PDO Transfer | ಪಿಡಿಒ ವರ್ಗಾವಣೆಗೆ ಕೌನ್ಸೆಲಿಂಗ್ ಬೇಡ: ಶಾಸಕರ ತೀವ್ರ ವಿರೋಧ

ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಶಾಸಕರ ಶಿಫಾರಸು ನಿರರ್ಥಕವಾಗುತ್ತದೆ. ಅಲ್ಲದೆ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಹಿಡಿತ ಕಡಿಮೆಯಾಗುತ್ತದೆ ಎಂದು ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.;

Update: 2025-03-13 06:04 GMT

ವಿಧಾನಸಭೆ

ಕೌನ್ಸೆಲಿಂಗ್ ಮೂಲಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಶಾಸಕರ ಪ್ರಬಲ ವಿರೋಧ ವ್ಯಕ್ತವಾಗಿದೆ. 

ಬುಧವಾರ ವಿಧಾನಸಭೆಯಲ್ಲಿ ಈ ಕುರಿತ ಚರ್ಚೆಯ ವೇಳೆ ಬಹುತೇಕ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸರ್ಕಾರದ ನಿರ್ಧಾರದ ವಿರುದ್ಧ ದನಿ ಎತ್ತಿದರು. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಶಾಸಕರ ಶಿಫಾರಸು ನಿರರ್ಥಕವಾಗುತ್ತದೆ. ಅಲ್ಲದೆ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಹಿಡಿತ ಕಡಿಮೆಯಾಗುತ್ತದೆ ಎಂಬುದು ಶಾಸಕರ ಈ ಒಕ್ಕೊರಲ ವಿರೋಧಕ್ಕೆ ಕಾರಣ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಡಾ. ಎಚ್.ಡಿ. ರಂಗನಾಥ್ ತಮ್ಮ ಕ್ಷೇತ್ರದಲ್ಲಿ ಪಿಡಿಒಗಳ ಕೊರತೆಯ ಬಗ್ಗೆ ಗಮನಸೆಳೆದರು. 'ಒಬ್ಬ ಪಿಡಿಒ ಎರಡು ಅಥವಾ ಮೂರು ಪಂಚಾಯಿತಿಗಳ ಪ್ರಭಾರ ವಹಿಸಿಕೊಂಡಿದ್ದಾರೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಿಂದಾಗಿ ಇಂತಹ ಸಮಸ್ಯೆಗಳು ಹೆಚ್ಚಾಗಲಿವೆ' ಎಂದು ಹೇಳಿದರು.

ಬಿಜೆಪಿಯ ಸುರೇಶ್ ಗೌಡ, ಹರೀಶ್ ಪೂಂಜ, ಸಿ.ಸಿ. ಪಾಟೀಲ, ಜೆಡಿಎಸ್‌ನ ಸಿ.ಬಿ. ಸುರೇಶ್ ಬಾಬು ಹಾಗೂ ಕಾಂಗ್ರೆಸ್‌ನ ಎಚ್.ಡಿ. ತಮ್ಮಯ್ಯ ಸೇರಿದಂತೆ ಹಲವು ಶಾಸಕರು ಇದಕ್ಕೆ ದನಿಗೂಡಿಸಿದರು. 

ಈ ಕುರಿತು ಸ್ಪಷ್ಟನೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, '300-400 ಪಿಡಿಒಗಳು ಹತ್ತು ವರ್ಷಕ್ಕೂ ಹೆಚ್ಚುಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 400-500 ಮಂದಿ ಎಂಟು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು, ಶೇ.70ರಷ್ಟು ಪಿಡಿಒಗಳು ಐದು ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಒಂದೇ ಸ್ಥಳದಲ್ಲಿ ಸೇವೆಯಲ್ಲಿದ್ದಾರೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಮಾತ್ರ ಈ ಸ್ಥಿತಿಗೆ ಬದಲಾವಣೆ ತರುವ ಸಾಧ್ಯತೆ ಇದೆ' ಎಂದು ವಿವರಿಸಿದರು.

ಪಿಡಿಒ ನೇಮಕಾತಿಗೆ ಕ್ರಮ

ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ತೊಂದರೆಗಳಿದ್ದರೆ ಅವನ್ನು ಸರಿಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ 868 ಪಿಡಿಓ ಹುದ್ದೆಗಳು ಖಾಲಿ ಇವೆ. 247 ಹುದ್ದೆಗಳ ಭರ್ತಿಗಾಗಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನೇಮಕಾತಿ ಆದೇಶ ಹೊರಡಿಸಲಾಗುವುದು. ಉಳಿದ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮೋದನೆಯೂ ಲಭಿಸಿದೆ. ಜೊತೆಗೆ, ಶಾಸಕರು ಹಾಗೂ ಸಚಿವರ ಬಳಿ ಕಾರ್ಯನಿರ್ವಹಿಸುತ್ತಿರುವ 88 ಪಿಡಿಒಗಳ ಸೇವೆಯನ್ನು ಇಲಾಖೆಗೆ ಹಿಂತಿರುಗಿಸಬೇಕು ಎಂದು ಸಚಿವರು ಮನವಿ ಮಾಡಿದರು.

Tags:    

Similar News