ಮತ್ತೆರಡು ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ: ವರದಿ
ಐವಿ ಫ್ಲೂಯಿಡ್ ಬಳಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಕುತ್ತು ತರುತ್ತದೆ. ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ ಎಂಬ ಅಂಶ ಬಯಲಾಗಿದೆ.;
ರಾಜ್ಯದಲ್ಲಿ ಸಾಲು ಸಾಲು ಬಾಣಂತಿಯರ ಸಾವಿನ ಪ್ರಕರಣ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಸಾವಿನ ಕಾರಣವನ್ನು ಪರೀಕ್ಷಿಸಲು ಸರ್ಕಾರ ಡಾ. ಸವಿತಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಸಾವಿಗೆ ಕಾರಣ ಏನು ಎಂದು ತಿಳಿಯಿರಿ ಎಂದು ಬಳ್ಳಾರಿಗೆ ಕಳುಹಿಸಲಾಗಿತ್ತು. ಈ ಸಮಿತಿ ಕಳಪೆ ಐವಿ ಫ್ಲೂಯಿಡ್‌ಯೇ ಬಾಣಂತಿಯರ ಸಾವಿಗೆ ಕಾರಣ ಎಂದು ವರದಿ ಸಲ್ಲಿಸಿತ್ತು. ಆದರೆ, ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂಬ ಅಂಶ ಪತ್ತೆಯಾಗಿದೆ.
ಐವಿ ಫ್ಲೂಯಿಡ್ ಬಳಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಕುತ್ತು ತರುತ್ತದೆ. ಡೆಸ್ಟ್ರೋಸ್ ಹಾಗೂ ಇಂಜೆಕ್ಷನ್ ಕೂಡ ಅಸುರಕ್ಷಿತ ಎಂಬ ಅಂಶ ಬಯಲಾಗಿದೆ. ಐವಿ ಫ್ಲೂಯಿಡ್ ಅಸುರಕ್ಷಿತ ಎಂಬುದು ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯ ಪ್ರಯೋಗದಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕಳೆದ ವರ್ಷ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾಲು ಸಾಲು ಬಾಣಂತಿಯರ ಸಾವು ಸಂಭವಿಸಿತ್ತು. ಬಾಣಂತಿಯರಿಗೆ ನೀಡಿದ್ದ ಗ್ಲೂಕೋಸ್‌ನಿಂದಲೇ ಅವರು ಸಾವು ಕಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಬಾಣಂತಿಯರಿಗೆ ನೀಡಲಾಗಿದ್ದ ಕಳಪೆ ಐವಿ ದ್ರಾವಣ ಬಾಣಂತಿಯರ ಸಾವಿಗೆ ಕಾರಣವಾಗಿದ್ದು, ಆ ಬಳಿಕ ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್(ಐವಿ) ದ್ರಾವಣ ಬಳಕೆ ಮಾಡದಂತೆ ಇಡೀ ರಾಜ್ಯಾದ್ಯಂತ ಸೂಚನೆ ನೀಡಲಾಗಿದೆ.
ದೋಷಪೂರಿತ ಐವಿ ದ್ರಾವಣ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಎಚ್ ಒಗಳಿಗೆ ಪತ್ರ ಬರೆದಿತ್ತು. ಇದೀಗ ಮತ್ತೆರಡು ಐವಿ ಫ್ಲೂಯಿಡ್ ಕೂಡಾ ಬಳಕೆಗೆ ಯೋಗ್ಯವಲ್ಲ ಎಂದು ವರದಿಯಲ್ಲಿ ದೃಢಪಟ್ಟಿದ್ದು, ಹೀಗಾಗಿ ಆಸ್ಪತ್ರೆಗಳಲ್ಲಿ ಯಾವ ಐವಿ ಫ್ಲೂಯಿಡ್ ಬಳಸಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆಗೆ ಆತಂಕ ಎದುರಾಗಿದೆ.