ಆಂಧ್ರ ಮಾದರಿ ಸಹಾಯಧನಕ್ಕೆ ಶ್ರೀನಿವಾಸಪುರ ಮಾವು ಬೆಳೆಗಾರರ ಆಗ್ರಹ; ತಾಲೂಕು ಬಂದ್‌ ರಸ್ತೆ ತಡೆ

ಒಂದು ಟನ್‌ ಮಾವಿನ ಬೆಲೆ 3 ರಿಂದ 4 ಸಾವಿರ ರೂ. ಗೆ ಕುಸಿದಿದೆ. ತೋತಾಪುರಿ ಸೇರಿ ವಿವಿಧ ತಳಿಯ ಹಣ್ಣುಗಳನ್ನು ರಸ್ತೆಗೆ ಸುರಿದು ರೈತರು ಪ್ರತಿಭಟನೆ ನಡೆಸಿದ್ದು ಬಿಜೆಪಿ, ಜೆಡಿಎಸ್‌ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.;

Update: 2025-06-12 05:58 GMT

ರಸ್ತೆಗೆ ಮಾವು ಸುರಿದು ರೈತರು ಪ್ರತಿಭಟನೆ ನಡೆಸಿದರು.

ಬೇಸಿಗೆಯಲ್ಲಿ ಒಂದು ಕೆ.ಜಿ.ಗೆ  ೧೦೦ ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಮಾವಿನ ಹಣ್ಣಿನ ಬೆಲೆ ಕೇವಲ 3 ರೂಪಾಯಿಗೆ ಇಳಿದ ಹಿನ್ನೆಲೆಯಲ್ಲಿ ಕುಪಿತಗೊಂಡಿ ಮಾವು ಬೆಳೆಗಾರರು ಬುಧವಾರ ಶ್ರೀನಿವಾಸಪುರ ತಾಲೂಕು ಬಂದ್‌ ಮಾಡಿ ಪ್ರತಿಭಟಿಸಿದರು.

ತಮ್ಮ ತೋಟಗಳಲ್ಲಿ ಬೆಳೆದ ತೋತಾಪುರಿ ಸೇರಿ ವಿವಿಧ ತಳಿಯ ಹಣ್ಣುಗಳನ್ನು ರಸ್ತೆಗೆ ಸುರಿದು ಆಂಧ್ರಪ್ರದೇಶ ಮಾದರಿಯಲ್ಲಿ ಸರ್ಕಾರ ಸಹಾಯಧನ ನೀಡಬೇಕೆಂದು ಇದೇ ವೇಳೆ ಆಗ್ರಹಿಸಿದರು.

ಒಂದು ಟನ್ ಮಾವಿನ ಬೆಲೆ 3 ರಿಂದ 4 ಸಾವಿರ ರೂಪಾಯಿಗೆ ಕುಸಿದಿರುವುದರಿಂದ ರೈತರು ಆಕ್ರೋಶಗೊಂಡ ರೈತರು, ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು, ಬಿಜೆಪಿ, ಜೆಡಿಎಸ್‌ ಸೇರಿದಂತೆ ವಿವಿಧ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಬಂದ್‌ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಬಸ್ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಕೋಲಾರ, ಚಿಂತಾಮಣಿ, ಮತ್ತು ಮುಳಬಾಗಿಲಿಗೆ ತೆರಳಲು ಸಾರ್ವಜನಿಕರು ಪರದಾಡಿದರು.

ಸಹಾಯಧನಕ್ಕೆ ಆಗ್ರಹ ಮತ್ತು ಸರ್ಕಾರದ ಭರವಸೆ

"ನೆರೆಯ ಆಂಧ್ರಪ್ರದೇಶದಲ್ಲಿ ಮಾವು ಬೆಳೆಗಾರರಿಗೆ ಅಲ್ಲಿನ ರಾಜ್ಯ ಸರ್ಕಾರ 1 ಟನ್‌ಗೆ 4 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಹಾಯಧನ ನೀಡಬೇಕು" ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಆಗ್ರಹಿಸಿದರು. ಮಾವು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ರೈತರು ನಿರಂತರವಾಗಿ ಸಹಾಯಧನಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತಮ್ಮ ಅಹವಾಲು ಆಲಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಮುಂಭಾಗ ಮಾವಿನಕಾಯಿಗಳನ್ನು ರಾಶಿ ಹಾಕಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಅಲ್ಲದೆ, ಗುರುವಾರ (ಜೂನ್ 12) ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾವು ಬೆಳೆಗಾರರು ಮತ್ತು ಉಸ್ತುವಾರಿ ಸಚಿವರ ಸಭೆಯನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

Tags:    

Similar News