Police Transfer| ಯಡಿಯೂರಪ್ಪ, ಪ್ರಜ್ವಲ್ ಸೇರಿದಂತೆ ಪ್ರಮಖ ಪ್ರಕರಣ ತನಿಖಾ ಉಸ್ತುವಾರಿಗಳ ವರ್ಗಾವಣೆ!

ಅಲ್ಲದೇ ಪ್ರಜ್ವಲ್ ರೇವಣ್ಣ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಆದರೆ, ಹೆಚ್ಚುವರಿಯಾಗಿ ಆ ಪ್ರಕರಣಗಳಲ್ಲಿ ಉಸ್ತುವಾರಿ ವಹಿಸಿದ್ದ ಆ ಆಧಿಕಾರಿಗಳು ಇನ್ನೂ ಆ ಪ್ರಕರಣಗಳ ತನಿಖೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಜತೆಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯ ಅವಳಿ ಕೊಲೆ ಪ್ರಕರಣಗಳು, ಹಾಗೂ ದಾವಣಗೆರೆಯ ಲಾಕಪ್‌ ಡೆತ್‌ ಹಾಗೂ ದೊಂಬಿ ಪ್ರಕರಣಗಳಿಂದ ಮುಜುಗರ ಅನುಭವಿಸಿದ್ದ ಸರ್ಕಾರ ಅಲ್ಲಿನ ಹಿರಿಯ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ.;

Update: 2024-07-03 09:08 GMT
ಸಾಂದರ್ಭಿಕ ಚಿತ್ರ

ರಾಜ್ಯ ಸರ್ಕಾರವು ರಾತ್ರೋರಾತ್ರಿ 25 ಐಪಿಎಸ್ ಅಧಿಕಾರಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದು, ಕೂಡಲೇ ವರ್ಗಾವಣೆಯಾಗಿರುವ ಜಾಗಕ್ಕೆ ವರದಿ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದೆ. ಆದರೆ, ಸರ್ಕಾರದ ವರ್ಗಾವಣೆಯ ಆದೇಶದಲ್ಲಿ ಹಲವು ಅಚ್ಚರಿಯ ಹೆಸರುಗಳು ಇವೆ. 

ಅಲ್ಲದೇ ಪ್ರಜ್ವಲ್ ರೇವಣ್ಣ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಆದರೆ, ಹೆಚ್ಚುವರಿಯಾಗಿ ಆ ಪ್ರಕರಣಗಳಲ್ಲಿ ಉಸ್ತುವಾರಿ ವಹಿಸಿದ್ದ ಆ ಆಧಿಕಾರಿಗಳು ಇನ್ನೂ ಆ ಪ್ರಕರಣಗಳ ತನಿಖೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಜತೆಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯ ಅವಳಿ ಕೊಲೆ ಪ್ರಕರಣಗಳು, ಹಾಗೂ ದಾವಣಗೆರೆಯ ಲಾಕಪ್‌ ಡೆತ್‌ ಹಾಗೂ ದೊಂಬಿ ಪ್ರಕರಣಗಳಿಂದ ಮುಜುಗರ ಅನುಭವಿಸಿದ್ದ ಸರ್ಕಾರ ಅಲ್ಲಿನ ಹಿರಿಯ ಅಧಿಕಾರಿಗಳನ್ನೂ ವರ್ಗಾಯಿಸಿ ಆದೇಶ ನೀಡಿದೆ.

ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿದ್ದವರ ವರ್ಗಾವಣೆ

ಬಿ.ಎಸ್ ಯಡಿಯೂರಪ್ಪ ತನಿಖಾ ಉಸ್ತುವಾರಿ ವರ್ಗಾವಣೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿ ಎಸ್‌ಪಿ ಸಾರಾ ಫಾತಿಮಾ ಹಾಗೂ ಡಿವೈಎಸ್ಪಿ ಪುನೀತ್‌ ತಂಡವು ವಿಚಾರಣೆ ನಡೆಸುತ್ತಿತ್ತು. ಅಪರಾಧ ತನಿಖಾ ವಿಭಾಗದಲ್ಲಿದ್ದ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಪಿ ಸಾರಾ ಫಾತಿಮಾ ಅವರನ್ನು ಇದೀಗ ಬೆಂಗಳೂರಿನ ಈಶಾನ್ಯ ವಿಭಾಗ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಯಡಿಯೂರಪ್ಪ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದು, ತನಿಖೆಗೆ ಫಾತಿಮಾ ಅವರು ಸಹಕರಿಸಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ಉಸ್ತುವಾರಿ  ವರ್ಗಾವಣೆ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನೂ ಸಹ ಸರ್ಕಾರ ವರ್ಗಾವಣೆ ಮಾಡಿದೆ.  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಡಿಜಿಪಿ ಕಚೇರಿಯ ಆಡಳಿತ ವಿಭಾಗದ ಎಐಜಿ (ಅಸಿಸ್ಟೆಂಟ್‌ ಇನ್ಸ್‌ಪೆಕ್ಟರ್‌ ಜನರಲ್‌) ಡಾ. ಸುಮನ್‌  ಪನೇಕರ್  ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸುಮನ್ ಅವರು, ಪ್ರಜ್ವಲ್ ಪ್ರಕರಣವನ್ನು ತನಿಖೆ ನಡೆಸುತ್ತಿದ್ದರು ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್‌ನನ್ನು ಬಂಧಿಸಿ, ಕರೆತಂದಿದ್ದ ಮಹಿಳಾ ಪೊಲೀಸ್ ತಂಡದಲ್ಲಿದ್ದರು. ಇದೀಗ ಸುಮನ್ ಅವರನ್ನು ಬಿಎಂಟಿಎಫ್ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಪ್ರಜ್ವಲ್‌ ಪ್ರಕರಣದಲ್ಲಿ ಜೆಡಿಎಸ್‌ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಅಲ್ಲದೇ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ ರೇವಣ್ಣ ಅವರನ್ನು ಸಹ ಬಂಧಿಸಲಾಗಿತ್ತು.  ಪನೇಕರ್‌ ಅವರೂ, ಎಸ್‌ಐಟಿ ತನಿಖೆಯಲ್ಲಿ ಮುಂದೆಯೂ ಭಾಗಿಯಾಗಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಹುಬ್ಬಳ್ಳಿ – ಧಾರವಾಡಕ್ಕೆ  ಶಶಿಕುಮಾರ್‌

ಕಳೆದ ಕೆಲವು ತಿಂಗಳುಗಳಿಂದ ಹುಬ್ಬಳ್ಳಿ – ಧಾರವಾಡದಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಎನ್ನುವ ಯುವತಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಲ್ಲದೇ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಹಲವು ಲೋಪಗಳು ಸಹ ಕೇಳಿ ಬಂದಿದ್ದವು. ಹೀಗಾಗಿ, ಹುಬ್ಬಳ್ಳಿ - ಧಾರವಾಡದ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ಬದಲಾವಣೆ ಮಾಡಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. ಇದೀಗ ಹುಬ್ಬಳ್ಳಿ- ಧಾರವಾಡ ನಗರ ಪೊಲೀಸ್ ಆಯುಕ್ತರನ್ನಾಗಿ ಶಶಿ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ  ಈ ಹಿಂದೆ ಅವರು ಬೆಂಗಳೂರು ನಗರದ ಉತ್ತರ ವಿಭಾಗದ ಡಿಸಿಪಿಯಾಗಿದ್ದರು.  

ದಾವಣಗೆರೆಯ ಡಿಐಜಿಯಾಗಿ ರಮೇಶ್

ಇನ್ನು ದಾವಣಗೆರೆಯಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ದಾವಣಗೆರೆಯ ಪೂರ್ವ ವಲಯದ ಡಿಐಜಿಯನ್ನಾಗಿ ರಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ವಶದಲ್ಲಿದ್ದ ಆದಿಲ್ ಎನ್ನುವ ಯುವಕ ಇದೇ ಮೇ 24 ರಂದು ಸಾವನ್ನಪ್ಪಿದ್ದ. ಇದರಿಂದ ರೊಚ್ಚಿಗೆದ್ದ ಅವರ ಕುಟುಂಬಸ್ಥರು, ಪೊಲೀಸರೇ ಹೊಡೆದು ಯುವಕನನ್ನು ಕೊಂದಿದ್ದರು ಎಂದು ಆರೋಪಿಸಿ, ಚನ್ನಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಚನ್ನಗಿರಿ ಪೊಲೀಸ್ ಠಾಣೆಯ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಎಸ್ಐಯನ್ನು ಅಮಾನತು ಮಾಡಲಾಗಿತ್ತು.

ಶಾಸಕ ಮುನಿರತ್ನ ಅಳಿಯ ವರ್ಗಾವಣೆ

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಅಳಿಯ ಎಸ್ಪಿ ಸಿ. ಬಿ. ರಿಷ್ಯಂತ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಸಿ.ಬಿ ರಿಷ್ಯಂತ್ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಾನದಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರನ್ನು ಬೆಂಗಳೂರಿನ ವೈರ್ ಲೆಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಶಾಸಕ ಮುನಿರತ್ನ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. 

ಯಾವ ವಿಭಾಗಗಳಲ್ಲಿ ವರ್ಗಾವಣೆ ?

ರಾಜ್ಯ ಸರ್ಕಾರವು 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಇದರಲ್ಲಿ ಕಾನೂನು ಸುವ್ಯವಸ್ಥೆ, ಪೊಲೀಸ್ ಇಲಾಖೆಯ ಆಂತರಿಕ ಹಾಗೂ ಬಾಹ್ಯ ಆಡಳಿತದ ವಿವಿಧ ಹುದ್ದೆಗಳಿಗೆ ವರ್ಗಾವಣೆ ನಡೆದಿದೆ.

ರಾಜ್ಯದಲ್ಲಿ ವರ್ಗಾವಣೆಯಾಗಿರುವ ಐಪಿಎಸ್ ಅಧಿಕಾರಿಗಳ ವಿವರ

ಲಾಭೂರಾಮ್: ಐಜಿಪಿ - ಕೇಂದ್ರ ವಲಯ

ರವಿಕಾಂತೇಗೌಡ: ಐಜಿಪಿ- ಹೆಡ್ ಕ್ವಾಟರ್ಸ್ -1

ತ್ಯಾಗರಾಜ್: ಐಜಿಪಿ- ಐಎಸ್ ಡಿ

ಶಶಿಕುಮಾರ್: ಕಮಿಷನರ್ - ಹುಬ್ಬಳ್ಳಿ ಧಾರವಾಢ

ರಮೇಶ್: ಡಿಐಜಿ-ಪೂರ್ವ ವಲಯ-ದಾವಣಗೆರೆ

ಸೀಮಾ ಲಾಟ್ಕರ್: ಕಮಿಷನರ್ - ಮೈಸೂರು ನಗರ

ರೇಣುಕಾ ಕೆ.ಸುಕುಮಾರ್: ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರು

ಸಿ.ಕೆ.ಬಾಬಾ: ಎಸ್ಪಿ - ಬೆಂಗಳೂರು ಗ್ರಾಮಾಂತರ

ವಿಷ್ಣುವರ್ಧನಾ: ಎಸ್ಪಿ - ಮೈಸೂರು ಜಿಲ್ಲೆ

ರಿಷ್ಯಂತ್: ಎಸ್ಪಿ- ವೈರ್ ಲೆಸ್ - ಬೆಂಗಳೂರು

ಚನ್ನಬಸವನ್ನ ಲಾಂಗಾಟಿ: ಎಐಜಿಪಿ-ಆಡಳಿತ-ಪ್ರಧಾನ ಕಚೇರಿ

ನಾರಾಯಣ್: ಎಸ್ಪಿ-ಉತ್ತರ ಕನ್ನಡ ಜಿಲ್ಲೆ

ಸಾರಾ ಫಾತೀಮಾ: ಡಿಸಿಪಿ -ಈಶಾನ್ಯ ವಿಭಾಗ

ನಾಗೇಶ್ ಡಿ.ಎಲ್: ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿ

ಪ್ರದೀಪ್ ಗುಟ್ಟಿ: ಎಸ್ಪಿ-ಬೀದರ್ ಜಿಲ್ಲೆ

ಯತೀಶ್ ಎನ್: ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ್ ಬಾಲದಂಡಿ: ಎಸ್ಪಿ ಮಂಡ್ಯ ಜಿಲ್ಲೆ

ಶೋಭಾ ರಾಣಿ: ಎಸ್ಪಿ -ಬಳ್ಳಾರಿ ಜಿಲ್ಲೆ

ಕವಿತಾ ಬಿ.ಟಿ: ಎಸ್ಪಿ-ಚಾಮರಾಜನಗರ ಜಿಲ್ಲೆ

ನಿಖಿಲ್ .ಬಿ: ಎಸ್ಪಿ - ಕೋಲಾರ ಜಿಲ್ಲೆ

ಕುಶಾಲ್ ಚುಕ್ಸಿಯಾ: ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆ

ಮಹಾನಿಂಗ ನಂದಾಗಾನ್ವಿ: ಡಿಸಿಪಿ-ಹುಬ್ಬಳ್ಳಿ-ಧಾರವಾಡ

ಪದ್ಮಿನಿ ಸಾಹಾ: ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರು

ಅರುಣಾಂಗ್ಷು ಗಿರಿ: ಎಸ್ಪಿ-ಸಿಐಡಿ-ಬೆಂಗಳೂರು

ಸುಮನ್ ಪನೇಕರ್ ಡಿ: ಎಸ್ಪಿ -ಬಿಎಂಟಿಎಫ್ -ಬೆಂಗಳೂರು 

Tags:    

Similar News