Federal Reality Check | ಸರ್ಕಾರಿ ನಿವಾಸಗಳಲ್ಲೇ ಇಲ್ಲ ಸಿಸಿಟಿವಿ! ಹನಿಟ್ರ್ಯಾಪ್‌ ಪ್ರಕರಣ ನನೆಗುದಿಗೆ?

ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಸರ್ಕಾರಿ ನಿವಾಸಕ್ಕೆ ಮಾತ್ರವಲ್ಲ; ಜಯಮಹಲ್‌ನಲ್ಲಿರುವ ಸಚಿವ ಶಿವರಾಜ ತಂಗಡಗಿ ಹಾಗೂ ರಹೀಂ ಖಾನ್ ಅವರ ಸರ್ಕಾರಿ ಬಂಗಲೆಗಳಿಗೂ ಸಿಸಿಟಿವಿ ಕ್ಯಾಮೆರಾ ಭದ್ರತೆ ಇಲ್ಲ!;

Update: 2025-03-26 15:12 GMT
ಜಯಮಹಲ್ 1ನೇ ಮುಖ್ಯ ರಸ್ತೆಯ ಸಚಿವ ಕೆ.ಎನ್. ರಾಜಣ್ಣ ಸರ್ಕಾರಿ ಬಂಗಲೆ

ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಹನಿಟ್ರ್ಯಾಪ್ ಪ್ರಕರಣ ಬಹಿರಂಗವಾದ ನಂತರ ಸರ್ಕಾರದ ಒಂದೊಂದೇ ಲೋಪಗಳು ಹೊರಬರುತ್ತಿವೆ. ಅವುಗಳಲ್ಲೊಂದು ಮಂತ್ರಿಗಳ ಸರ್ಕಾರಿ ನಿವಾಸಗಳಿಗೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂಬ ಆಘಾತಕಾರಿ ಸಂಗತಿ.

ಹನಿಟ್ರ್ಯಾಪ್ ಪ್ರಕರಣದ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಹನಿಟ್ರ್ಯಾಪ್‌ ಗೆ ಬಂದವರು ಯಾರು ಎಂಬ ಬಗ್ಗೆ ನಿಖರ ಮಾಹಿತಿ ತಮ್ಮ ಬಳಿ ಇಲ್ಲ. ತಮ್ಮ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದಿದ್ದರೆ ಅವರನ್ನು ಪತ್ತೆಮಾಡಬಹುದಿತ್ತು. ಆದರೆ, ತಮ್ಮ ಅಧಿಕೃತ ನಿವಾಸಕ್ಕೆ ಸಿಸಿಟಿವಿ ಭದ್ರತೆ ಇಲ್ಲ ಎಂದಿದ್ದರು.

ಅವರ ಈ ಹೇಳಿಕೆ ಸಹಜವಾಗೇ ಸರ್ಕಾರದ ಸೂತ್ರಧಾರರಾದ ಸಚಿವರುಗಳ ಅಧಿಕೃತ ನಿವಾಸಗಳಾದ ಸರ್ಕಾರಿ ಬಂಗಲೆಗಳಿಗೇ ಸಿಸಿಟಿವಿಯಂತಹ ಕನಿಷ್ಟ ಭದ್ರತೆಯೂ ಇಲ್ಲವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಆ ಹಿನ್ನೆಲೆಯಲ್ಲಿ ʼದ ಫೆಡರಲ್‌ ಕರ್ನಾಟಕʼ ಬುಧವಾರ(ಮಾ.26) ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಸರ್ಕಾರಿ ನಿವಾಸಕ್ಕೆ ಮಾತ್ರವಲ್ಲಿ ಜಯಮಹಲ್ 1ನೇ ಮುಖ್ಯ ರಸ್ತೆಯಲ್ಲಿರುವ ಸಚಿವ ಶಿವರಾಜ ತಂಗಡಗಿ ಹಾಗೂ ರಹೀಂ ಖಾನ್ ಅವರ ಸರ್ಕಾರಿ ಬಂಗಲೆಗಳಿಗೂ ಸಿಸಿಟಿವಿ ಕ್ಯಾಮೆರಾ ಭದ್ರತೆ ಇಲ್ಲ. ಸರ್ಕಾರಿ ಬಂಗಲೆಗಳ ಕಂಪೌಂಡ್​ಗಳ ಮೇಲೆ ಹಾಗೂ ಬಂಗಲೆ ಎದುರಿನ ರಸ್ತೆಯಲ್ಲಿ ಒಂದೇ ಒಂದು ಸಿಸಿಟಿವಿ ಕ್ಯಾಮೆರಾ ಕಂಡು ಬರಲಿಲ್ಲ. ಬಂಗಲೆಯ ಕಂಪೌಂಡ್ ಒಳಗೂ ಇಲ್ಲ, ಭದ್ರತೆಗಾಗಿ ಕನಿಷ್ಟ ಕಂಪೌಂಡ್ ಹೊರಗೂ ಸಿಸಿಟಿವಿ ಕ್ಯಾಮರಾಗಳು ಕಂಡು ಬರಲಿಲ್ಲ.

ಭದ್ರತೆಗಾಗಿ ಇಂದು ಕನಿಷ್ಟ ಗೂಡಂಗಡಿಗಳಲ್ಲೂ ಸಿಸಿಟಿವಿ ಹಾಕಿಕೊಳ್ಳಲಾಗುತ್ತಿದೆ. ಚಿಕ್ಕಪುಟ್ಟ ಅಂಗಡಿ-ಮಂಗಟ್ಟುಗಳಲ್ಲೂ ಈಗ ಸಿಸಿಟಿವಿ ಕಡ್ಡಾಯವಾಗಿ ಹಾಕುವುದು ರೂಢಿಯಾಗಿದೆ. ಅಲ್ಲದೆ, ಪೊಲೀಸ್‌ ಮತ್ತು ಸರ್ಕಾರ ಕೂಡ ಪ್ರತಿ ಬೀದಿ, ಪ್ರತಿ ಗಲ್ಲಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳಡಿಸುವ ಮೂಲಕ ಸಾರ್ವಜನಿಕರಿಗೆ ಭದ್ರತೆ ಕಲ್ಪಿಸುತ್ತಿವೆ. ಅದಕ್ಕಾಗಿಯೇ ಪ್ರತಿ ವರ್ಷ ನೂರಾರು ಕೋಟಿ ರೂ. ಸಾರ್ವಜನಿಕ ತೆರಿಗೆ ಹಣ ವ್ಯಯಿಸಲಾಗುತ್ತಿದೆ. ಹಾಗಿರುವಾಗ, ಸರ್ಕಾರದ ಪ್ರಮುಖರಾದ ಸಚಿವರುಗಳ ಅಧಿಕೃತ ನಿವಾಸಗಳಿಗೆ ಕನಿಷ್ಟ ಒಂದು ಸಿಸಿಟಿವಿ ಅಳವಡಿಸುವ ಮಟ್ಟಿನ ಭದ್ರತೆಯನ್ನೂ ಕಲ್ಪಿಸಿಲ್ಲ ಎಂಬುದು ಗಂಭೀರ ಭದ್ರತಾ ಲೋಪವಲ್ಲವೇ? ಎಂಬುದು ಹಬ್ಬೇರಿಸುವಂತಹ ಪ್ರಶ್ನೆ.

ಯಾಕೆ ಸಿಸಿಟಿವಿ ಕ್ಯಾಮೆರಾಗಳಿಲ್ಲ?

ಸಾರ್ವಜನಿಕ ಕಚೇರಿ, ರಸ್ತೆಗಳಲ್ಲಿ ಕೂಡ ಅಡಿಗಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮತ್ತು ಖಾಸಗಿಯವರಿಗೂ ಸಿಸಿಟಿವಿ ಹಾಕಿಕೊಳ್ಳುವಂತೆ ಸಲಹೆ ಕೊಡುವ ಸರ್ಕಾರ, ತನ್ನ ಸಚಿವರಿಗೇ ಸೂಕ್ತ ಭದ್ರತೆ ನೀಡಲು ನಿರಾಸಕ್ತಿ ವಹಿಸಿದೆಯೇ? ಅಥವಾ ಸ್ವತಃ ಸಚಿವರುಗಳೇ ತಮ್ಮ ಅಧಿಕೃತ ನಿವಾಸಗಳಿಗೆ ಸಿಸಿಟಿವಿ ಹಾಕುವುದರಿಂದ ತಮ್ಮ ಖಾಸಗಿತನಕ್ಕೆ, ತಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಭದ್ರತೆಯನ್ನು ನಿರಾಕರಿಸಿದ್ದಾರೆಯೇ? ಎಂಬುದು ಪ್ರಶ್ನೆ.

ಆ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮಲ್ಲೇಶ್ವರದ ನಿವಾಸಿ ನಂಜುಂಡಸ್ವಾಮಿ ಎಂಬುವರು, "ಬರೀ ಮಂತ್ರಿಗಳ ಮನೆ ಎದುರು ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಸರ್ಕಾರಿ ಬಂಗಲೆಗೂ ಸಿಸಿ ಕ್ಯಾಮೆರಾ ಭದ್ರತೆ ಇಲ್ಲ ಎಂಬ ಮತ್ತೊಂದು ಅಚ್ಚರಿಯ ಸಂಗತಿಯನ್ನು ವಿವರಿಸಿದರು. ಅವರ ವ್ಯವಹಾರಗಳಿಗೆ ಸಿಸಿ ಕ್ಯಾಮರಾ ಅಡ್ಡವಾಗುತ್ತದೆ ಎಂಬ ಕಾರಣದಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿಲ್ಲ. ಪಾರದರ್ಶಕತೆಯ ಸಲುವಾಗಿ ಎಲ್ಲ ಮಂತ್ರಿಗಳ ಎಲ್ಲ ಸರ್ಕಾರಿ ನಿವಾಸಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲೇಬೇಕು" ಎಂದು ಅವರು ಒತ್ತಾಯಿಸಿದರು.

ಮಂತ್ರಿಗಳು ಆರೋಪ ಮುಕ್ತರಾಗಬಹುದು

ಇನ್ನು ಇದೇ ವಿಚಾರದ ಕುರಿತು ಮಾತನಾಡಿದ ಯುವ ನ್ಯಾಯವಾದಿ ಜಿಷ್ಣು ದಿವಾಕರನ್, "ಇತ್ತೀಚೆಗೆ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಭದ್ರತಾ ದೃಷ್ಟಿಯಿಂದ ಎಲ್ಲಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಯಾರಾದರೂ ಮಂತ್ರಿಗಳಿಗೆ ನಾನು 2 ಕೋಟಿ ರೂಪಾಯಿಗಳನ್ನು ಕೊಟ್ಟು ಬಂದಿದ್ದೇನೆ ಎಂದು ಆರೋಪಿಸಿದರೆ, ಅಥವಾ ಇನ್ಯಾವುದೇ ಆರೋಪ ಮಾಡಿದರೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿದ್ದರೆ ತನಿಖೆಗೆ ಸಹಾಯವಾಗುತ್ತದೆ. ಸಚಿವರ ಮೇಲೆ ಬಂದಿರುವ ಆರೋಪ ನಿಜವಾ? ಸುಳ್ಳಾ ಎಂಬುದನ್ನು ಸಾಬೀತುಮಾಡಬಹುದು. ತಮ್ಮ ಮೇಲೆ ಬರುವ ವೃಥಾ ಆರೋಪಗಳಿಂದ ಅವ್ರು ಮುಕ್ತವಾಗಬಹುದು. ಜೊತೆಗೆ ಈಗ ನ್ಯಾಯಾಲಯಗಳೂ ಕೂಡ ಸಿಸಿಟಿವಿ ಕ್ಯಾಮೆರಾ ಫೂಟೇಜ್​ ಅನ್ನು ಪ್ರಾಥಮಿಕ ಸಾಕ್ಷಿ ಅಂದರೆ ಪ್ರೈಮರಿ ಎವಿಡೆನ್ಸ್ ಎಂದು ಪರಿಗಣಿಸುತ್ತಿವೆ. ಆದರೂ ಕೂಡ ಯಾಕೇ ಮಂತ್ರಿಗಳ ನಿವಾಸಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ? ಎಂಬುದು ಸಂಶಯಕ್ಕೆ ಕಾರಣವಾಗುತ್ತದೆ" ಎಂದರು.

ನಮ್ಮ ವ್ಯಾಪ್ತಿಗೆ ಬರುವುದಿಲ್ಲ

ಇಷ್ಟೆಲ್ಲ ಇರುವಾಗ ಎಲ್ಲರಿಗಿಂತ ಹೆಚ್ಚು ಭದ್ರತೆಯ ಅಗತ್ಯವಿರುವ ಮಂತ್ರಿಗಳ ಸರ್ಕಾರಿ ನಿವಾಸಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಅಚ್ಚರಿಯ ವಿಷಯವಾಗಿದ್ದು, ಜೊತೆಗೆ ಹಲವು ಸಂಶಯಗಳಿಗೂ ಎಡೆ ಮಾಡಿಕೊಡುವಂತಿದೆ. ಉಳಿದೆಲ್ಲ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಆದೇಶ ಮಾಡುವ ಸರ್ಕಾರ, ಮಂತ್ರಿಗಳ ಸರ್ಕಾರಿ ನಿವಾಸಗಳಿಗೆ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆಸಕ್ತಿ ತೋರಿಲ್ಲ ಯಾಕೆ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. 

ಇದೇ ವಿಚಾರದ ಕುರಿತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಕ್ಷ್ಮಿ ಅವರನ್ನು ʼದ ಫೆಡರಲ್ ಕರ್ನಾಟಕʼ ಸಂಪರ್ಕಿಸಿದಾಗ, ಅವರು "ಸಚಿವರುಗಳ ಸರ್ಕಾರಿ ನಿವಾಸಗಳ ನಿರ್ವಹಣೆ DPAR ನೋಡಿ ಕೊಳ್ಳುತ್ತದೆ. ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕುರಿತು ಅವರನ್ನೇ ಕೇಳಿದರೆ ನಿಮಗೆ ಮಾಹಿತಿ ಸಿಗುತ್ತದೆ" ಎಂದರು. DPAR ಕಾರ್ಯದರ್ಶಿ ಅವರನ್ನು ಸಂಪರ್ಕಿಲು ಪ್ರಯತ್ನಿಸಿದರೂ, ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ದ ಫೆಡರಲ್ ಕರ್ನಾಟಕ ರಿಯಾಲಿಟಿ ಚೆಕ್​ ಕುರಿತ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...

Full View

Tags:    

Similar News