Internal Reservation: Part-4 | ಜಾತಿ ಸೂಚಕ ಪದದ ಸೇರ್ಪಡೆ ಬಗ್ಗೆ ಅಪಸ್ವರ: ಚಿಂತಕ ಪ್ರೊ. ಅರವಿಂದ ಮಾಲಗತ್ತಿ ಹೇಳುವುದೇನು?
The Federal Debate:ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಕೈ ಬಿಡುವ ಕುರಿತು ಮಾತುಗಳಿಗೆ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತರ ಏಕತೆಯ ಧ್ಯೋತಕವಾದ ಜಾತಿ ಸೂಚಕ ಪದಗಳನ್ನು ಉಳಿಸಿಕೊಂಡೇ ಮೂಲ ಜಾತಿಯ ಹೆಸರಿನಲ್ಲಿ ಸಮೀಕ್ಷೆ ನಡೆಸಬೇಕು ಎಂದು ಚಿಂತಕ ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.;
ಪರಿಶಿಷ್ಟ ಜಾತಿ ಉಪಜಾತಿಗಳಿಗೆ ಮೀಸಲಾತಿ ಹಂಚಿಕೆ ಮಾಡುವ ಸಂಬಂಧ ಎದ್ದಿರುವ ವಿವಾದದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳ ಬಳಕೆಯ ಪ್ರಸ್ತುತತೆ ಕುರಿತು ಚರ್ಚೆಗಳು ಆರಂಭವಾಗಿವೆ.
ಜಾತಿ ಸೂಚಕಗಳಿಂದಲೇ 101 ಉಪಪಂಗಡಗಳ ಮೂಲ ಜಾತಿಗಳ ದತ್ತಾಂಶ ಸಿಗದಂತಾಗಿದ್ದು, ಅವುಗಳನ್ನು ಸಮೀಕ್ಷೆಯಿಂದ ಹೊರಗಿಟ್ಟು ಉಳಿದ 98ಜಾತಿಗಳ ಸಮೀಕ್ಷೆ ನಡೆಸಬೇಕೆಂಬ ದಲಿತ ಹೋರಾಟಗಾರರ ಆಪೇಕ್ಷೆಗೆ ಚಿಂತಕರ ವಲಯದಲ್ಲಿ ಅಪಸ್ವರ ಎದ್ದಿದೆ. ಈ ಕುರಿತು ದಲಿತ ಚಿಂತಕ ಅರವಿಂದ ಮಾಲಗತ್ತಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಾರಿತ್ರಿಕ ಮಹತ್ವವಿರುವ ಜಾತಿಸೂಚಕ
ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿ ಸೂಚಕಗಳನ್ನು ಗಣತಿಯಿಂದ ಕೈ ಬಿಡಬಾರದು. ಅವುಗಳನ್ನು ಉಳಿಸಿಕೊಂಡೇ ಸಮೀಕ್ಷೆ ನಡೆಸಿ, ಉಪಜಾತಿಗಳ ದತ್ತಾಂಶ ಸಂಗ್ರಹಿಸಬೇಕು ಎಂದು ಅರವಿಂದ ಮಾಲಗತ್ತಿ ಅವರು ಪ್ರತಿಪಾದಿಸಿದ್ದಾರೆ.
ಆದಿ ಕರ್ನಾಟಕ , ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳಲ್ಲ, ದಲಿತರನ್ನು ಒಂದುಗೂಡಿಸಲು ರೂಪಿಸಿದ ಚಳವಳಿ. ದಕ್ಷಿಣ ಭಾರತದಲ್ಲಿ ವ್ಯಾಪಿಸಿರುವ ಈ ಜಾತಿ ಸೂಚಕಗಳಿಗೆ ತನ್ನದೇ ಚಾರಿತ್ರಿಕ ಮಹತ್ವವಿದೆ. ದಲಿತರು ಈ ನೆಲೆದ ಮೂಲ ನಿವಾಸಿಗಳು ಎಂಬುದನ್ನು ಜಾತಿಸೂಚಕಗಳು ಹೇಳುತ್ತವೆ. ಇವುಗಳ ಅಸ್ತಿತ್ವ, ಅಸ್ಮಿತೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಜಾತಿ ಸೂಚಕಗಳನ್ನು ಕಡೆಗಣಿಸುವುದು ಮೀಸಲಾತಿಯ ಅಲ್ಪಾವಧಿಯ ಆಸೆಗಾಗಿ ಶತಮಾನದ ಆಂದೋಲನವನ್ನು ಅವಮಾನಿಸಿದಂತೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದಂತಹ ತ್ರಿಶಕ್ತಿ ಪದಗಳನ್ನು ಕೈಬಿಡುವ ಚಿಂತನೆ ಸರಿಯಲ್ಲ. ಈ ತ್ರಿಶಕ್ತಿ ಪದಗಳನ್ನು ಏಕೆ ಬಳಸಿದರು ಎಂಬುದರ ಪರಿವೇ ಇಲ್ಲದ ಅನಕ್ಷರಸ್ಥರು ಮತ್ತೆ ಜಾತಿ ಪ್ರಗತಿಯ ರಥವನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1890ರ ದಶಕದಲ್ಲಿ ಜಾತಿ ವ್ಯವಸ್ಥೆಯನ್ನು ಮೀರಿ ಎಲ್ಲರೂ ಒಂದಾಗಬೇಕೆಂಬ ಆಂದೋಲನ ಹುಟ್ಟಿಕೊಂಡಿತು. 1906 ರಲ್ಲಿ ಮೊದಲ ಬಾರಿಗೆ 'ಆದಿ ಕರ್ನಾಟಕ' ಎಂದು ಕರೆಯುವಂತೆ ಮೈಸೂರು ರಾಜರಿಗೆ ಒತ್ತಾಯಿಸಿದ ಬಳಿಕ ಚಾಲ್ತಿಗೆ ಬಂದಿತು. ಅದೇ ರೀತಿ ತಮಿಳು ಮತ್ತು ತೆಲುಗು ಭಾಷಿಕರನ್ನು ಕ್ರಮವಾಗಿ ಆದಿ ದ್ರಾವಿಡ, ಆದಿ ಆಂಧ್ರ ಎಂದು ಕರೆಯಲಾಯಿತು.ದಕ್ಷಿಣ ಭಾರತದಾದ್ಯಂತ ನಡೆದ ಚಳವಳಿಗೆ ಆದಿ ಧರ್ಮ ಚಳವಳಿ ಎಂದು ಹೆಸರಿಸಲಾಯಿತು. ಇದರ ಜೊತೆಯಲ್ಲೇ ದೇಶಾದ್ಯಂತ ನಾಮ ಶೂದ್ರ ಚಳವಳಿ ಕೂಡ ಬೆಳೆಯಿತು ಎಂದು ವಿವರಿಸಿದರು.
ಹಿರಿಯರ ಬೆವರಿನ ಚಿಂತನಾ ಮೌಲ್ಯಗಳು ಈ ಪೀಳಿಗೆಗೆ ಸಾಕಾಗುತ್ತಿಲ್ಲ. ಈ ಚಿಂತನೆಯು 19 ನೇ ಶತಮಾನಕ್ಕಿಂತ 21 ನೇ ಶತಮಾನದ ಜನರಿಗೆ ಹೆಚ್ಚು ಮುಖ್ಯವಾಗಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಪ್ರತಿ ಹಂತದಲ್ಲೂ ಜನಸಂಖ್ಯೆಯೇ ಇದಕ್ಕೆ ಆಧಾರ. ಜಾತಿಯನ್ನು ಮೀರಿ ಮನುಷ್ಯರಾಗುವ ಬದಲು ಮತ್ತೆ ಜಾತಿಯ ಚರಂಡಿ ಒಡೆಯನಾಗಿ ನಿಲ್ಲುವ ಮೂರ್ತಿಯೇ ಅಸಹ್ಯ ಎಂದು ಟೀಕಿಸಿದರು.
ಮೀಸಲಾತಿ ಎಷ್ಟು ಕಾಲ ಉಳಿಯಬಹುದು?
ಮೀಸಲಾತಿಯ ಆಸೆಗಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಪದಗಳನ್ನು ತೆಗೆಯಬೇಕು ಎಂಬುದು ಗುಲಾಮಗಿರಿಯ ಮನಸ್ಥಿತಿ. ಇಲ್ಲಿ ಒಳ ಮೀಸಲಾತಿಯನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ, ಯಾವುದೇ ಮೀಸಲಾತಿ ಜನ್ಮಾಂತರದವರೆಗೆ ಇರುವುದಿಲ್ಲ ಎಂಬ ಸತ್ಯವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ದಲಿತರ ಸಾಂಘಿಕ ಶಕ್ತಿ ಕಳೆದುಕೊಳ್ಳದಂತೆ ನಿಗಾ ವಹಿಸಿ ಒಳ ಜಾತಿಗಳನ್ನು ದಾಖಲಿಸಬೇಕು ಎಂದು ಹೇಳಿದರು.
ಜಾತಿ ಸೂಚಕ ಶಬ್ದಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಒಳ ಮೀಸಲಾತಿ ಬಳಕೆಯ ದೃಷ್ಟಿಯಿಂದ ಉಪ ಜಾತಿಗಳನ್ನು ಜಾತಿ ಸೂಚಕಗಳೊಂದಿಗೆ ಕಡ್ಡಾಯವಾಗಿ ಗುರುತಿಸಬೇಕು ಎಂದು ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಈಗಿನ ಜಾತಿ ಲೆಕ್ಕಾಚಾರದ ಸಂದರ್ಭದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಪದಗಳನ್ನು ವಿನಾಕಾರಣ ಬಿಟ್ಟುಕೊಡಬಾರದು. ತ್ರಿಶಕ್ತಿ ಪದಗಳಿಲ್ಲದಂತೆ ಮಾಡುವುದು ನಮ್ಮ ಹಿರಿಯರ ಚಳವಳಿಯನ್ನು ಸಾಯಿಸಿದಂತೆ. ಚಳವಳಿಯನ್ನು ಕಟ್ಟಲಾಗದವರಿಗೆ ಅದನ್ನು ಮುರಿಯುವ ನೈತಿಕ ಹಕ್ಕಿಲ್ಲ. ಸಮಯ ಕಳೆದುಹೋದ ನಂತರ ಅದನ್ನು ಮರುನಿರ್ಮಾಣ ಮಾಡುವುದು ಕಷ್ಟ ಎಂಬುದನ್ನು ಅರ್ಥ ಮಾಡಿಕೊಂಡು ಒಳ ಮೀಸಲಾತಿ ಸಮೀಕ್ಷೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
(ಡಾ. ಅರವಿಂದ ಮಾಲಗತ್ತಿ ಕನ್ನಡ ಸಾಹಿತ್ಯ ಲೋಕದ ಪ್ರಮುಖ ದಲಿತ ಲೇಖಕರಾಗಿ, ಕವಿ, ಕಾದಂಬರಿಕಾರ, ವಿಮರ್ಶಕ, ಸಂಶೋಧಕ ಮತ್ತು ಜಾನಪದ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬರಹಗಳ ಮೂಲಕ ಅವರು ದಲಿತ ಚಳವಳಿಯ ಪ್ರಮುಖ ಧ್ವನಿಯಾಗಿದ್ದು, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.)