ಶತಮಾನದಂಚಿನ ಕನ್ನಡ ʻಸಿನಿಮಾ ಲೋಕʼದ ಪುಸ್ತಕಗಳ ಕಥೆ-ವ್ಯಥೆ
91ಹರೆಯದ ಕನ್ನಡ ಚಿತ್ರರಂಗ ನಡೆದ ಬಂದ ದಾರಿಯನ್ನು ದಾಖಲಿಸುವ ನೂರಾರು ಪುಸ್ತಕಗಳು ಇದುವರೆಗೆ ಪ್ರಕಟವಾಗಿವೆ. ಆದರೆ, ಆ ಪುಸ್ತಕಗಳ ವ್ಯವಸ್ಥಿತ ಮಾರುಕಟ್ಟೆ ಮತ್ತು ಸುಸಜ್ಜಿತವಾದ ಗ್ರಂಥಾಲಯದ ಕೊರೆತೆಯಿಂದಾಗಿ ಅವುಗಳು ಕನ್ನಡ ಚಿತ್ರರಂಗದ ಬಗ್ಗೆ ಅಧ್ಯಯನ ಮಾಡುವ ಮಂದಿಗೆ ದಕ್ಕದೆ ಪುಸ್ತಕದಂಗಡಿಗಳಲ್ಲಿ, ಅಕಾಡೆಮಿ ಮತ್ತು ವಾಣಿಜ್ಯ ಮಂಡಳಿಯ ಗೋದಾಮುಗಳಲ್ಲಿ ಧೂಳು ಹಿಡಿಯುತ್ತಿರುವುದು ಕರಳು ಕಿವುಚುವಂಥ ಸಂಗತಿ;
Muralidhara Khajane
STORY
ಸಿನಿಮಾ ಶಿಕ್ಷಣದ ಒಂದು ಭಾಗವಾಗಬೇಕು ಎಂಬುದು ಸಿನಿಮಾ ಪಂಡಿತರ ಬಹು ದಿನಗಳ ಬೇಡಿಕೆ. ಆದರೆ ಇದು ಇನ್ನೂ ಸಿನಿಮಾ ಉದ್ಯಮದ ಬೇಡಿಕೆಯಾಗಿಲ್ಲ. ಸಿನಿಮಾ ಶಿಕ್ಷಣದ ಒಂದು ಭಾಗವಾಗಬೇಕೆಂದರೆ ಕೇವಲ ಸಿನಿಮಾವನ್ನು ಮನರಂಜನೆಯ ದೃಷ್ಟಿಯಿಂದ ನೋಡುವುದು ಎಂದರ್ಥವಲ್ಲ. ಸಿನಿಮಾ ವೀಕ್ಷಣೆ ಸಾಮಾಜಿಕ ಸಂಗತಿಗಳನ್ನು ಸುತ್ತಲಿನ ಜಗತ್ತನ್ನು ಅರ್ಥೈಸಿಕೊಳ್ಳುವ ಒಂದು ಭಾಗವಾಗಬೇಕು ಎಂದರ್ಥ. ಸಿನಿಮಾ ನೋಡುವ ಮೂಲಕ ನೊಡುಗರು, ವಿಶೇಷವಾಗಿ ಮಕ್ಕಳು ತಮ್ಮದೇ ದೃಷ್ಟಿಕೋನವನ್ನು ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ. ಭಾಷೆಗೆ, ಸಂಗೀತಕ್ಕೆ, ಕಲೆಗೆ ಒಂದು ವ್ಯಾಕರಣವಿರುವಂತೆ, ಸಿನಿಮಾಗೆ ಕೂಡ ಒಂದು ವ್ಯಾಕರಣವಿದೆ ಎಂಬುದನ್ನು ಅರ್ಥಮಾಡಿಕೊಂಡು ಕಲಿಯಬೇಕು ಎಂಬುದು ಮೂಲ ಆಶಯ.
ಉದ್ಯಮವಾಗಿ ಸಿನಿಮಾ
ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳನ್ನು ತಯಾರಿಸುತ್ತಿರುವ 90 ರ ಹರೆಯದ ಕನ್ನಡ ಚಿತ್ರರಂಗ ಉದ್ಯಮವಾಗಿರುವಾಗಲೂ, ಸಿನಿಮಾ ತಯಾರಿಕೆ, ಅರ್ಥೈಸುವಿಕೆ, ನೋಡುವಿಕೆ ಅದರ ವ್ಯಾಕರಣ, ದೃಶ್ಯ ಭಾಷೆಯನ್ನು ಶಾಲಾ ಮಟ್ಟದಲ್ಲಿ, ಉನ್ನತ ಅಧ್ಯಯನ ಮಟ್ಟದಲ್ಲಿ ಕಲಿಸಬೇಕೆಂಬುದು ಇದರ ನಿಜವಾದ ಆಶಯ. ತೀರಾ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗವನ್ನು ಉದ್ಯಮವಾಗಿ ಪರಿಗಣಿಸುವುದಾಗಿ ಹೇಳಿರುವುದರಿಂದ ಈ ಪ್ರಸ್ತಾವನೆ ಮಾಡಬೇಕಾಯಿತು. ಇತರ ಉದ್ಯಮಗಳಿಗೆ ಅಗತ್ಯವಿರು ಕುಶಲಕರ್ಮಿಗಳನ್ನು ಸಿದ್ಧಪಡಿಸಲು ಶಿಕ್ಷಣ ಸಂಸ್ಥೆಗಳು, ಅವುಗಳಿಗೆ ಅಗತ್ಯವಿರುವ ಬೋಧಕ ಸಲಕರಣೆಗಳ ಅಗತ್ಯವಾಗಿರುವಂತೆ ಸಿನಿಮಾ ಉದ್ಯಮವಾದಾಗ ಅದಕ್ಕೆ ಕುಶಲಕರ್ಮಿಗಳು ಅಂದರೆ, ಕಲಾವಿದರು, ತಂತ್ರಜ್ಞರನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳ ಅಗತ್ಯವೂ ಇದೆ ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು.
GFTI ಕಥೆ-ವ್ಯಥೆ
ಆದರೆ ಇತರ ಉದ್ಯಮಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಲು ಶಿಕ್ಷಣ ಸಂಸ್ಥೆಗಳಿರುವಂತೆ ಸಿನಿಮಾ ಶಿಕ್ಷಣಕ್ಕೆ ಅಗತ್ಯವಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕಡಿಮೆ. ಕರ್ನಾಟಕದಲ್ಲಿ ಇರುವುದು ಸರ್ಕಾರಿ ಫಿಲಂ ಮತ್ತು ಟೆಲಿವಿಷನ್ ಇನ್ಸ್ ಟಿ ಟ್ಯೂಟ್ (Government Film and Television Institute GFTI) ಇದೆ. ಆದರೆ ಅದು ಸೋತು ಸೊರಗಿ ಹೋಗಿ ಎಷ್ಟೋ ಕಾಲವಾಯಿತು. ಹಾಗೆ ಸಂಸ್ಥೆ ಇದ್ದರೂ, ಅಗತ್ಯವಿರುವ ಸರಿಯಾದ ಪಠ್ಯಕ್ರಮ (Syllubus) ರೂಪುಗೊಂಡೇ ಇಲ್ಲ ಪಠ್ಯ ಕ್ರಮ ಮಾಡಿದರೆಂದರೂ, ಬೋಧಿಸಲು ಸಮರ್ಥ ಪುಸ್ತಕಗಳೇ ಇಲ್ಲ. ಪರಿಸ್ಥಿತಿ ಹೀಗಿರುವುದರಿಂದ ಸಿನಿಮಾ ತಜ್ಞರಾದ ಎನ್ ವಿದ್ಯಾಶಂಕರ್, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಮಂಜುನಾಥ ಸೋಮಕೇಶವ ರೆಡ್ಡಿ ಮುಂತಾದವರು, ಸಿನಿಮಾ ಕುರಿತು, ಎಷ್ಟು ಪುಸ್ತಕಗಳು ಪ್ರಕಟಗೊಂಡರೂ ಕಡಿಮೆಯೇ ಎಂದು ಸಾಧ್ಯವಾದ ಕಡೆಯಲ್ಲೆಲ್ಲ ಹೇಳಿಕೊಂಡೇ ಬಂದಿದ್ದಾರೆ.
ಅಕಾಡೆಮಿ ಮತ್ತು ಪುಸ್ತಕ
ಇಂಥ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹದಿನಾರನೇ ಆವೃತ್ತಿಯ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಕನ್ನಡ ಸಿನಿಮಾದ ವಿವಿಧ ಆಯಾಮಗಳನ್ನು ಕುರಿತು 5 ಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ. ಉಗಾದಿಯ ಸಂದರ್ಭಕ್ಕಾಗಿ ಪ್ರಕಟಣಾ ಸಂಸ್ಥೆಯೊಂದು ಕನ್ನಡ ಚಿತ್ರರಂಗದ ಇತಿಹಾಸ, ವೈಶಿಷ್ಟ್ಯ , ನೆನಪು , ದಾಖಲೆ ಮತ್ತು ಹೆಗ್ಗಳಿಕೆ ಕುರಿತಾದ ಪುಸ್ತಕವೊಂದನ್ನು ಬಿಡುಗಡೆ ಮಾಡಿರುವುದು ಸ್ವಾಗತಾರ್ಹ ಸಂಗತಿ.
ಕನ್ನಡ ಚಿತ್ರರಂಗ ಕುರಿತು 500 ಕ್ಕೂ ಹೆಚ್ಚು ಪುಸ್ತಕ
ಕನ್ನಡದಲ್ಲಿ ಸಾಹಿತ್ಯಾಧಾರಿತ ಸಿನಿಮಾಗಳು ಹೆಚ್ಚು ನಿರ್ಮಾಣವಾದಂತೆ, ಸಿನಿಮಾ ಕುರಿತು ಅತೀ ಹೆಚ್ಚು ಸಾಹಿತ್ಯವನ್ನು ಬರೆಯಲಾಗಿದೆ. ಹಾಗೆ ನೋಡಿದರೆ ಬೇರೆ ಯಾವ ಭಾಷೆಯ ಚಿತ್ರರಂಗದಲ್ಲೂ, ಆಯಾ ಚಿತ್ರರಂಗಗಳ ಕುರಿತಾಗಿ ಅಷ್ಟೊಂದು ಸಂಖ್ಯೆಯ ಪುಸ್ತಕಗಳು ಇಷ್ಟು ದೊಡ್ಡ ಮಟ್ಟದಲ್ಲಿ ಬಂದಿರುವ ನಿದರ್ಶನವಿಲ್ಲ. ಕನ್ನಡದಲ್ಲಿ ಇದುವರೆಗೆ 500ಕ್ಕೂ ಹೆಚ್ಚು ಸಿನಿಮಾ ಕುರಿತಾದ ಪುಸ್ತಕಗಳು ಬಂದಿವೆ. ಕನ್ನಡ ಸಿನಿಮಾ ಪತ್ರಕರ್ತ ಮತ್ತು ಲೇಖಕ ಚೇತನ್ ನಾಡಿಗೇರ್ ಅವರ ಪ್ರಕಾರ “ಈ ಪೈಕಿ ಒಂದು ದಾಖಲೆಯೆಂದರೆ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರರಂಗದ 75 ಸಾಧಕರ ಕುರಿತು 75 ಪುಸ್ತಕಗಳನ್ನು ಬಿಡುಗಡೆ ಮಾಡಿರುವುದು”. ವಾಣಿಜ್ಯ ಮಂಡಳಿಯಂತೆಯೇ ಸುಂದರ ಪ್ರಕಾಶನದ ಗೌರಿ ಸುಂದರ್ ಅವರು ಕನ್ನಡ ಚಲನಚಿತ್ರ-75-ಅಮೃತ ಮಹೋತ್ಸವ ಮಾಲಿಕೆಯಲ್ಲಿ ಹಲವು ಪುಸ್ತಕಗಳನ್ನು ತಂದಿದ್ದಾರೆ.
ಕನ್ನಡ ಸಿನಿಮಾ ಇತಿಹಾಸದ ʻಪರಿಷ್ಕರಣʼ
ಇದಲ್ಲದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಹಂಪಿ ವಿಶ್ವವಿದ್ಯಾಲಯದ ಜೊತೆಗೂಡಿ ʻಕನ್ನಡ ಚಲನಚಿತ್ರ ಇತಿಹಾಸʼ ಎಂಬ ಎರಡು ಸಂಪುಟಗಳ, ಕನ್ನಡ ಚಿತ್ರರಂಗವು ಮೂಕಿ ಯುಗದಿಂದ ಟಾಕಿಯ ಇತ್ತೀಚಿನ ಕಾಲದವರೆಗಿನ ವಿವರಿಸುವ ಬೃಹತ್ ಇತಿಹಾಸ ಪುಸ್ತಕವನ್ನು ಹೊರತಂದಿದೆ. ಈ ಎರಡೂ ಪುಸ್ತಕಗಳ ಮಾರಾಟ ಕಾಲಾಂತರದಲ್ಲಿ, ಕಾರಣಾಂತರಗಳಿಂದ ಮಾರಾಟಗೊಂಡಿರಲಿಲ್ಲ. ಆ ನಂತರ ಸಿನಿಮಾ ನಿರ್ದೇಶಕ ಮತ್ತು ಕನ್ನಡದ ಮಹತ್ವದ ಲೇಖಕ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ಈ ಇತಿಹಾಸ ಪುಸ್ತಕವನ್ನು ಪರಿಷ್ಕರಿಸಿ ಬಿಡುಗಡೆ ಮಾಡಿದ್ದು ಕೂಡ ಒಂದು ಇತಿಹಾಸ.
ಹೊಸ ಶತಮಾನದ ʻಚಂದನವನʼ
ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾದ ನಂತರ ಹೊಸ ಶತಮಾನದ ಮೊದಲ ಹತ್ತು ವರ್ಷಗಳ ಇತಿಹಾಸವನ್ನು ʻಚಂದನವನʼ ಎಂಬ ಪುಸ್ತಕದಲ್ಲಿ ದಾಖಲಿಸಲಾಯಿತು. ಈ ಇತಿಹಾಸ ಪುಸ್ತಕದ ಜೊತೆಗೆ ಅಕಾಡೆಮಿಯು ಅಬ್ದುಲ್ ರೆಹಮಾನ್ ಪಾಷಾ ಅವರು ಬರೆದ ʻಚಿತ್ರಕತೆ-ಚಿಂತನ-ಮಂಥನʼ, ಎನ್. ಎಸ್. ಶಂಕರ್ ಅವರು ಬರೆದ ʻಚಿತ್ರಕತೆ ಹಾಗೆಂದರೇನು?ʼ, ಶಶಿಧರ ಚಿತ್ರದುರ್ಗ ಅವರು ಬರೆದ ʻಚಿತ್ರಪಥʼ ಮುಂತಾದ ಪುಸ್ತಕಗಳನ್ನು ಪ್ರಕಟಿಸಿದೆ. ಈ ಬಾರಿಯ ಚಿತ್ರೋತ್ಸವದ ಸಂದರ್ಭದಲ್ಲಿ ಡಾ. ಸತೀಶ್ಚಂದ್ರ ಅವರ ʻಕನ್ನಡ ಸಿನಿಮಾ ಪೌರಾಣಿಕ ವೈಭವʼ, ಜೆ.ಎಂ. ಪ್ರಹ್ಲಾದ್ ಅವರು ಬರೆದ ʻಕನ್ನಡ ಸಿನಿಮಾದ ಐತಿಹಾಸಿಕ ನೆಲೆಗಳು, ಎನ್. ಎಸ್. ಶ್ರೀಧರಮೂರ್ತಿ ಅವರ ʻಸಿನಿಮಾ ನಾದ ವಿನ್ಯಾಸʼ ಮತ್ತು ಅ. ನಾ. ಪ್ರಹ್ಲಾದರಾವ್ ಅವರ ʻಕನ್ನಡ ಸಿನಿಮಾದ ಜಾನಪದ ಸಿರಿʼ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
ಕನ್ನಡ ಸಿನಿಮಾ ಪುಸ್ತಕಕ್ಕೆ ಸ್ವರ್ಣಕಮಲ
ಚಿತ್ರರಂಗದ ಕುರಿತಾದ ಪುಸ್ತಕವೊಂದಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರೆಂದರೆ ಕೆ. ಪುಟ್ಟಸ್ವಾಮಿ ಅವರ ʻಸಿನಿಮಾ ಯಾನ-ಕನ್ನಡ ಚಿತ್ರರಂಗ-75; ಒಂದು ಫ್ಲಾಷ್‌ಬ್ಯಾಕ್ʼ. ಈ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಸಿಕ್ಕಿದೆ. ಇದಲ್ಲದೆ ಕನ್ನಡದಲ್ಲಿ ಸಿನಿಮಾ ಕುರಿತಾದ ಹಲವಾರು ಪುಸ್ತಕಗಳು ಬಂದಿವೆ. ಬರಗೂರು ರಾಮಚಂದ್ರಪ್ಪನವರ ʻಸಿನಿಮಾ ಒಂದು ಜಾನಪಕ ಕಲೆʼ, ಬಿ. ಸುರೇಶ್ ಬರೆದಿರುವ ʻಬೆಳ್ಳಿ ಅಂಕʼ, ಅನಂತ್ ನಾಗ್ ತಮ್ಮ ಸೋದರನ ಕುರಿತು ಬರೆದ ʻನನ್ನ ತಮ್ಮ ಶಂಕರʼ, ಪುಟ್ಟಣ್ಣ ಕಣಗಾಲ್ ಕುರಿತು ಡಿ. ಬಸವೇಗೌಡರು ಬರೆದಿರುವ ʻಬೆಳ್ಳಿ ತೆರೆಯ ಭಾವ ಶಿಲ್ಪಿʼ, ಖ್ಯಾತ ವಿಮರ್ಶಕ, ರಾಷ್ಟ್ರಪ್ರಶಸ್ತಿ ವಿಜೇತ ಸಾಹಿತಿ ಮನು ಚಕ್ರವರ್ತಿ ಅವರು ಬರೆದಿರುವ ʻCulturing Realism; Reflections on Girish Kasaravallis Films . ಬಿ.ವಿ, ವೈಕುಂಠರಾಜು ಅವರು ಬರೆದ ʼಸಿನಿಮಾತು-೫೦ ವರ್ಷಗಳ ಕನ್ನಡ ಚಿತ್ರರಂಗ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರನ್ನು ಕುರಿತು ಉಮಾ ರಾವ್ ಬರೆದ ʻಬಿಸಿಲ ಕೋಲುʼ, ಜಯಂತ ಕಾಯ್ಕಿಣಿ ಅವರ ಬರೆದ ʻಟೂರಿಂಗ್ ಟಾಕೀಸ್ʼ, ತಮ್ಮ ಎಲ್ಲ ಚಿತ್ರಗಳನ್ನು ಕುರಿತು ಗಿರೀಶ್ ಕಾಸರವಳ್ಳಿ ಹಾಗೂ ಗೋಪಾಲಕೃಷ್ಣ ಪೈ ಜಂಟಿಯಾಗಿ ಬರೆದಿರುವು ʻಬಿಂಬ ಬಿಂಬನʼ, ಟಿ.ಎಸ್. ನಾಗಾಭರಣ ಕುರಿತು ಡಾ. ಎಸ್. ಕೆ. ಪದ್ಮನಾಭ ಅವರು ಬರೆದ ʻಅನನ್ಯ ಹಾದಿಯ ಹೆಜ್ಜೆಗಳು, ಪತ್ರಿಕೆಯೊಂದರಲ್ಲಿ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಬರೆದ ಅಂಕಣ ಮಾಲೆ ʻನೆನಪುಗಳ ಮುತ್ತಿನ ಹಾರʼ ಮುಂತಾದ ಕೃತಿಗಳು ಬಂದಿವೆ.
ಚಿತ್ರವೊಂದು ರೂಪಗೊಂಡ ಬಗ್ಗೆ
ಚಿತ್ರರಂಗ ನಡೆದುಬಂದ ಹಾದಿ, ಜೀವನ ಚರಿತ್ರೆ, ಚಿತ್ರ ವಿಶ್ಲೇಷಣೆಗಳು ಒಂದು ಕಡೆಯಾದರೆ, ಒಂದು ಚಿತ್ರ ರೂಪಗೊಂಡಿದ್ದು ಹೇಗೆ ಎನ್ನುವುದರ ಜೊತೆಗೆ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಕುರಿತಾದ ಕೆಲವು ಪುಸ್ತಕಗಳೂ ಪ್ರಕಟಗೊಂಡಿವೆ. ʻಮಠʼ, ʻಎದ್ದೇಳು ಮಂಜುನಾಥʼ, ಪುಸ್ತಕಗಳನ್ನು ಇತ್ತೀಚೆಗೆ ಅಗಲಿದ ಗುರುಪ್ರಸಾದ್ ಹೊರತಂದಿದ್ದರು. ʻಮುಂಗಾರು ಮಳೆʼ ರೂಪುಗೊಂಡ ಬಗ್ಗೆ ನಿರ್ದೇಶಕ ಯೋಗರಾಜ ಭಟ್ ವಾರ ಪತ್ರಿಕೆಯೊಂದರಲ್ಲಿ ಬರೆದ ಲೇಖನಗಳ ಮಾಲಿಕೆ ʻಹಾಗೆ ಸುಮ್ಮನೆʼ ಹೆಸರಿನಲ್ಲಿ ಪ್ರಕಟವಾಗಿದೆ. ಇದೇ ರೀತಿ, ನಾಗತೀಹಳ್ಳಿ ಚಂದ್ರಶೇಖರ ಅವರು ತಮ್ಮ ಚಿತ್ರಗಳಾದ ʻಅಮೇರಿಕಾ, ಅಮೇರಿಕಾʼ, ʻʻಅಮೃತಧಾರೆʼ, ʻʻಕೊಟ್ರೇಶಿ ಕನಸುʼ ನಿರ್ಮಿಸಿದ ಬಗೆಯನ್ನು ಕುರಿತು ಪುಸ್ತಕಗಳನ್ನು ಹೊರತಂದಿದ್ದಾರೆ.
ಹಾಗೆ ನೋಡಿದರೆ ಕನ್ನಡ ಚಿತ್ರರಂಗ ನಡೆದು ಬಂದ ದಾರಿಯನ್ನು ಕುರಿತು ಪುಸ್ತಕಗಳನ್ನು ಬರೆದವರು ಪತ್ರಕರ್ತರೇ. ಕೇವಲ ಕನ್ನಡದಲ್ಲಷ್ಟೇ ಅಲ್ಲ. ಇಂಗ್ಲಿಷ್‌ನಲ್ಲಿಯೂ ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಆದರೆ ಸಿನಿಮಾಗಳನ್ನು ಕುರಿತು ಇಂಗ್ಲಿಷ್ ನಲ್ಲಿ ಪುಸ್ತಕಗಳು ಪ್ರಕಟವಾಗುವುದು ಅಂಥ ಹೇಳಿಕೊಳ್ಳುವಂಥ ಬೆಳವಣಿಗೆ ಏನಲ್ಲ. ಇಂಗ್ಲಿಷ್ ನಲ್ಲಿ ದಿನಕ್ಕೊಂದು ಪುಸ್ತಕ ಯಾರ ಗಮನಕ್ಕೂ ಬಾರದೆ ಪ್ರಕಟವಾಗುತ್ತಲೇ ಇರುತ್ತವೆ.
ಡಾ ರಾಜ್ ಕುರಿತು ೨೦೦ ಕ್ಕೂ ಹೆಚ್ಚು ಪುಸ್ತಕ
ಆದರೆ ಇಲ್ಲಿ ಮಹತ್ವದ ಸಂಗತಿಯೊಂದನ್ನು ದಾಖಲಿಸಲೇ ಬೇಕು. ಕನ್ನಡ ಚಿತ್ರರತ್ನಗಳ ಪೈಕಿ ಅತಿಹೆಚ್ಚು ಪುಸ್ತಕಗಳು ಪ್ರಕಟವಾಗಿರುವುದು ಕನ್ನಡದ ವರನಟ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ ರಾಜ್ ಕುಮಾರ್ ಅವರನ್ನು ಕುರಿತು. ಡಾ ರಾಜ್ ಕುಮಾರ್ ಅವರನ್ನು ಕುರಿತು ಒಂದು ಲೆಕ್ಕದ ಪ್ರಕಾರ 200 ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ರಾಜ್ ಕುಮಾರ್ ಅವರನ್ನು ಕುರಿತು ಅವರ ಮಗ ನಮ್ಮ ನಡುವಿನ ಅಪ್ಪು ರಚಿಸಿದ್ದ ʻDrRajkumar: Person Behind the Personality ಎಂಬ ಪುಸ್ತಕ ಬಿಡುಗಡೆಯಾಗಿದೆ. ಈ ಎಲ್ಲ ಪುಸ್ತಕಗಳಿಗೆ ಮುಕುಟವಿಟ್ಟಂತೆ ಪ್ರಕಟವಾಗಿರುವುದು ಡಾ. ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದ ಡಾ ರಾಜ್ ಕುಮಾರ್ ಸಮಗ್ರ ಚರಿತ್ರೆʼ ಎಂಬ ಎರಡು ಸಂಪುಟಗಳ ಪುಸ್ತಕ. ಇದು ಡಾ ರಾಜ್ ಕುಮಾರ್ ಅವರ ಜನನದಿಂದ ಮರಣದವರೆಗಿನ ಎಲ್ಲ ಸಂಗತಿಗಳ ಅಪೂರ್ವ ದಾಖಲೆ. ಇದಲ್ಲದೆ ರಾಜ್ ಕುಮಾರ್ ಬಗ್ಗೆ ಬಂದಿರುವ ಪುಸ್ತಕಗಳ ಬಗ್ಗೆ ಈಗಾಗಲೇ ಪ್ರಸ್ತಾಪವಾಗಿದೆ.
ಹೀಗೆ 91 ಹರೆಯದ ಕನ್ನಡ ಚಿತ್ರರಂಗ ನಡೆದ ಬಂದ ದಾರಿಯನ್ನು ದಾಖಲಿಸುವ ನೂರಾರು ಪುಸ್ತಕಗಳು ಇದುವರೆಗೆ ಪ್ರಕಟವಾಗಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ, ಕರ್ನಾಟಕ ಚಲನಚಿತ್ರ ಅಕಾಡೆಮಿಗಳು ಕೂಡ ಪುಸ್ತಕಗಳನ್ನು ಪ್ರಕಟಿಸಿವೆ. ಆದರೆ, ಆ ಪುಸ್ತಕಗಳ ವ್ಯವಸ್ಥಿತ ಮಾರುಕಟ್ಟೆ ಮತ್ತು ಸುಸಜ್ಜಿತವಾದ ಗ್ರಂಥಾಲಯದ ಕೊರೆತೆಯಿಂದಾಗಿ ಅವುಗಳು ಕನ್ನಡ ಚಿತ್ರರಂಗದ ಬಗ್ಗೆ ಅಧ್ಯಯನ ಮಾಡುವ ಮಂದಿಗೆ ದಕ್ಕದೆ ಪುಸ್ತಕದಂಗಡಿಗಳಲ್ಲಿ, ಅಕಾಡೆಮಿ ಮತ್ತು ವಾಣಿಜ್ಯ ಮಂಡಳಿಯ ಗೋದಾಮುಗಳಲ್ಲಿ ಧೂಳು ಹಿಡಿಯುತ್ತಿರುವುದು ಕರಳು ಕಿವುಚುವಂಥ ಸಂಗತಿ.
(ಮುಕ್ತಾಯ)