ಕಾಲ್ತುಳಿತ ದುರಂತ: ತನಿಖೆ ಮೇಲ್ವಿಚಾರಣೆ ನಡೆಸಲು ಎನ್ಎಚ್ಆರ್ಸಿಗೆ ಆರ್. ಅಶೋಕ್ ಪತ್ರ
ಆರ್ಸಿಬಿ ವಿಜಯೋತ್ಸವಕ್ಕೆ ಬಂದವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದು, ಅವರ ಸುರಕ್ಷತೆ ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಆದ್ದರಿಂದ ಎನ್ಎಚ್ಆರ್ಸಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕೆಂದು ಆರ್. ಅಶೋಕ್ ಮನವಿ ಮಾಡಿದ್ದಾರೆ.;
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಯೋಗದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಘಟನೆ ಕುರಿತು ಪತ್ರ ಬರೆದಿರುವ ಅವರು, ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯಂದು (ಜೂ.4) ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಮೃತಪಟ್ಟಿದ್ದು, 75 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಜನರ ಸುರಕ್ಷತೆಯ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿ ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡುಬಂದಿದೆ ಎಂದು ದೂರಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35 ಸಾವಿರ ಜನರು ಆಸೀನವಾಗುವಷ್ಟು ಸಾಮರ್ಥ್ಯವಿದೆ. ಆದರೆ ಉಚಿತ ಪಾಸ್ ಹಾಗೂ ತಪ್ಪಾದ ಮಾಹಿತಿಗಳಿಂದಾಗಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಂದು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮದಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯ ಕೊರತೆ ಕೂಡ ಇತ್ತು. ಅಂಬ್ಯುಲೆನ್ಸ್, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ದುರಂತದಲ್ಲಿ ಆರ್ಸಿಬಿ, ಡಿಎನ್ಎ ಹಾಗೂ ಕೆಎಸ್ಸಿಎ ಪಾತ್ರವೂ ಇದೆ ಎಂದು ವಿವರಿಸಿದ್ದಾರೆ.
ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಹಾಗೂ ಅಧಿಕಾರಿಗಳು ಯಾವುದೇ ಸಿದ್ಧತೆ ಮಾಡಿಕೊಳ್ಳದಿರುವುದು ಕಂಡುಬಂದಿದೆ. ಕಾರ್ಯಕ್ರಮಕ್ಕೆ ಬಂದವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದು, ಅವರ ಸುರಕ್ಷತೆ ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಆದ್ದರಿಂದ ಈ ದುರಂತವನ್ನು ಸ್ವಯಂ ಪ್ರೇರಿತವಾಗಿ ದೂರಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಸರ್ಕಾರದ ಇಲಾಖೆಗಳು, ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳ ಜವಾಬ್ದಾರಿ ಹಾಗೂ ಪಾತ್ರದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ತನಿಖೆ ಮಾಡಬೇಕಿದೆ. ತಪ್ಪು ಯಾರದ್ದು ಎಂದು ಪತ್ತೆ ಮಾಡಿ, ಹೊಣೆಗಾರಿಕೆಯನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಲು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ನಿಯಮ ಹಾಗೂ ಮಾರ್ಗಸೂಚಿಯನ್ನು ನೀಡಬೇಕಿದೆ. ಈಗಾಗಲೇ ಸರ್ಕಾರದಿಂದ ತನಿಖೆ ನಡೆಯುತ್ತಿದ್ದರೂ ಆಯೋಗದಿಂದ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಬೇಕಿದೆ. ಆಗ ಮಾತ್ರ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
ಈ ದುರಂತವನ್ನು ಸರ್ಕಾರ ತಡೆಯಬಹುದಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶದಿಂದಾಗಿ ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದರ ಜೊತೆಗೆ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬಹುದು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.