UPSC Exam | ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ; ಬೆಳಿಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭ
ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಕಾಡುಗೋಡಿ, ಚಲ್ಲಘಟ್ಟ ಹಾಗೂ ಹಸಿರು ಮಾರ್ಗದ ಮಾದಾವರ ಹಾಗೂ ರೇಷ್ಮೆ ಸಂಸ್ಥೆಗಳ ನಿಲ್ದಾಣದಿಂದ ಬೆಳಿಗ್ಗೆ ಆರು ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.;
ನಮ್ಮ ಮೆಟ್ರೋ
ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯು ಭಾನುವಾರ (ಮೇ25) ನಡೆಯಲಿದ್ದು, ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಿಗ್ಗೆ ಆರು ಗಂಟೆಗೆ ಮೆಟ್ರೋ ರೈಲು ಸಂಚಾರ ಪ್ರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನಿರ್ಧರಿಸಿದೆ.
ಪ್ರತಿದಿನ ಭಾನಿವಾರ ಬೆಳಿಗ್ಗೆ ಏಳು ಗಂಟೆಯಿಂದ ರೈಲುಗಳು ಪ್ರಾರಂಭವಾಗುತ್ತವೆ. ಆದರೆ, ನಾಗರಿಕ ಸೇವಾ ಪರೀಕ್ಷೆ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಕಾಡುಗೋಡಿ, ಚಲ್ಲಘಟ್ಟ ಹಾಗೂ ಹಸಿರು ಮಾರ್ಗದ ಮಾದಾವರ ಹಾಗೂ ರೇಷ್ಮೆ ಸಂಸ್ಥೆಗಳ ನಿಲ್ದಾಣದಿಂದ ಬೆಳಿಗ್ಗೆ ಆರು ಗಂಟೆಗೆ ರೈಲುಗಳ ಸಂಚಾರ ಆರಂಭವಾಗಲಿದೆ. ಯುಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ʼನಮ್ಮ ಮೆಟ್ರೋʼ ಈಗಾಗಲೇ ಹಲವು ಬಾರಿ ಪ್ರಯಾಣಿಕ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ವೇಳೆ ತಡರಾತ್ರಿವರೆಗೂ ಮೆಟ್ರೋ ಪ್ರಯಾಣದ ಅವಧಿ ವಿಸ್ತರಿಸಿದೆ. ಕಳೆದ ವರ್ಷ ನಡೆದ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಆಗಸ್ಟ್ ಹಾಗೂ ಡಿಸೆಂಬರ್‌ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆ ವೇಳೆಯೂ ಸಹ ಬೆಳಿಗ್ಗೆ ಆರು ಗಂಟೆಗೆ ಮೆಟ್ರೋ ಸಂಚಾರ ಆರಂಭಿಸಿ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿತ್ತು.