ತುರ್ತು ಪರಿಸ್ಥಿತಿಗೆ 50 ವರ್ಷ | ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ- ಸಿ.ಟಿ. ರವಿ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದವರನ್ನು ಗುರುತಿಸಿ ಅಭಿನಂದಿಸಿ ಅವರ ಅನುಭವ ದಾಖಲಿಸಲಾಗುವುದು. ಯುವ ಪೀಳಿಗೆ ಮತ್ತು ಬಂಧಿಗಳ ಜತೆ ಸಂವಾದ ಏರ್ಪಡಿಸಲಾಗುವುದು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.;

Update: 2025-06-19 12:29 GMT

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ

ತುರ್ತು ಪರಿಸ್ಥಿತಿ ವಿರುದ್ಧ ಆಯೋಜಿಸಿರುವ ಜನಜಾಗೃತಿ ಅಭಿಯಾನವನ್ನು ಜು. 24ರಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲ್‍ ಮುಂದೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಗುರುವಾರ(ಜೂ.19) ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,  ಜನಜಾಗೃತಿ ಸಭೆಯ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ ವಹಿಸಲಿದ್ದು ತುಘಲಕ್ ಪತ್ರಿಕೆಯ ಸಂಪಾದಕರಾಗಿದ್ದ ಎಸ್.ಗುರುಮೂರ್ತಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. 

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದವರನ್ನು ಗುರುತಿಸಿ ಅಭಿನಂದಿಸಿ ಅವರ ಅನುಭವ ದಾಖಲಿಸಲಾಗುವುದು. ಯುವ ಪೀಳಿಗೆ ಮತ್ತು ಮೀಸಾ ಬಂಧಿಗಳ ಜತೆ ಸಂವಾದ ಏರ್ಪಡಿಸಿ, ತುರ್ತು ಪರಿಸ್ಥಿತಿ ವಿರುದ್ಧ ಜಾಗೃತಿ ನಡಿಗೆ ನಡೆಯಲಿದೆ. ಬಂಧಿಗಳು ತಾವು ಇದ್ದ ಜೈಲಿಗೆ ಭೇಟಿ ಕೊಡಲಿದ್ದು ಸಾಂವಿಧಾನಿಕ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೂ.22ರಿಂದ 30ರವರೆಗೆ ಅಭಿಯಾನ

ಜೂನ್ 22ರಿಂದ 30ರವರೆಗೆ ಜನಜಾಗೃತಿ ಅಭಿಯಾನವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಹರದೀಪ್ ಸಿಂಗ್ ಪುರಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದರು.

ತುರ್ತು ಪರಿಸ್ಥಿತಿಗೆ 50 ವರ್ಷ

ಜೂನ್ 25ಕ್ಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳಾಗಲಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲಘಟ್ಟದಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದ್ದು, ಸಂವಿಧಾನವನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇಡಲಾಗಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು. ಮಾನವ ಹಕ್ಕುಗಳು ನಿರಂತರವಾಗಿ ದಮನವಾಗುತ್ತಿದ್ದವು. ಮಾಧ್ಯಮ ಸ್ವಾತಂತ್ರ್ಯ ಹರಣವಾಗಿತ್ತು ಎಂದು ವಿವರಿಸಿದ್ದಾರೆ. 

ಸಂವಿಧಾನಕ್ಕೆ ಮನಸೋ ಇಚ್ಛೆ ತಿದ್ದುಪಡಿ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನಕ್ಕೆ ಯಾವುದೇ ಚರ್ಚೆಗಳನ್ನು ನಡೆಸದೆ ಮನಸೋ ಇಚ್ಛೆ ತಿದ್ದುಪಡಿ ಮಾಡಿ, 21 ತಿಂಗಳ ಕಾಲ ಅತ್ಯಂತ ಕರಾಳವಾಗಿ ಮಾನವ ಹಕ್ಕುಗಳ ದಮನ ಮಾಡಲಾಯಿತು. ಪ್ರಧಾನಿ ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್ ಅಸಿಂಧುಗೊಳಿಸಿತ್ತು. ಆ ತೀರ್ಪನ್ನು ರದ್ದು ಮಾಡಲು ಬೇಕಾದ ತಿದ್ದುಪಡಿ ಮಾಡಿ ಸರ್ವಾಧಿಕಾರ ಹೇರಿದ್ದರು. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ಅಕ್ರಮಗಳನ್ನು ಮುಚ್ಚಿ ಹಾಕಲು, ಕುರ್ಚಿ ಉಳಿಸಿಕೊಳ್ಳಲು ಸಂವಿಧಾನದ ಮೇಲೆ ನಡೆಸಿದ ದೌರ್ಜನ್ಯ ಇದಾಗಿತ್ತು ಎಂದು ಆಕ್ಷೇಪಿಸಿದ್ದಾರೆ.

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳ ಬಳಿಕವೂ ಕಾಂಗ್ರೆಸ್ಸಿನಲ್ಲಿ ಆಂತರಿಕವಾಗಿ ಪ್ರಜಾಪ್ರಭುತ್ವ ಉಳಿದಿಲ್ಲ. ಕರ್ನಾಟಕದಲ್ಲೂ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಈ ಸರಕಾರವನ್ನು ಟೀಕಿಸಿದವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ದೂರಿದ್ದಾರೆ.

Tags:    

Similar News