Weather Alert | ಪೂರ್ವ ಮುಂಗಾರು ಚುರುಕು: ಹಾಸನ, ಕೊಡಗು, ಬಾಗಲಕೋಟೆಯಲ್ಲಿ ಮಳೆ
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗಿದ್ದು, ಸೋಮವಾರ(ಮಾ.24) ಕೂಡ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
ಸೋಮವಾರ ಮಧ್ಯಾಹ್ನ ಹಾಸನ, ಕೊಡಗು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗಿದೆ. ಕೆಲವು ಕಡೆ ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿದ ವರದಿಯಾಗಿದೆ.
ಕೊಡಗಿನಲ್ಲಿ ಮೊದಲ ಮಳೆ
ಕೊಡಗು ಜಿಲ್ಲೆಯಲ್ಲಿ ಈ ವರ್ಷದ ಮೊದಲ ಮಳೆ ಸುರಿದಿದ್ದು, ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಆಲಿಕಲ್ಲು ಮಳೆ ಸುರಿದಿದೆ. ಕಾಫಿ ಬೆಳೆ ಹೂ ಬಿಡುವ ಸಂದರ್ಭದಲ್ಲಿ ಸಕಾಲಿಕ ಮಳೆಯಿಂದಾಗಿ ಬೆಳೆಗಾರರಲ್ಲಿ ಉತ್ತಮ ಫಸಲಿನ ಭರವಸೆ ಮೂಡಿದೆ.
ಹಾಸನದಲ್ಲೂ ಮಳೆ ಅಬ್ಬರ
ಹಾಸನ ಜಿಲ್ಲೆಯಲ್ಲಿ ಕೂಡ ಸೋಮವಾರ ಉತ್ತಮ ಮಳೆಯಾಗಿದ್ದು, ಸಕಲೇಶಪುರ, ಆಲೂರು ಭಾಗದಲ್ಲಿ ತಾಸುಗಟ್ಟಲೆ ಬಿರುಗಾಳಿ ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ನಿತ್ಯವೂ ಹಾಸನ ಜಿಲ್ಲೆಯಲ್ಲಿ ಮಳೆಯಾಗಿದ್ದು ತಾಪಮಾನದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.
ಜಿಲ್ಲೆಯ ಕೆಲವೆಡೆ ಭಾರೀ ಬಿರುಗಾಳಿ ಮಳೆಯಿಂದಾಗಿ ಬಾಳೆ ಮತ್ತು ಅಡಿಕೆ ತೋಟಗಳಿಗೆ ಹಾನಿಯಾಗಿದೆ.
ಭಾರೀ ಬಿರುಗಾಳಿ ಮಳೆಗೆ ಹಾನಿಯಾಗಿರುವ ಬಾಳೆ ತೋಟ
ವಿಜಯಪುರದಲ್ಲಿ ಆಲಿಕಲ್ಲು ಮಳೆ
ಬಿರುಬಿಸಿಲಿನ ನಾಡು ವಿಜಯಪುರದಲ್ಲಿ ಕೂಡ ಸೋಮವಾರ ಮಳೆಯಾಗಿದ್ದು, ಜಿಲ್ಲೆಯ ಬಬಲೇಶ್ವರ ಭಾಗದಲ್ಲಿ ಗುಡುಗು-ಮಿಂಚು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಆದರೆ, ದ್ರಾಕ್ಷಿ, ದಾಳಿಂಬೆ ಮತ್ತು ನಿಂಬೆ ಬೆಳೆಗೆ ಈ ಆಲಿಕಲ್ಲು ಮಳೆ ಮಾರಕವಾಗಿದ್ದು, ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.
ಬಾಗಲಕೋಟೆಯಲ್ಲೂ ಮಳೆ
ಬಾಗಲಕೋಟೆ ಜಿಲ್ಲೆಯಲ್ಲಿ ಕೂಡ ಸೋಮವಾರ ಹಲವೆಡೆ ಮಳೆಯಾದ ವರದಿಗಳಿದ್ದು, ಭಾರೀ ಗಾಳಿಯಿಂದಾಗಿ ಅಲ್ಲಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸಿವೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ, ತೊದಲಬಾಗಿ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ.
ಇನ್ನೂ ಮೂರು ದಿನ ಮಳೆ ಮುನ್ಸೂಚನೆ
ಈ ವಾರ ಇನ್ನೂ ಮೂರು ದಿನ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾ.24 ರಿಂದ 27 ವರೆಗೆ ಮೂರು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.