Union Budget 2025 | ರಾಜ್ಯ ಕಾಂಗ್ರೆಸ್‌ ಟೀಕೆ; ಬಿಜೆಪಿ ಶ್ಲಾಘನೆ

Union Budget 2025 | ಬಿಹಾರ ರಾಜ್ಯದ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದ್ರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ? ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ ಎಂದು ಕಾಂಗ್ರೆಸ್‌ ಹೇಳಿದೆ.;

Update: 2025-02-01 12:15 GMT
ನಿರ್ಮಲಾ ಸೀತಾರಾಮನ್‌

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆದರೆ, ಈ ಬಜೆಟ್​​ಗೆ ರಾಜ್ಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರೆ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. 

ಬಜೆಟ್‌ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ. ಕರ್ನಾಟಕದ ಯಾವ ಬೇಡಿಕೆಯೂ ಈಡೇರಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ತೆರಿಗೆ ಬೇರೆ ರಾಜ್ಯದ ಪಾಲಾಗ್ತಿದೆ. ಬಿಹಾರ ರಾಜ್ಯದ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದ್ರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರೋದಾ? ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ. ಬಿಜೆಪಿ ಸರ್ಕಾರ ಕರ್ನಾಟಕಕ್ಕೆ  ದ್ರೋಹ ಮಾಡುತ್ತಿದೆ ಎಂದು ಅವರು ಟೀಕಿಸಿದರು. 

ಭದ್ರಾ ಮೇಲ್ದಂಡೆ ಯೋಜನೆಗೆ ಇಂದು ಪೈಸಾ ಕೂಡ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆ ಏನೂ ನೀಡಿಲ್ಲ. ಬೆಂಗಳೂರು ದೇಶಕ್ಕೆ ಉದ್ಯೋಗ ಕೊಡುತ್ತಿದೆ. ರಪ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡುತ್ತಿದೆ. ಆದರೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ. ಕರ್ನಾಟಕ ಏಕೆ ಕಾಣುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 

ಬಜೆಟ್ ತೀರಾ ನಿರಾಶಾದಾಯಕವಾಗಿದೆ

ಕೇಂದ್ರ ಸರಕಾರದ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಭಾರೀ ಲಾಭ ತಂದುಕೊಡುವಂತೆ ಕಣ್ಣೊರೆಸುವ ತಂತ್ರಗಳನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಜಿಡಿಪಿ ಬೆಳವಣಿಗೆ ಹೆಚ್ಚಿಸುವಂತಹ ಯಾವ ಅಂಶವೂ ಬಜೆಟ್ಟಿನಲ್ಲಿ ಇಲ್ಲದಿರುವುದು ಕಳವಳಕಾರಿ ಅಂಶವಾಗಿದೆ. ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆ ಮಾಡದೆ ಇರುವುದು ಚಿಂತಿಸುವಂತಹ ವಿಷಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

`ಮುಖ್ಯವಾಗಿ ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ನಿರಾಳತೆ ತಂದುಕೊಡುತ್ತಿರುವಂತೆ ಈ ಬಜೆಟ್ ಭಾಸವಾಗುತ್ತಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. 12 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಅಂದಿದ್ದಾರೆ. ಆದರೆ ಅದಕ್ಕಿಂತ ಒಂದು ರೂಪಾಯಿ ಹೆಚ್ಚಿನ ಆದಾಯ ಬಂದರೂ ಈ ವಿನಾಯಿತಿ ಸಿಗುವುದಿಲ್ಲ. ಬದಲಿಗೆ ಶೇ.20ಕ್ಕೂ ಹೆಚ್ಚು ತೆರಿಗೆ ವಿಧಿಸುತ್ತಾರೆ. ಇದರ ಬದಲು ತೆರಿಗೆದಾರರಿಗೆ ನೇರವಾಗಿ ಮತ್ತು ಸುಲಭವಾಗಿ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕಾಗಿತ್ತು. ಸಮಾಜದ ಈ ನಿರೀಕ್ಷೆಗೆ ಸ್ಪಂದಿಸಲು ನರೇಂದ್ರ ಮೋದಿ ಸರಕಾರ ವಿಫಲವಾಗಿದೆ. ಇದರ ಬಿಸಿ ಮುಂದಿನ ದಿನಗಳಲ್ಲಿ ಜನರಿಗೆ ಗೊತ್ತಾಗಲಿದೆ’ ಎಂದಿದ್ದಾರೆ.

ಜನರಿಗೆ ಅನುಕೂಲವೇನೂ ಇಲ್ಲ: ಪ್ರಿಯಾಂಕ್‌

ಕೇಂದ್ರ ಸರ್ಕಾರ ಮಂಡನೆ ಮಾಡಿದ ಹತ್ತು ಬಜೆಟ್ ನೋಡಿದ್ದೇವೆ. ಎಲ್ಲ ಬಜೆಟ್‌ನಲ್ಲಿಯೂ ಕೇವಲ ಘೋಷಣೆ ಮಾತ್ರವೇ ಇರುತ್ತವೆಯೇ ಹೊರತು ಜನರಿಗೆ ಅನುಕೂಲ ಆಗುವಂತಹದ್ದು ಇಲ್ಲ. ಕಾರ್ಮಿಕರು, ಮಹಿಳೆಯರು, ಯುವಕರಿಗೆ, ಆದಾಯ ತೆರಿಗೆ ಪಾವತಿದಾರರು, ಎಸ್ಎಂಇ, ಎಂಎಸ್ಎಂಇ, ನವೋದ್ಯಮಿಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಕೇಂದ್ರದ ಯಾವ ಯೋಜನೆ ಯಶಸ್ವಿಯಾಗಿದೆ?, ಈ ಹಿಂದೆ ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗೆ ₹20 ಸಾವಿರ ಘೋಷಣೆ ಮಾಡಿ ಈವರೆಗೂ ಕೊಟ್ಟಿದ್ದು ಬರೀ ₹454 ಕೋಟಿ ರೂ ಅಷ್ಟೆ. ಅವರು ಅಲಂಕಾರಿಕ ಪದಗಳನ್ನು ಬಳಸಿ ಘೋಷಣೆ ಮಾಡುವುದರಲ್ಲಿ ಮುಂದಿದ್ದಾರೆ. ಆದರೆ ಬೇರು ಮಟ್ಟದಲ್ಲಿ ಅನುಷ್ಠಾನ ಶೂನ್ಯವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಜಲಜೀವನ್ ಮಿಷನ್‌ನಲ್ಲಿ ₹3500 ಕೋಟಿ ಕೊಡಬೇಕು. ಆದರೆ ನೀಡಿರುವುದು ₹500 ಕೋಟಿ. ನಾವು ಕೇಳಿದಾಗ ದುಡ್ಡಿಲ್ಲ ಎನ್ನುತ್ತಾರೆ. ಕೆಲಸ ನಿಲ್ಲಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಉಳಿದ ₹3000 ಕೋಟಿ ಮೊತ್ತವನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ದೊಡ್ಡ ಘೋಷಣೆಗಳಿಗೆ ಸೀಮಿತವಾಗಿದೆ. ಆದರೆ ಅವುಗಳ ಪರಿಪೂರ್ಣ ಅನುಷ್ಠಾನ ಎಂದಿಗೂ ನಡೆದಿಲ್ಲ ಎಂದು ಹೇಳಿದ್ದಾರೆ.

ಮಧ್ಯಮ ವರ್ಗಕ್ಕೆ ಅಚ್ಚರಿಯ ಕೊಡುಗೆ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಮಧ್ಯಮ ವರ್ಗಕ್ಕೆ ಅಚ್ಚರಿಯ ಉಡುಗೊರೆಯನ್ನು ನೀಡಿದೆ, ಅವರ ಉಳಿತಾಯವನ್ನು ಹೆಚ್ಚಿಸಿದೆ. ಇದು ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 

ಶನಿವಾರ ಕೇಂದ್ರ ಬಜೆಟ್ ಮಂಡನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಅಭಿವೃದ್ಧಿ ಆಧಾರಿತ ಬಜೆಟ್ ಆಗಿದ್ದು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದ ದೃಷ್ಟಿಕೋನದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು. ಇದು ಆರ್ಥಿಕ ಮತ್ತು ಸಾಮಾಜಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಮತ್ತು ಮೋದಿ ಅವರ ಸ್ವಾವಲಂಬನೆಯ ಕನಸಿನೊಂದಿಗೆ ಹೊಂದಿಕೆಯಾಗುತ್ತದೆ.

ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ. ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳು. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವ ಮುಂಚೂಣಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ.

ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸುವುದರೊಂದಿಗೆ ಸತತ 8 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆಯ ದಿಟ್ಟ ಮಹಿಳೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌  ಅವರಿಗೆ ಅಭಿನಂದನೆಗಳು.

ಪ್ರಧಾನಿ ಮೋದಿ ಅವರ ಸರ್ಕಾರವು ದೇಶದ ಆರ್ಥಿಕತೆ ಸುಭದ್ರವಾಗಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪ ಈಡೇರಿಸುವ ಅತ್ಯುತ್ತಮ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಭರವಸೆ ಮೂಡಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ನಮ್ಮ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಾಧ್ಯಮ ವಲಯದ ಉದ್ಯಮಗಳ ಸಬಲೀಕರಣದ ಸಾಕಾರದ ಗುರಿ ಸಾಧಿಸಲು ಈ ಬಜೆಟ್ ಉಪಯುಕ್ತವಾಗಲಿದೆ. ಪ್ರಗತಿನಿಷ್ಠ ಮಾರ್ಗಸೂಚಿ, ರಫ್ತಿಗೆ ಆದ್ಯತೆ, ಹೂಡಿಕೆ ಸ್ನೇಹಿ ಮತ್ತು ಸುಧಾರಣಾ ಕ್ರಮಗಳು, ಪರಿವರ್ತನೆಯ ನೀತಿಗಳ ಮೂಲಕ ಸಶಕ್ತ, ಸಮಗ್ರ ಅಭಿವೃದ್ಧಿಯನ್ನು ಬಜೆಟ್ 2025-26 ಖಾತರಿಪಡಿಸುತ್ತಿದೆ. ಇದು ಉದ್ಯಮಸ್ನೇಹಿ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ.

ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ, ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

2025ರಲ್ಲಿ ಕ್ಷಯರೋಗ ನಿರ್ಮೂಲನೆಯ ಗುರಿ ಸೇರಿದಂತೆ ಆರೋಗ್ಯಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ. ಹೊಸ ಪದ್ಧತಿಯಡಿಯಲ್ಲಿ ಬಂಡವಾಳ ಲಾಭದಂತಹ ವಿಶೇಷ ಆದಾಯ ಹೊರತುಪಡಿಸಿ, 12 ಲಕ್ಷ ರೂ. ಆದಾಯದವರೆಗೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಕ್ರಮ ಮಾಧ್ಯಮ ವರ್ಗಗಳಿಗೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಾಲಿನ ಬಜೆಟ್ ಸ್ವಾವಲಂಬನೆ, ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಯಲು ಭಾರತವನ್ನು ಸಶಕ್ತಗೊಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಬಜೆಟ್‌ ಶ್ಲಾಂಘಿಸಿದ್ದಾರೆ. 

ಜನಪರ ಕೇಂದ್ರ ಬಜೆಟ್‌:ಅಶೋಕ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ವಿನಾಯಿತಿ ಘೋಷಿಸುವ ಮೂಲಕ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಶ್ಲಾಘಿಸಿದ್ದಾರೆ.

ಯಾವುದೇ ತೆರಿಗೆ ಹೆಚ್ಚಿಸದೆ 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ತಿಂಗಳಿಗೆ ₹ 1 ಲಕ್ಷ ಸಂಬಳ ಪಡೆಯುವವರು ತೆರಿಗೆ ಕಟ್ಟಬೇಕಿಲ್ಲ. ರಾಜ್ಯ ಸರ್ಕಾರ ಕೇವಲ ವೋಟು ಗಿಟ್ಟಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೂ ತೆರಿಗೆ ಹೆಚ್ಚಿಸಲ್ಲ ಅಂತ ಹೇಳಿ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲದರ ಮೇಲೆ ತೆರಿಗೆ ಹೆಚ್ಚು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

Tags:    

Similar News