Civil Cases | ಸಿವಿಲ್‌ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ; ರಾಜಿ ಸಂಧಾನ ಕಡ್ಡಾಯ

ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ದಶಕಗಟ್ಟಲೇ ವಿಳಂಬಕ್ಕೆ ಮುಕ್ತಿ ನೀಡಲು ರಾಜ್ಯ ದಿಟ್ಟಹೆಜ್ಜೆಯನ್ನಟ್ಟಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆಗೆ ಸರ್ಕಾರ ಕ್ರಾಂತಿಕಾರಕ ತಿದ್ದುಪಡಿಯನ್ನು ಮಾಡಿದ್ದು ಈ ಐತಿಹಾಸಿಕ ತಿದ್ದುಪಡಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ಬರಲಿದೆ.;

Update: 2025-05-26 12:51 GMT

ಕಾನೂನು ಸಚಿವ ಹೆಚ್‌.ಕೆ.ಪಾಟೀಲ್‌.

ತ್ವರಿತ ನ್ಯಾಯದಾನಕ್ಕೆ ರಾಜ್ಯದ ಮಹತ್ವದ ಹೆಜ್ಜೆ: ಸಿವಿಲ್ ಪ್ರಕರಣಗಳಲ್ಲಿ ರಾಜಿ ಸಂಧಾನ ಕಡ್ಡಾಯಗೊಳಿಸಿ ಸಿಪಿಸಿಗೆ ತಿದ್ದುಪಡಿ 

ಸಿವಿಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ ಒದಗಿಸುವ ಮಹತ್ವದ ಉದ್ದೇಶದಿಂದ ರಾಜ್ಯ ಸರ್ಕಾರವು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಗೆ ಮಹತ್ವದ ತಿದ್ದುಪಡಿ ತಂದಿದೆ. ಇದರ ಅಡಿಯಲ್ಲಿ, ಸಿವಿಲ್ ಪ್ರಕರಣಗಳಲ್ಲಿ ರಾಜಿ ಸಂಧಾನ ಕಡ್ಡಾಯಗೊಳಿಸಲಾಗಿದ್ದು, ಪ್ರಕರಣ ದಾಖಲಾದ ದಿನವೇ ಅಂತಿಮ ತೀರ್ಪಿನ ದಿನಾಂಕವನ್ನು ನಿರ್ಣಯಿಸುವಂತಹ ಚರಿತ್ರಾರ್ಹ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರದ ಕಾನೂನಾದ ಸಿವಿಲ್ ಪ್ರಕ್ರಿಯಾ ಸಂಹಿತೆಗೆ (ಸಿಪಿಸಿ) ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಮಾಡಿದೆ. ಈ ತಿದ್ದುಪಡಿಗಳು ರಾಷ್ಟ್ರದ ಕಾನೂನಿನಲ್ಲಿ ರಾಜ್ಯವ್ಯಾಪಿ ಜಾರಿಯಲ್ಲಿರುತ್ತವೆ. ರಾಜ್ಯ ಶಾಸಕಾಂಗದಿಂದ ಅಂಗೀಕರಿಸಲ್ಪಟ್ಟ ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದ್ದು, ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಕ್ರಾಂತಿಕಾರಕ ಬದಲಾವಣೆ ಜಾರಿಗೆ ಬಂದಂತಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಸಿವಿಲ್ ನ್ಯಾಯಾಲಯಗಳಲ್ಲಿ ದಶಕಗಟ್ಟಲೇ ವಿಳಂಬವಾಗುತ್ತಿದ್ದ ಪ್ರಕರಣಗಳಿಗೆ ಈ ತಿದ್ದುಪಡಿ ಮುಕ್ತಿ ನೀಡಲಿದೆ ಎಂದು ಅವರು ಹೇಳಿದರು.

ರಾಜಿ ಸಂಧಾನ ಮತ್ತು ಕಾಲಮಿತಿ

ಹೊಸ ತಿದ್ದುಪಡಿಯ ಪ್ರಕಾರ, ಪ್ರತಿಯೊಂದು ಸಿವಿಲ್ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯವಾಗಿ ಪ್ರಯತ್ನಿಸಬೇಕು. ಈ ರಾಜಿ ಸಂಧಾನದ ಪ್ರಯತ್ನವು ಎರಡು ತಿಂಗಳೊಳಗಾಗಿ ತಾರ್ಕಿಕ ಅಂತ್ಯ ಕಾಣಬೇಕು. ಒಂದು ವೇಳೆ ರಾಜಿ ಸಂಧಾನ ಸಾಧ್ಯವಾಗದಿದ್ದರೆ ಮಾತ್ರ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಶಾಸನಾತ್ಮಕ ಅವಕಾಶ ದೊರೆತಿದೆ. ಇದು ಕಕ್ಷಿದಾರರ ಪಾಲಿಗೆ "ತೆರೆದ ಭಾಗ್ಯದ ಬಾಗಿಲು" ಎಂದು ಪಾಟೀಲ್ ವಿವರಿಸಿದರು.

ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಒತ್ತು

ನ್ಯಾಯಾಲಯಗಳ ಕಲಾಪಗಳಲ್ಲಿನ ವಿಳಂಬ ಮತ್ತು ಪ್ರಕರಣಗಳ ನಿರಾಕರಿಸುವ ಪದ್ಧತಿಯ ವಿರುದ್ಧ ಈ ತಿದ್ದುಪಡಿಯು ಐತಿಹಾಸಿಕ ಸುಧಾರಣೆಯಾಗಿದೆ. ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳೊಳಗೆ ಯಾವುದೇ ಸಿವಿಲ್ ಪ್ರಕರಣವು ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣುವುದನ್ನು ಈ ಶಾಸನವು ಸುನಿಶ್ಚಿತಗೊಳಿಸುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ದಿನ ಅಥವಾ ಮೊದಲ ವಿಚಾರಣೆಯ ದಿನದಂದೇ ಅಂತಿಮ ತೀರ್ಪು ಅಥವಾ ಆದೇಶದ ದಿನಾಂಕವನ್ನು ನಿರ್ಣಯಿಸುವುದು ಅತ್ಯಂತ ಪರಿಣಾಮಕಾರಿ ಮತ್ತು ಮಹತ್ವದ ನ್ಯಾಯಾಂಗ ಕಾರ್ಯನಿರ್ವಹಣೆಗೆ ಈ ತಿದ್ದುಪಡಿ ಇಂಬು ನೀಡಲಿದೆ ಎಂದು ಸಚಿವರು ತಿಳಿಸಿದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ, ಡಿಸೆಂಬರ್ 17ರಂದು ವಿಧಾನಸಭೆಯಲ್ಲಿ ಮತ್ತು ಡಿಸೆಂಬರ್ 18ರಂದು ವಿಧಾನ ಪರಿಷತ್ತಿನಲ್ಲಿ ಈ ಕಾನೂನನ್ನು ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ಸಂವಿಧಾನದ ಅನುಚ್ಛೇದ 200 ಮತ್ತು 254ರ ಅಡಿಯಲ್ಲಿ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯ್ದಿರಿಸಿದ್ದರು. ರಾಷ್ಟ್ರಪತಿಯವರು ಮೇ 19ರಂದು ಈ ಕಾನೂನಿಗೆ ಅಂಕಿತ ಹಾಕಿದ್ದಾರೆ.

ವಿಚಾರಣೆ ಮತ್ತು ಮುಂದೂಡಿಕೆಗಳಲ್ಲಿ ಕಡಿತ

ಲಿಖಿತ ಹೇಳಿಕೆ, ಸಾಕ್ಷ್ಯ ಸಂಗ್ರಹ ಸೇರಿದಂತೆ ಎಲ್ಲ ಹಂತಗಳಿಗೂ ಕಾಲಮಿತಿ ನಿಗದಿಪಡಿಸಲು ಈ ಶಾಸನ ಅವಕಾಶ ಕಲ್ಪಿಸಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳೊಳಗೆ ಕೇವಲ ಮೂರು ಮುಂದೂಡಿಕೆಗಳು ಅಥವಾ ಮೂರು ದಿನಾಂಕಗಳ ಅವಕಾಶ ಮಾತ್ರ ಕಲ್ಪಿಸಲಾಗುವುದು. ಯಾವುದೇ ಹಂತದಲ್ಲಿ ಅರ್ಜಿದಾರ ಅಥವಾ ಪ್ರತಿವಾದಿ ಈ ಅವಕಾಶದಲ್ಲಿ ತಮ್ಮ ಹೇಳಿಕೆಗಳನ್ನು ಸಲ್ಲಿಸದಿದ್ದರೆ, ಅಂತಹ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲು ಅವಕಾಶ ನೀಡಲಾಗಿದೆ.

ಈ ಹೊಸ ಕಾನೂನು ಪ್ರಕರಣ ನಿರ್ವಹಣೆಯನ್ನು ಪುನರ್ ವ್ಯಾಖ್ಯಾನ ಮಾಡಿದೆ. ಸಾಕ್ಷ್ಯಗಳ ವಿಚಾರಣೆಯನ್ನು ನಿಗದಿತ ದಿನಾಂಕದಂದು ಕೈಗೊಳ್ಳಲು ಮತ್ತು ದೈನಂದಿನ ಅಥವಾ ಸಾಪ್ತಾಹಿಕ ಆಧಾರದಲ್ಲಿ ಇದನ್ನು ನಡೆಸಲು ತಿದ್ದುಪಡಿ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಪ್ರಕರಣವು ಅನಿರ್ದಿಷ್ಟಕಾಲ ವಿಳಂಬಕ್ಕೆ ಕಾರಣವಾಗುವುದಿಲ್ಲ. ನ್ಯಾಯದಾನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಈ ಕಾನೂನು ಅವಕಾಶ ಕಲ್ಪಿಸಿದೆ. ರಾಜ್ಯದ ಕಕ್ಷಿದಾರರ ನ್ಯಾಯಾಲಯಕ್ಕೆ ವೃಥಾ ಅಲೆದಾಟವನ್ನು ತಪ್ಪಿಸಿ, ಆರ್ಥಿಕವಾಗಿ ಕೈಗೆಟಕುವ ರೀತಿಯಲ್ಲಿ ತ್ವರಿತ ನ್ಯಾಯದಾನ ವ್ಯವಸ್ಥೆಯನ್ನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ರೂಪಿಸಿ, ಅನುಷ್ಠಾನಗೊಳಿಸಿದೆ.

ರಾಜ್ಯದ ಕೆಳಹಂತದ ನ್ಯಾಯಾಲಯಗಳಲ್ಲಿ 2023ರ ವೇಳೆಗೆ 9,37,238 ಪ್ರಕರಣಗಳು ಬಾಕಿ ಇವೆ. ಒಟ್ಟಾರೆ 30.49 ಲಕ್ಷ ಸಿವಿಲ್ ಪ್ರಕರಣಗಳು ಬೇರೆ ಬೇರೆ ಹಂತದಲ್ಲಿ ಬಾಕಿ ಉಳಿದಿದ್ದು, ತ್ವರಿತ ನ್ಯಾಯದಾನದಿಂದ ಅನೇಕ ಪ್ರಕರಣಗಳಿಗೆ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ಸಿವಿಲ್ ಪ್ರಕರಣಗಳನ್ನು ಕೋರ್ಟ್‌ಗಳಲ್ಲಿ ದಾವೆ ಹೂಡಿ ಬಗೆಹರಿಸಿಕೊಳ್ಳಬೇಕಿತ್ತು, ಇದು ಅನೇಕ ವರ್ಷಗಳ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿತ್ತು. ಆದರೆ, ಈಗ ಕಾಯ್ದೆಗೆ ತಿದ್ದುಪಡಿ ತಂದಿರುವ ಪರಿಣಾಮ ಮೊದಲು ರಾಜಿ ಸಂಧಾನಕ್ಕೆ ಅವಕಾಶ ದೊರೆಯಲಿದ್ದು, ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ.

Tags:    

Similar News