಯ ಮುಖಕ್ಕೆ ರಾಚಿದಂತಾಗಿದೆ. ಹಾಗಾಗಿ ಕೆಎಫ್‌ಸಿಸಿ ಈತ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಇಷ್ಟೇ ಅಲ್ಲ. “ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆ ನಡೆಸಿದ ಚರ್ಚಿಸಿ, ಚಿತ್ರರಂಗದ ನಟಿಯರನ್ನು ಕರೆದು ಅವರ ಸಮ್ಮುಖದಲ್ಲಿ ಚಿತ್ರರಂಗದ ಪ್ರಮುಖರ ಸಭೆ ನಡೆಸಿ, ಫೈರ್ ಬೇಡಿಕೆಯನ್ನು ಅನುಸರಿಸಿ, ಉಚ್ಛ ನ್ಯಾಯಾಲಯದ ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣಾ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಕರ್ನಾಟಕ ಮಹಿಳಾ ಆಯೋಗಕೆಎಫ್‌ಸಿಸಿಗೆ ಪತ್ರವೊಂದನ್ನು ಬರೆದಿದೆ.

ನೆರೆಯ ಕೇರಳದ ಮಲೆಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ಲಿಂಗ ತಾರತಮ್ಯ ಮತ್ತಿತರ ಸಮಸ್ಯೆಗಳನ್ನು ಕುರಿತು ನ್ಯಾಯಮೂರ್ತಿ, ಹೇಮಾ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯೂ, ದೇಶದ ವಿವಿಧ ಭಾಷೆಗಳ ಬಣ್ಣದ ಲೋಕದ ಕರಾಳ ಮುಖಗಳನ್ನು ಪರಿಚಯಿಸಿತ್ತು. ಅಲ್ಲಿನ ಸರ್ಕಾರ ಎಂಥಾ ತಿಪ್ಪರಲಾಗ ಹಾಕಿದರೂ ಬಚಾಯಿಸಕೊಳ್ಳಲಾಗದ ಸ್ಥಿತಿಗೆ ತಲುಪಿದಾಗ ಹೇಮಾ ಸಮಿತಿಯ ವರದಿಯ ಸಂಕ್ಷೇಪಿಸಿದ ಭಾಗವನ್ನು ಬಹಿರಂಗಗೊಳಿಸಿತು. ಆದರೆ ನ್ಯಾಯಾಲಯ ಸಂಪೂರ್ಣ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದಾಗ ನಿರ್ವಾಹವಿಲ್ಲದೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಇದರಿಂದ ಮಲೆಯಾಳಂ ಚಿತ್ರರಂಗವಷ್ಟೇ ಅಲ್ಲ, ದಕ್ಷಿಣ ಭಾರತದ ವಿವಿಧ ಭಾಷೆಯ ಹಾಗೂ ಬಾಲಿವುಡ್ ನ ಮುಚ್ಚಿಕ ಕಪಾಟಿನೊಳಗೆ ಬಚ್ಚಿಟ್ಟುಕೊಂಡಿದ್ದ ನೂರಾರು ಸತ್ಯಗಳು ಬಹಿರಂಗವಾಗಿ ಭಾರತೀಯ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಆಗಲೂ, ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಕಣ್ಣು ಮುಚ್ಚಿಕುಳಿತಿದ್ದ. ಕೆಎಫ್‌ಸಿಸಿ ಕರ್ನಾದಲ್ಲೂ ಹೇಮಾ ಸಮಿತಿ ಮಾದರಿಯ ಸಮಿತಿ ರಚನೆಯಾಗಬೇಕೆಂಬ ಕೂಗು ಬಲವಾಗುತ್ತಿದ್ದಂತೆ ಬೆಚ್ಚಿ ಬಿದ್ದಂತೆ ಕಾಣುತ್ತಿದೆ.

ಸೋಮವಾರ ಮಹತ್ವದ ಸಭೆ

ಕರ್ನಾಟಕ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕ ಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಎಚ್ಚರದ ಮಾತುಗಳು ಕಿವಿಗೆ ಬಿದ್ದಾಗ, KFCC ಮನಸ್ಸಿಲ್ಲದ ಮನಸ್ಸಿನಿಂದ ಮಂಡಳಿಯ ಕಾರ್ಯಕಾರಿ ಮಂಡಳಿಯ ಸಭೆ ನಡೆಸಿ, ಮಹಿಳಾ ಆಯೋಗ ಮತ್ತು ಮಕ್ಕ ಳ ಕಲ್ಯಾಣ ಇಲಾಖೆಯ ಸೂಚನೆಯಂತೆ ಬರುವ ಸೋಮವಾರ ವಾಣಿಜ್ಯ ಮಂಡಳಿಯ ಅವರಣದಲ್ಲಿ ʻಮಹತ್ವʼದ ಸಭೆಯನ್ನು ಕರೆದಿದೆ. “ಆ ಸಭೆಗೆ ಚಿತ್ರರಂಗದ ಪ್ರಮುಖರನ್ನೆಲ್ಲ ಆಹ್ವಾನಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಗರದ ಪ್ರಮುಖ ಪಬ್ ಗಳಲ್ಲಿ ನಟ-ನಟಿಯರು ಪಾನಗೋಷ್ಠಿ ನಡೆಸುವುದು ನಿಲ್ಲಬೇಕು ಎಂಬ ಒತ್ತಾಯವೂ ಚಿತ್ರರಂಗದ ಮೇಲಿರುವುದರಿಂದ, ಆ ಕುರಿತು ಕೂಡ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಲಾವಿದೆಯರು, ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ ಅವರ ಹಿತ ಕಾಪಾಡಲು ಮಂಡಳಿ ಬದ್ಧ” ಎಂದು ಕೆಎಫ್‌ಸಿಸಿ ಯ ಅಧ್ಯಕ್ಷ ಎಂ.ಎನ್‌. ಸುರೇಶ್‌ ಅವರು ʼದ ಫೆಡರಲ್-ಕರ್ನಾಟಕದೊಂದಿಗೆ ಮಾತನಾಡಿ ತಿಳಿಸಿದ್ದಾರೆ.

ಪಾರ್ವತಮ್ಮ ರಾಜ್‌ ಕುಮಾರ್‌ ನೇತೃತ್ವದ ಸಮಿತಿ

ಕರ್ನಾಟಕದಲ್ಲಿ MeToo ಪ್ರಕರಣ ನಡೆದಾಗ ಕೆಎಫ್‌ಸಿಸಿ ತಳೆದ ನಿಲುವಿನ ಬಗ್ಗೆ ಪ್ರಶ್ನಿಸಿದಾಗ ಅವರು; “ರಾಜ್ಯದಲ್ಲಿ MeToo ಪ್ರಕರಣ ನಡೆದಾಗ KFCC ತನ್ನ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಮಂಡಳಿ ತನ್ನ ಮಿತಿಯಲ್ಲಿರುವ ಎಲ್ಲ ಪ್ರಯತ್ನವನ್ನೂ ಮಾಡಿತು. ಈ ಹಿಂದೆ ನಮ್ಮಲ್ಲಿ ಡಾ. ಪಾರ್ವತಮ್ಮ ರಾಜ್ ಕುಮಾರ್‌ ಅವರ ನೇತೃತ್ವದಲ್ಲಿ ಇಂಥ ಸಮಿತಿಯೊಂದಿತ್ತು. ಮತ್ತೆ ಈಗ ಅದೇ ಮಾದರಿಯಲ್ಲಿ ಸಮಿತಿಯೊಂದನ್ನು ರಚಿಸಲು ಮಂಡಳಿ ಸಿದ್ಧವಿದೆ” ಎಂದು ಸುರೇಶ್‌ ಸಮರ್ಥಿಸಿಕೊಂಡಿದ್ದಾರೆ.

ಅಷ್ಟ ದಿಕ್ಕುಗಳಿಂದ ಅಟ್ಟಿಸಿಕೊಂಡು ಬಂದಿರುವ ಒತ್ತಡಕ್ಕೆ ಮಣಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದೆಯರ ಮೇಲಿನ ʻಲೈಂಗಿಕ ದೌರ್ಜನ್ಯʼ ಕುರಿತು ಸಮಿತಿಯೊಂದರ ರಚನೆಯ ಬಗ್ಗೆ ಚರ್ಚಿಸಲು ಮಹತ್ವದ ಸಭೆಯನ್ನು ಕರೆದಿದೆ. ಹಾಗಾಗಿ ಉಪೇಂದ್ರ ಅವರ ಚಿತ್ರದ ಗೀತೆ- “ಮಾರಿಕಣ್ಣು ಹೋರಿ ಮ್ಯಾಗೆ…” ಎನ್ನುವಂತೆ ಕನ್ನಡ ಚಿತ್ರರಂಗದ ಚಿತ್ತ ಈಗ ಮಂಡಳಿಯತ್ತ…

Tags:    

Similar News