Namma Metro Fare Hike | ಮೆಟ್ರೋ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ: ಎಫ್ ಐಆರ್ ದಾಖಲು

ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಎಬಿವಿಪಿಯ ಕಾರ್ಯಕರ್ತರು ಶುಕ್ರವಾರ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದರು.;

Update: 2025-02-15 06:44 GMT
ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಖಂಡಿಸಿ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದ ಎಬಿವಿಪಿಯ 16 ಜನ ಕಾರ್ಯಕರ್ತರ ವಿರುದ್ಧ ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಎಬಿವಿಪಿಯ ಕಾರ್ಯಕರ್ತರು ಶುಕ್ರವಾರ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದರು. 

ಬಿಎಂಆರ್​ಸಿಎಲ್ 45% ರಿಂದ 50% ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ಆದರೆ ಆದರೆ, 100% ರಷ್ಟು ಏರಿಕೆಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರು, ಕನ್ನಡಪರ ಹೋರಾಟಗಾರರು,ಪ್ರಗತಿಪರ ಸಂಘಟನೆಗಳು ಮತ್ತು ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರು ಬಿಎಂಆರ್​ಸಿಎಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಪ್ರಯಾಣಿಕರು ಅಭಿಯಾನ ಶುರು ಮಾಡಿದ್ದು, ಇದರಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಯಾವ ಯಾವ ಸ್ಟೇಜ್​ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ ಎಂದು ಪರಿಶೀಲಿಸಿ ಕೂಡಲೇ ಕಡಿತಗೊಳಿಸುವಂತೆ ಬಿಎಂಆರ್​ಸಿಎಲ್​ಗೆ ಸೂಚನೆ ನೀಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ಬಿಎಂಆರ್​ಸಿಎಲ್ 90%, 100% ಏರಿಕೆಯಾಗಿದ್ದ ಸ್ಟೇಜ್ ಗಳಲ್ಲಿ ಮೆಟ್ರೋ ಪ್ರಯಾಣದರ ಇಳಿಕೆ ಮಾಡಲಾಗಿದೆ. ಮೊದಲ ಪರಿಷ್ಕರಣೆ ವೇಳೆ ಯಶವಂತಪುರ ಮೆಟ್ರೋ ದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ 25 ರಿಂದ 50 ಕ್ಕೆ ದರ ಏರಿಕೆ ಮಾಡಲಾಗಿತ್ತು, ಅಂದ್ರೆ 100% ನಷ್ಟು ಏರಿಕೆ ಕಂಡಿತ್ತು. ಈಗ ಮರು ಪರಿಷ್ಕರಣೆ ಬಳಿಕ 40 ರೂ.ಗೆ ಇಳಿಕೆಯಾಗಿದೆ ಎಂದು ಹೇಳಿದೆ. 

ಆದರೆ ವಾಸ್ತವವಾಗಿ ಈಗಲೂ ಹಲವು ಕಡೆ ದರ ಏರಿಕೆ ಶೇ.100ರಷ್ಟೇ ಮುಂದುವರಿದಿದೆ. ಹಲವು ನಿಲ್ದಾಣಗಳ ನಡುವಿನ ಅಸಹಜ ದರವನ್ನು ನಮ್ಮ ಮೆಟ್ರೊ ಸರಿಪಡಿಸಿಯೇ ಇಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ನಡುವೆ ಹಗಲು ದರೋಡೆಯ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಪೊಲೀಸ್ ಕೇಸ್ ಹಾಕಿ ಬೆದರಿಸುವ ಪ್ರಯತ್ನವನ್ನೂ ಬಿಎಂಆರ್ ಸಿಎಲ್ ನಡೆಸುತ್ತಿದೆ ಎಂಬ ಅರೋಪ ಕೂಡ ಕೇಳಿಬಂದಿದೆ.

ಬಿಎಂಆರ್‌ಸಿಎಲ್‌ ನ ಸರ್ವಾಧಿಕಾರಿ ಧೋರಣೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಪ್ರತಿಭಟನಾಕಾರರ ಮೇಲೆ ಎಫ್‌ಐಆರ್‌ ಹೂಡಿ ಬೆದರಿಸುವ ಪ್ರಯತ್ನ ನಡೆಸಿರುವ ಘಟನೆ ಕೂಡ ನಡೆದಿದೆ.

Tags:    

Similar News