ಮೇಕೆದಾಟು ಯೋಜನೆ | ತಮಿಳುನಾಡು ಜತೆ ಚರ್ಚೆಗೆ ಸಿದ್ಧ: ಸಿಎಂ ಸಿದ್ದರಾಮಯ್ಯ

ತಮಿಳುನಾಡು ಸರ್ಕಾರೊಂದಿಗೆ ನಾವು ಚರ್ಚೆಗೆ ಸಿದ್ದರಿದ್ದೇವೆ. ಮೇಕೆದಾಟು ಯೋಜನೆಯಿಂದ ತಮಗೆ ಯಾವುದೇ ಸಮಸ್ಯೆಯಾಗದಿದ್ದರೂ ಅವರು(ತಮಿಳುನಾಡು) ಚರ್ಚೆಗೆ ಸಿದ್ಧರಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Update: 2024-07-30 07:47 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಜತೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆ ಆಗದಿದ್ದರೂ ಮಾತನಾಡಲು ಅವರು ತಯಾರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೆ ನಾವು ಜಲಾಶಯ ನಿರ್ಮಾಣ ಮಾಡಲು ಸಿದ್ದವಿದ್ದೇವೆ' ಎಂದು ಹೇಳಿದರು.

ಈ ಯೋಜನೆಯಿಂದಾಗಿ ನಮಗಿಂತ ತಮಿಳುನಾಡಿಗೆ ಹೆಚ್ಚು ಲಾಭವಾಗಲಿದೆ. ಇಷ್ಟಾದರೂ ರಾಜಕೀಯದ ಸಲುವಾಗಿ ಅವರು ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಲೇ ಇದ್ದಾರೆ. ಇದುವರೆಗೂ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ಅನುಮತಿ ನೀಡಿಲ್ಲ ಎಂದ ಅವರು, ಯೋಜನೆಗೆ ಅನುಮತಿ ಕೊಡಿಸುವಂತೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಮೇಕೆದಾಟು ಯೋಜನೆಯು 65 ಟಿಎಂಸಿ ನೀರು ಸಂಗ್ರಹಿಸಲು, ವಿದ್ಯುತ್ ಉತ್ಪಾದಿಸಲು ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ. ಸಂಗ್ರಹವಾದ ನೀರನ್ನು ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ಒದಗಿಸಲೂ ಬಳಸಬಹುದು ಎಂದು ಅವರು ತಿಳಿಸಿದರು. 

ಏನಿದು ಮೇಕೆದಾಟು ಯೋಜನೆ 

ಮೇಕೆದಾಟು ಯೋಜನೆ ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಬಹುಪಯೋಗಿ (ಕುಡಿಯುವ ನೀರು ಮತ್ತು ವಿದ್ಯುತ್) ಯೋಜನೆಯಾಗಿದೆ. ಇದು ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯವನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿದೆ. ಈ ಯೋಜನೆಗೆ ತಮಿಳುನಾಡು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದು, ಯೋಜನೆ ರೂಪುಗೊಂಡರೆ ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ನೆರೆಯ ಪ್ರದೇಶಗಳಿಗೆ (4.75 ಟಿಎಂಸಿ ಅಡಿ) ಕುಡಿಯುವ ನೀರನ್ನು ಖಾತರಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಗೆ ಅಂದಾಜು ವೆಚ್ಚ 9,000 ಕೋಟಿ ಆಗಬಹುದು ಎಂದು ಕರ್ನಾಟಕ ಹೇಳುತ್ತಿದೆ.

ಕಾವೇರಿ ನದಿ ಕಣಿವೆಯ ಮಹತ್ವಾಕಾಂಕ್ಷೆಯ ‘ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ’ ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ ಮತ್ತು ಎರಡು ಉಪವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡಿಸಿ ಸಿದ್ದರಾಮಯ್ಯ ಹೇಳಿದ್ದರು.

ಯೋಜನೆಯಡಿ ಮುಳುಗಡೆಯಾಗುವ ಪ್ರದೇಶ ಗುರುತಿಸಲು ಸಮೀಕ್ಷೆ ಮತ್ತು ಮರಗಳ ಎಣಿಕೆ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಉಳಿದ ಅಗತ್ಯ ಅನುಮತಿಗಳನ್ನು ಪಡೆದ ನಂತರ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags:    

Similar News