ಮೆಟ್ರೋ ಪ್ರಯಾಣ ದರ ಏರಿಕೆ ನಂತರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕ ಆಶಿಶ್ ವರ್ಮಾ ನೇತೃತ್ವದ ತಂಡವು, ಪ್ರಯಾಣಿಕರು ʼನಮ್ಮ ಮೆಟ್ರೋʼ ತೊರೆದು ವಾಹನ ಸವಾರಿ ಮಾಡುತ್ತಿರುವುದರಿಂದ ಪರಿಸರದ ಮೇಲೆ ಆದ ಪ್ರಭಾವದ ಬಗ್ಗೆ ಅಧ್ಯಯನ ನಡೆಸುತ್ತಿದೆ.;
ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ.
ಜನರ ಜೀವನಾಡಿ ಎಂದೇ ಎನಿಸಿಕೊಂಡಿರುವ ʻನಮ್ಮ ಮೆಟ್ರೋʼ ಪ್ರಯಾಣ ದರವನ್ನು ದಿಢೀರನೆ ಏರಿಕೆ ಮಾಡಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ. ಆದರೆ ಮೆಟ್ರೋ ಪ್ರಯಾಣಕ್ಕಿಂತ ತಮ್ಮ ಸ್ವಂತ ವಾಹನ ಸವಾರಿಯೇ ಅಗ್ಗ ಎಂದು ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮೆಟ್ರೋದಿಂದ ಇತರ ಸಾರಿಗೆಗಳತ್ತ ಚಿತ್ತ ಹರಿಸಿರುವುದು ಬಹುತೇಕ ಖಚಿತವಾಗಿದೆ.
ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ ಎಂದು ರಾಷ್ಟ್ರೀಯ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರದ ದತ್ತಾಂಶ ವರದಿಯಲ್ಲಿ ತಿಳಿದುಬಂದಿದೆ. ಹಾಗಾಗಿ ಪ್ರಮುಖವಾಗಿ ಸಂಚಾರದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣವನ್ನು ಕಡಿಮೆಗೊಳಿಸುವ ಪ್ರಮುಖ ಉದ್ದೇಶವಿರುವ ʼಹಸಿರು ಸಾರಿಗೆʼ- ನಮ್ಮ ಮೆಟ್ರೋ - ಪ್ರಯಾಣ ದಳ ಹೆಚ್ಚಳ ಕಾರಣಕ್ಕೆ ನಗರದ ಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗಿದೆ.
ಮಟ್ರೋ ದರ ಏರಿಕೆ ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸುಸ್ಥಿರ ಸಾರಿಗೆ ಪ್ರಯೋಗಾಲಯದಲ್ಲಿ ಪ್ರಾಧ್ಯಾಪಕ ಆಶಿಶ್ ವರ್ಮಾ ನೇತೃತ್ವದ ತಂಡವು, ಪ್ರಯಾಣಿಕರು ʼನಮ್ಮ ಮೆಟ್ರೋʼ ತೊರೆದು ವಾಹನ ಸವಾರಿ ಮಾಡುತ್ತಿರುವುದರಿಂದ ಪರಿಸರದ ಮೇಲೆ ಆದ ಪ್ರಭಾವದ ಬಗ್ಗೆ ಅಧ್ಯಯನ ನಡೆಸುತ್ತಿದೆ.
ಸಾರ್ವಜನಿಕ ಸಾರಿಗೆ ಬಿಟ್ಟು ಸ್ವಂತ ವಾಹನಗಳಲ್ಲಿ ಪ್ರಯಾಣ
ಈ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಐಐಎಸ್‌ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸುಸ್ಥಿರ ಸಾರಿಗೆ ಪ್ರಯೋಗಾಲಯ (STL) ಪ್ರೊಫೆಸರ್ ಆಶಿಶ್ ವರ್ಮಾ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಜನರಿಗೆ ಅನುಕೂಲವಾಗುವಂತಿರಬೇಕು. ಮೆಟ್ರೋ ಪ್ರಯಾಣ ದರ ವಿಪರೀತವಾಗಿ ಏರಿಕೆಯಾದ ಪರಿಣಾಮ ಜನರು ಸಾರ್ವಜನಿಕ ಸಾರಿಗೆ ಬಿಟ್ಟು ಇತರ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡಿದ್ದಾರೆ. ಈ ಹಿಂದೆ ಇದ್ದ ಮೆಟ್ರೋ ಪ್ರಯಾಣಿಕರು ನಗರ ಬಸ್‌ಗಳು ಮತ್ತು ದ್ವಿಚಕ್ರ ವಾಹನಗಳು ಮತ್ತು ಕೆಲ ಜನರು ತಮ್ಮ ಕಾರುಗಳಲ್ಲಿ ಓಡಾಡುತ್ತಿದ್ದಾರೆ ಎಂದು ನಾವು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.
ಮೆಟ್ರೋ ಮತ್ತಿತರ ಸಾರಿಗೆ ವ್ಯವಸ್ಥೆಗಳನ್ನು ಬಿಟ್ಟು ತಮ್ಮ ಸ್ವಂತ ವಾಹನಗಳಲ್ಲಿ ಜನರು ಒಡಾಡುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಇದಲ್ಲದೆ ಟ್ರಾಫಿಕ್ ಸಮಸ್ಯೆಗಳು ವಿಪರೀತವಾಗಿ ಹೆಚ್ಚಳವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ಬಸ್, ಮೆಟ್ರೋಗಳ ಸಂಖ್ಯೆ ಹೆಚ್ಚಿಸುವುದು ಉತ್ತಮ
ನಾವೇ (ಐಐಎಸ್‌ಸಿ) ಮಾಡಿರುವ ಅಧ್ಯಯನದ ಪ್ರಕಾರ ಸುರಂಗ ಮಾರ್ಗಗಳು ಹಾಗೂ ಡಬಲ್‌ಡೆಕ್ಕರ್ ರಸ್ತೆಗಳು ಸಾರಿಗೆ ಸಂಸ್ಥೆಗಳಾದ ಬಸ್, ಮೆಟ್ರೋ ಪ್ರಯಾಣದ ಮೇಲೆ ಪರಿಣಾಮ ಬೀರುತ್ತದೆ. ನಮಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವ ಸಂಖ್ಯೆ ಹೆಚ್ಚಾಗಬೇಕು. ಆದರೆ ಇಂಥ ಯೋಜನೆಗಳು ಸಾರಿಗೆ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತದೆ. ಇಂಥ ಯೋಜನೆಗಳು ಅವೈಜ್ಞಾನಿಕತೆಯಿಂದ ಕೂಡಿದೆ. ಇಂಥಹ ಯೋಜನೆಗಳಿಗೆ ಕೋಟಿಗಟ್ಟಲೆ ಹಣವನ್ನು ಸುರಿಯುವ ಬದಲು ಸಾರಿಗೆ ವ್ಯವಸ್ಥೆಗಳಾದ ಬಸ್, ಮೆಟ್ರೋಗಳ ಸಂಖ್ಯೆ ಹೆಚ್ಚಿಸುವುದು ಉತ್ತಮ ಹಾಗೂ ಇದು ವೈಜ್ಞಾನಿಕವೂ ಹೌದು ಎಂದು ಡಾ. ಆಶಿಶ್ ವರ್ಮಾ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಇದಲ್ಲದೆ ವಾಕಿಂಗ್, ಸೈಕ್ಲಿಂಗ್ ಹೆಚ್ಚಾಗಿ ಬಳಬೇಕು. ಸೈಕಲ್ ಲೇನ್‌ಗಳು ವ್ಯವಹಾರ ಕೇಂದ್ರಿತ ಪ್ರದೇಶಗಳಿಗೆ ಸೀಮಿತವಾಗಿವೆ. ಇದನ್ನು ನಗರದಾದ್ಯಂತ ಹೆಚ್ಚಿಸಬೇಕು. ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಗರ ಮೂಲಸೌಕರ್ಯವನ್ನು ಯೋಜಿಸಬೇಕು ಎಂದು ಅವರು ತಿಳಿಸಿದರು.
ಜನರು ಮೆಟ್ರೋ ಬದಲು ರಸ್ತೆ ಸಾರಿಗೆಗಳಾದ ಬಸ್, ದ್ವಿಚಕ್ರವಾಹನ ಮತ್ತು ತಮ್ಮ ಕಾರುಗಳನ್ನು ಬಳಸುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದಲ್ಲದೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯಾಗಿರುವುದನ್ನು ಸಂಶೋಧನೆ ಸಾಬೀತುಗೊಳಿಸಿದೆ. ಮಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಶೇ. 10.5 ರಷ್ಟು ಇಳಿಕೆಯಾಗಿದೆ ಎಂದು ಅಧ್ಯಯನ ಹೇಳಿದೆ.
ಸಾರಿಗೆ ವಲಯದಿಂದ ಶೇಕಡಾ 40 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದ್ದು, ಧೂಳಿನಿಂದ ಶೇ.17 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದೆ. ದರ ಏರಿಕೆ ನಂತರ ಫೆಬ್ರವರಿ 10ರಿಂದ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಇದರಿಂದಾಗಿ ಮೆಟ್ರೋ ಬಿಟ್ಟು ಸ್ವಂತ ವಾಹನದಲ್ಲಿ ಓಡಾಡುವವರ ಸಂಖ್ಯೆ ಅಧಿಕವಾಗಿದೆ. ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI)ದಲ್ಲೂ ಮಾಲಿನ್ಯ ಏರಿಕೆ ಕಂಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತಿಳಿಸಿದೆ.
ಅಂತರ ಏರಿಕೆ
ಉದಾಹರಣೆಗೆ, ಜಯನಗರ 5 ನೇ ಬ್ಲಾಕ್‌ನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲ್ವಿಚಾರಣಾ ಕೇಂದ್ರವು ದರ ಏರಿಕೆಗೆ ಮುನ್ನ, ಬೆಳಿಗ್ಗೆ ಮತ್ತು ಸಂಜೆ ಪೀಕ್ ಅವರ್‌ನಲ್ಲಿ ಸರಾಸರಿ ಪರ್ಟಿಕ್ಯುಲೇಟ್ ಮ್ಯಾಟರ್ 2.5 ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೋಗ್ರಾಂಗಳ ನಡುವೆ ಇತ್ತು ಎಂದು ತೋರಿಸಿದೆ. ಫೆಬ್ರವರಿ 10 ರಂದು 112-114 ಮೈಕ್ರೋಗ್ರಾಂ/ಘನ ಮೀಟರ್‌ಗೆ ಏರಿಕೆ ಕಂಡಿತು ಎಂಬುದನ್ನು ತೋರಿಸಿದೆ.
ಕಡಿಮೆ ಆದಾಯದ ಕುಟುಂಬಗಳಿಗೆ ಪರಿಣಾಮ
ಮಟ್ರೋ ದರ ಏರಿಕೆ ಮಾಡಬೇಕಾದರೆ ದರ ಏರಿಕೆ ಕಮಿಟಿಯವರು ಎಲ್ಲಾ ಆಯಾಮಗಳ ಬಗ್ಗೆ ಗಮನಹರಿಸಬೇಕಿತ್ತು. ವಾಯುಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ಸಾಮಾನ್ಯರ ಸಾಮಾಜಿಕ, ಆರ್ಥಿಕತ ಸ್ಥತಿಗತಿಗಳ ಬಗ್ಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ಕೂಡ ಗಮನದಟ್ಟುಕೊಳ್ಳಬೇಕಿತ್ತು. ಸಾರ್ವಜನಿಕರಿಗೆ ಅನುಕೂಲಕರವಾಗುಂತಹ ಸಾರಿಗೆ ವ್ಯವಸ್ಥೆಗಳೇ ದುಪ್ಪಟ್ಟು ದರ ಏರಿಕೆ ಮಾಡಿದರೆ ಕಡಿಮೆ ಆದಾಯ ಕುಟುಂಬಗಳಿಗೆ ಹೇಗೆ ಪರಿಣಾಮ ಬೀರುತ್ತದೆ. ಕಡಿಮೆ ಆದಾಯದ ಕುಟುಂಬಗಳಿಗೆ ತಮ್ಮ ಕೆಲಸ, ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ, ಜೀವನದ ಅವಶ್ಯಕತೆಗಳು ಇಂಥಹ ದರ ಏರಿಕೆಗಳು ಹೇಗೆ ಪರಿಣಾಮ ಬೀರಬಹುದು ಎಂಬುವುದನ್ನು ಗಮನಹರಿಸಬೇಕಿತ್ತು.
ಸುರಂಗ ಮಾರ್ಗಗಳು, ಫ್ಲೈಓವರ್‌ಗಳು ನಗರವನ್ನು ಇನ್ನಷ್ಟು ಹದಗೆಡಿಸುತ್ತದೆ
ಬೆಂಗಳೂರಿನ ವಾಹನದಟ್ಟಣೆಗಳನ್ನು ಕಡಿಮೆ ಮಾಡಲು ಸುರಂಗ ಮಾರ್ಗಗಳು, ಫ್ಲೈಓವರ್ ಅಥವಾ ಅಂಡರ್‌ಪಾಸ್‌ನಂತಹ ಯೋಜನೆಗಳು ನಾಗರಿಕರಿಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಇದು ನಗರದ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಐಐಎಸ್‌ಸಿ ಅಧ್ಯಯನ ಬೆಟ್ಟುಮಾಡಿದೆ.
ದರ ಹೆಚ್ಚಳ ಹಿನ್ನೆಲೆ
ಫೆ.9 ರಂದು ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಶೇ 50 ರಷ್ಟು ಹೆಚ್ಚಿಸಿದ್ದರು. 30 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಗರಿಷ್ಠ ದರ 60 ರೂ. ಗಳಿಂದ 90 ರೂ.ಗೆ ಏರಿಕೆಯಾಗಿತ್ತು. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಬ್ಯಾಲನ್ಸ್ ಮೊತ್ತವನ್ನು 90 ರೂ.ಗೆ ಏರಿಕೆ ಮಾಡಿತ್ತು.
ಮೆಟ್ರೋ ಪ್ರಯಾಣ ದರವನ್ನು ರಾತ್ರೋರಾತ್ರಿ ಏರಿಸಿದ್ದಲ್ಲದೆ ಅವೈಜ್ಞಾನಿಕವಾಗಿ ಶೇ 70 ರಿಂದ 100 ರವರೆಗೆ ಹೆಚ್ಚಿಸಿದ್ದನ್ನು ಪ್ರಯಾಣಿಕರು ವಿರೋಧಿಸಿದ್ದರು. ಪ್ರಯಾಣಿಕರಿಂದ ಹೆಚ್ಚು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬಿಎಂಆರ್‌ಸಿಎಲ್, ಶೇ 100 ರಷ್ಟು ಏರಿಕೆಯಾಗಿರುವ ಕೆಲ ಸ್ಟೇಜ್‌ಗಳಲ್ಲಿ ಶೇ 10 ರಷ್ಟು ದರ ಇಳಿಕೆ ಮಾಡಿತ್ತು. ಆದರೂ ಬಹಳಷ್ಟು ಸ್ಟೇಜ್‌ಗಳಲ್ಲಿ ಪ್ರಯಾಣ ದರ ಇಳಿಕೆ ಆಗಿರಲಿಲ್ಲ. ಪ್ರಯಾಣಿಕರ ಆಕ್ರೋಶ ಯಥಾಸ್ಥಿತಿ ಮುಂದುವರಿದಿತ್ತು.